ಭಾನುವಾರ, ಸೆಪ್ಟೆಂಬರ್ 25, 2022
30 °C

ಅಮೃತ ಸರೋವರ 2ನೇ ಹಂತ: 62 ಕೆರೆ ಅಭಿವೃದ್ಧಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅಮೃತ್ ಸರೋವರ ಕಾರ್ಯಕ್ರಮದಡಿ ಎರಡನೇ ಹಂತದಲ್ಲಿ 62 ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಸೋಮವಾರ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಯ ಜಲಮೂಲಗಳು, ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಅಮೃತ ಸರೋವರ ಕಾರ್ಯಕ್ರಮದಡಿ ಈಗಾಗಲೇ ಮೊದಲನೇ ಹಂತದಲ್ಲಿ 15 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎರಡನೇ ಹಂತದಲ್ಲಿ 62 ಕೆರೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದು ಇದರಲ್ಲಿ ನೀರು ತುಂಬಿರುವ ಮತ್ತು ಖಾಲಿ ಇರುವ ಕೆರೆಗಳನ್ನು ಪಟ್ಟಿ ಮಾಡಿ ಅಭಿವೃದ್ದಿ ಸಂಬಂಧ ವರದಿ ನೀಡಬೇಕು’ ಎಂದು ಸೂಚಿಸಿದರು.

‘ನೀರು ತುಂಬಿರುವ ಮತ್ತು ಖಾಲಿ ಇರುವ ಹಾಗೂ ಪ್ರಮುಖವಾಗಿ ಅರಣ್ಯ ಪ್ರದೇಶಗಳಲ್ಲಿನ ಕೆರೆಗಳನ್ನು ಗುರುತಿಸಬೇಕು. ಕೆರೆಗಳ ಸರ್ವೆ ನಡೆಸಿ ಗಡಿಗಳನ್ನು ಭೂದಾಖಲೆ ಉಪನಿರ್ದೇಶಕರು ಗುರುತಿಸಬೇಕು’ ಎಂದರು. 

‘ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ವತಿಯಿಂದ ಕೆರೆಗಳ ಆವರಣದಲ್ಲಿನ ಗಿಡ-ಗಂಟೆಗಳನ್ನು ತೆರವುಗೊಳಿಸಲು ಅಗತ್ಯ ಕ್ರಮವಹಿಸಬೇಕು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸೇರಿದ ಕೆರೆಗಳ ಕುರಿತು ದಾಖಲಾತಿಗಳ ಸಮೇತ ಸಂಪೂರ್ಣ ಮಾಹಿತಿ ಸಿದ್ದಪಡಿಸಿಕೊಳ್ಳಬೇಕು. ಈ ಬಗ್ಗೆ ಪ್ರತ್ಯೇಕ ಕಡತ ನಿರ್ವಹಿಸಿ ಮೇಲ್ವಿಚಾರಣೆ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಣ್ಣ ನೀರಾವರಿ ಇಲಾಖೆ, ಬೃಹತ್ ನೀರಾವರಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕೆರೆಗಳ ಪಟ್ಟಿ ಮಾಡಬೇಕು. ಕೆರೆಗಳ ಸಮೀಕ್ಷೆಗೆ ಬೇಕಿರುವ ಜಿ.ಪಿ.ಎಸ್ ಉಪಕರಣಗಳನ್ನು ಖರೀದಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಇಬ್ರಾಹಿಂ ಅವರಿಗೆ ಗಾಯಿತ್ರಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೂಡೂರು ಭೀಮಸೇನ, ಮುಖ್ಯ ಯೋನಾಧಿಕಾರಿ ಪ್ರಭುಸ್ವಾಮಿ, ಸಹಾಯಕ ಯೋಜನಾಧಿಕಾರಿ ಪ್ರೇಮ್ ಕುಮಾರ್, ಭೂ ದಾಖಲೆಗಳ ಉಪನಿರ್ದೇಶಕಿ ವಿದ್ಯಾಯಿನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹೇಶ್, ಉಮೇಶ್, ಪೂರ್ಣಿಮಾ, ಶ್ರೀಕಂಠರಾಜೇಅರಸ್, ಶ್ರೀನಿವಾಸ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು