ಶುಕ್ರವಾರ, ಆಗಸ್ಟ್ 19, 2022
27 °C
ನಾಲ್ಕು ಸದಸ್ಯರ ಪ್ರಾಧಿಕಾರದಲ್ಲಿ ನಾಗರಿಕ ಸಮಾಜದ ಸದಸ್ಯ ಸ್ಥಾನ ಹಲವು ತಿಂಗಳುಗಳಿಂದ ಖಾಲಿ

ಚಾಮರಾಜನಗರ: ಇದ್ದೂ ಇಲ್ಲದಂತಾದ ಪೊಲೀಸ್‌ ದೂರು ಪ್ರಾಧಿಕಾರ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರದ ನಾಗರಿಕ ಸಮಾಜದ ಸದಸ್ಯರ ಸ್ಥಾನ ಹಲವು ತಿಂಗಳುಗಳಿಂದ ಖಾಲಿ ಇರುವುದರಿಂದ ಪ್ರಾಧಿಕಾರ ಇದ್ದೂ ಇಲ್ಲದಂತಾಗಿದ್ದು, ಸಾರ್ವಜನಿಕರಿಗೆ ಅನನುಕೂಲವಾಗಿದೆ. 

ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಿರುಕುಳ ನೀಡಿದರೆ, ಅವರ ವಿರುದ್ಧ ದೂರು ನೀಡಲು ಅವಕಾಶ ಕಲ್ಪಿಸುವ ಸಲುವಾಗಿ ಸುಪ್ರೀ ಕೋರ್ಟ್‌ ನಿರ್ದೇಶನದಂತೆ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಪೊಲೀಸ್‌ ದೂರು ಪ್ರಾಧಿಕಾರ ರಚನೆ ಮಾಡಲಾಗಿದೆ. 

‘ಕರ್ನಾಟಕ ಪೊಲೀಸ್ ಕಾಯ್ದೆ-1963 ಮತ್ತು ತಿದ್ದುಪಡಿ ಕಾಯ್ದೆ -2012ರ ಕಲಂ 20-ಡಿ’ ಅಡಿಯಲ್ಲಿ 2015ರಲ್ಲಿ ಪ್ರಾಧಿಕಾರಗಳನ್ನು ರಚಿಸಲಾಗಿತ್ತು. 2016ರಲ್ಲಿ ಜಿಲ್ಲೆಯಲ್ಲೂ ಪೊಲೀಸ್‌ ದೂರು ಪ್ರಾಧಿಕಾರ ರಚನೆಯಾಗಿದೆ. ಪ್ರಾಧಿಕಾರದ ನಾಲ್ಕು ಸದಸ್ಯರಲ್ಲಿ ಒಬ್ಬರು ಸಾರ್ವಜನಿಕ ವ್ಯಕ್ತಿ ಇರಬೇಕು. ಈ ಹಿಂದೆ ಇದ್ದ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ಹೊಸ ಸದಸ್ಯರ ನೇಮಕ ಆಗಿಲ್ಲ. ಇದರಿಂದಾಗಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಜನರು ನೀಡುವ ದೂರುಗಳು ವಿಲೇವಾರಿ ಆಗುತ್ತಿಲ್ಲ. ಒಂಬತ್ತು ದೂರುಗಳು ಇತ್ಯರ್ಥಕ್ಕೆ ಬಾಕಿ ಇವೆ.

ಡಿವೈಎಸ್‌ಪಿ ಹಾಗೂ ಅದಕ್ಕಿಂತ ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಗ್ಗೆ ದೂರುಗಳಿದ್ದರೆ ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ನೀಡಬಹುದು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಎಸ್‌ಪಿ) ಹಾಗೂ ಅದಕ್ಕಿಂತ ಮೇಲಿನ ಹುದ್ದೆಯಲ್ಲಿರುವವರ ಬಗ್ಗೆ ದೂರು ಸಲ್ಲಿಸಬೇಕಾದರೆ, ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರ ಸಂಪರ್ಕಿಸಬೇಕು. 

ನಾಲ್ವರು ಸದಸ್ಯರು: ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರವು ನಾಲ್ವರು ಸದಸ್ಯರನ್ನು ಒಳಗೊಂಡಿರುತ್ತದೆ. ಜಿಲ್ಲಾಧಿಕಾರಿ ಇದರ ಅಧ್ಯಕ್ಷರು (ಆರಂಭದಲ್ಲಿ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿದ್ದರು). ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಇನ್ನೊಬ್ಬ ಸದಸ್ಯರು ನಿವೃತ್ತ ನಾಗರಿಕ ಸೇವಾ ಅಧಿಕಾರಿ (ಸರ್ಕಾರದ ಜಂಟಿ ಕಾರ್ಯದರ್ಶಿ ಅಥವಾ ಅದಕ್ಕಿಂತ ಮೇಲಿನ ಹುದ್ದೆ ಅಲಂಕರಿಸಿದವರಾಗಿರಬೇಕು). ನಾಲ್ಕನೇ ಸದಸ್ಯರು ನಾಗರಿಕ ಸಮಾಜದವರು.

ಸಮಾಜದಿಂದ ನೇಮಕಗೊಳ್ಳುವ ಸದಸ್ಯರು ಶಿಕ್ಷಣ, ಆರೋಗ್ಯ ಕ್ಷೇತ್ರ ಹಾಗೂ ಬಡವರ ಏಳಿಗೆಗಾಗಿ ಸೇವೆಗಳನ್ನು ಮಾಡಿರಬೇಕು. ಯಾವುದೇ ರಾಜಕೀಯ ಪಕ್ಷ ಹಾಗೂ ಯಾವುದೇ ಸೈದ್ಧಾಂತಿಕ ಗುಂಪುಗಳೊಂದಿಗೆ ಗುರುತಿಸಿಕೊಂಡಿರಬಾರದು. 

ರಾಜ್ಯ ಸರ್ಕಾರ ನೇಮಕಮಾಡುವ ಮೂರು ಸದಸ್ಯರ ಸಮಿತಿ ನಾಗರಿಕ ಸಮಾಜದ ಸದಸ್ಯನನ್ನು ಆಯ್ಕೆ ಮಾಡುತ್ತದೆ. ಮಾನವ ಹಕ್ಕುಗಳ ಆಯೋಗ, ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಲೋಕಾಯುಕ್ತದ ತಲಾ ಒಬ್ಬರು ಪ್ರತಿನಿಧಿ ಈ ಸಮಿತಿಯಲ್ಲಿರುತ್ತಾರೆ.

ಜನರಿಗೆ ಅನನುಕೂಲ: ‘ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರ ಸಕ್ರಿಯವಾಗದೇ ಇರುವುದರಿಂದ ಜನರಿಗೆ ಅನನುಕೂಲವಾಗಿದೆ. ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪ್ಪು ಮಾಡಿದರೆ ಅವರ ವಿರುದ್ಧ ದೂರು ನೀಡಲು ನಮಗೆ ಅವಕಾಶವೇ ಇಲ್ಲದಂತಾಗಿದೆ. ಕಾಲ ಕಾಲಕ್ಕೆ ಪ್ರಾಧಿಕಾರದ ಮೂಲಕ ದೂರುಗಳು ಇತ್ಯರ್ಥವಾದರೆ, ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಭಯ ಇರುತ್ತದೆ’ ಎಂದು ಸಾಮಾಜಿಕ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜಿಲ್ಲೆಯ ಪ್ರಾಧಿಕಾರದಲ್ಲಿ ಎರಡು ವರ್ಷಗಳಿಂದ ನಾಗರಿಕ ಸಮಾಜದ ಸದಸ್ಯರ ನೇಮಕ ಆಗಿಲ್ಲ. ಹಲವು ದೂರುಗಳು ವಿಲೇವಾರಿಯಾಗಿಲ್ಲ. ಸದಸ್ಯರು ಇಲ್ಲದೇ ಇರುವುದರಿಂದ ಇತ್ಯರ್ಥ ಮಾಡಲು ಆಗಿಲ್ಲ ಎಂದು ಎಸ್‌ಪಿ ಅವರು ಹಿಂಬರಹ ನೀಡುತ್ತಿದ್ದಾರೆ. ಶೀಘ್ರವಾಗಿ ಸದಸ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು, ‘ದೂರು ಪ್ರಾಧಿಕಾರದಲ್ಲಿ ಒಂಬತ್ತು ದೂರುಗಳು ಇತ್ಯರ್ಥಕ್ಕೆ ಬಾಕಿ ಇವೆ. ನಾಗರಿಕ ಸಮಾಜದ ಸದಸ್ಯರೊಬ್ಬರ ನೇಮಕಾತಿ ಆಗಬೇಕಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು