ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ: 22ರಂದು ಮಾದಪ್ಪನ ರಥೋತ್ಸವ

ಮಲೆ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಇಂದು; ಪಾದಯಾತ್ರೆಯಲ್ಲಿ ಬರುವ ಭಕ್ತರು
Last Updated 20 ಮಾರ್ಚ್ 2023, 5:08 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾ ಸ್ಥಳ, ಇತಿಹಾಸ ಪ್ರಸಿದ್ದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರೆಗೆ ಭಾನುವಾರ ಚಾಲನೆ ಸಿಕ್ಕಿದ್ದು, ಯುಗಾದಿ ಹಬ್ಬದ ದಿನ (ಇದೇ 22ರ ಬುಧವಾರ) ಬೆಳಿಗ್ಗೆ‌ ಮಾದಪ್ಪನ ಬ್ರಹ್ಮರಥೋತ್ಸವ ನೆರವೇರಲಿದೆ.

ಈ ವರ್ಷದ ಎರಡನೇ ಜಾತ್ರೆ ಇದಾಗಿದ್ದು, ಮೂರು ದಿನ ನಡೆಯಲಿದೆ. ಮೊದಲ ದಿನವಾದ ಭಾನುವಾರ ಸ್ವಾಮಿಗೆ ವಿಶೇಷ ಪೂಜೆ ‌ನಡೆದವು. ಮುಂಜಾನೆಯಿಂದಲೇ ಅರ್ಚನೆ, ಅಭಿಷೇಕ, ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಜಾತ್ರೆ ಅಂಗವಾಗಿ ಸೋಮವಾರ (ಮಾರ್ಚ್‌ 20) ಎಣ್ಣೆ ಮಜ್ಜನ ಸೇವೆ, ವಿಶೇಷ ಪೂಜೆ ನಡೆಯಲಿವೆ. 21ರಂದು (ಮಂಗಳವಾರ) ಅಮಾವಾಸ್ಯೆ ಪ್ರಯುಕ್ತ ವಿಶೇಷ ಉತ್ಸವ, ಸೇವೆ ನೆರವೇರಲಿವೆ. ಬುಧವಾರ (ಮಾರ್ಚ್‌ 22) ಬೆಳಿಗ್ಗೆ 9.50ರಿಂದ 10.30ರವರೆಗೆ ನಡೆಯುವ ಶುಭ ಲಗ್ನದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರ ಬೆಲ್ಲದ ಆರತಿಯೊಂದಿಗೆ ಪವಾಡ ಪುರುಷ ಮಾದಪ್ಪನ ಮಹಾ ರಥೋತ್ಸವ ನಡೆಯಲಿದೆ.

ಭಕ್ತರ ದಂಡು: ಹಿಂದೂ ಕ್ಯಾಲೆಂಡರ್‌ ಪ್ರಕಾರ ಹೊಸ ವರ್ಷದ ಮೊದಲ ಜಾತ್ರೆಯಲ್ಲಿ ಭಾಗವಹಿಸಲು ಭಕ್ತರ ದಂಡೇ ಬರುತ್ತಿದೆ. ಯುಗಾದಿ ಸಮಯದಲ್ಲಿ ಬೆಟ್ಟಕ್ಕೆ ತಮಿಳುನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಪಾದಯಾತ್ರೆಯಲ್ಲಿ ಬರುವ ಸಂಖ್ಯೆಯೂ ಹೆಚ್ಚಿದೆ. ಎರಡು ದಿನಗಳಿಂದ ಹನೂರು ಮಾರ್ಗವಾಗಿ ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ಸ್ವಾಮಿಯ ದರ್ಶನ ಪಡೆದಿದ್ದಾರೆ.

‘ಯುಗಾದಿ ಜಾತ್ರೆಗೂ ಮುನ್ನ ಮಾದಪ್ಪನ ದರ್ಶನ ಪಡೆಯುವುದಕ್ಕಾಗಿ ನಾಲ್ಕು ದಿನದ ಹಿಂದೆಯೇ ಊರಿನಿಂದ ಪಾದಯಾತ್ರೆ ಹೊರಟಿದ್ದೆವು. ಸ್ವಾಮಿಯ ದರ್ಶನ ಪಡೆದ ನಂತರ ಊರಿಗೆ ಹೋಗಿ ಹಬ್ಬ ಆಚರಿಸುತ್ತೇವೆ’ ಎಂದು ಬೆಂಗಳೂರು ಬಳಿಯ ಅತ್ತಿಬೆಲೆಯಿಂದ ಬಂದಿದ್ದ ಯುವ ಭಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಮೆ ವೀಕ್ಷಣೆ: ಬೆಟ್ಟಕ್ಕೆ ಬರುತ್ತಿರುವ ಭಕ್ತರು ಶನಿವಾರ ಅನಾವರಣಗೊಂಡ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿಯ ಪ್ರತಿಮೆ ವೀಕ್ಷಣೆಗೂ ದಾಂಗುಡಿ ಇಡುತ್ತಿದ್ದಾರೆ.

ಭಕ್ತರಿಗೆ ವ್ಯವಸ್ಥೆ: ಜಾತ್ರಾ ಮಹೋತ್ಸದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ನಿರಂತರ ಅನ್ನದಾಸೋಹದ ವ್ಯವಸ್ಥೆ ಮಾಡಿದೆ.

ಬೈಕ್‌ಗೆ ಅವಕಾಶ

ಶಿವರಾತ್ರಿ ಜಾತ್ರೆ ಸಮಯದಲ್ಲಿ ಬೆಟ್ಟದ ರಸ್ತೆಯಲ್ಲಿ ವಾಹನಗಳ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಜಾತ್ರೆ ನಡೆದ ಐದು ದಿನ ತಾಳಬೆಟ್ಟದಿಂದ ಬೆಟ್ಟದವರೆಗೆ ದ್ಚಿಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.

ಯುಗಾದಿ ಜಾತ್ರಾ ಸಮಯದಲ್ಲಿ ಅಷ್ಟು ವಾಹನಗಳ ದಟ್ಟಣೆ ಇಲ್ಲದಿರುವುದರಿಂದ ಬೈಕ್‌ಗಳಿಗೆ ಅವಕಾಶ ನೀಡಲಾಗಿದೆ.

--

ಯುಗಾದಿ ರಥೋತ್ಸವ, ಜಾತ್ರೆಗೆ ಎಲ್ಲ ಸಿದ್ಧತೆ ನಡೆದಿವೆ. ಭಾನುವಾರದಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ
ಎಸ್‌.ಕಾತ್ಯಾಯಿನಿದೇವಿ, ಪ್ರಾಧಿಕಾರದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT