ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: 21 ಮಾದರಿ ಗ್ರಾ.ಪಂ. ಅಭಿವೃದ್ಧಿಗೆ ಪಣ

ಚಾಮರಾಜನಗರ: ಸರ್ಕಾರಿ ಶಾಲೆಗಳ ಅಭಿವೃದ್ಧಿ, ಜಲ ಸಂರಕ್ಷಣೆ–ರಾಜ್ಯದಲ್ಲಿ ಮೊದಲ ಪ್ರಯತ್ನ
Last Updated 30 ಆಗಸ್ಟ್ 2020, 20:00 IST
ಅಕ್ಷರ ಗಾತ್ರ
ADVERTISEMENT
"ಹರ್ಷಲ್‌ ಭೋಯರ್‌ ನಾರಾಯಣ ರಾವ್‌"

ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಅಡಿಯಲ್ಲಿ ಗಡಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಅಭಿವೃದ್ಧಿ ಪಡಿಸಲು, ಜಿಲ್ಲಾ ಪಂಚಾಯಿತಿ ಯೋಜನೆ ‌ರೂಪಿಸಿದೆ.

ಸೆ. 1ರಂದು ಈ ಯೋಜನೆ ಜಾರಿಗೆ ಬರಲಿದ್ದು, ಮೊದಲ ಹಂತದಲ್ಲಿ 21 ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಲು ನಿರ್ಧರಿಸಿದೆ. ರಾಜ್ಯದಲ್ಲೇ ಇದು ಮೊದಲ ಪ್ರಯತ್ನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕುಗಳಲ್ಲಿ ತಲಾ ಐದು, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ತಲಾ ಮೂರು ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೋಯರ್‌ ನಾರಾಯಣರಾವ್‌ ಅವರ ಪರಿಕಲ್ಪನೆಯ ಈ ಯೋಜನೆಯ ನೀಲನಕ್ಷೆ ಸಿದ್ಧವಾಗಿದೆ.

ಯೋಜನೆಯ ಅಡಿಯಲ್ಲಿಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಶಾಲೆಗಳ ಅಭಿವೃದ್ಧಿ, ಮಳೆ ನೀರು ಸಂಗ್ರಹ, ಅಂತರ್ಜಲ ಮರುಪೂರಣ, ರೈತರಿಗೆ ಅನುಕೂಲವಾಗುವ ಕಾಮಗಾರಿಗಳು ನಡೆಯಲಿವೆ.

‘ಜಿಲ್ಲೆಯಲ್ಲಿ 130 ಗ್ರಾಮ ಪಂಚಾಯಿತಿಗಳಿವೆ. ಇದರಲ್ಲಿ 21 ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಕಾಮಗಾರಿಗಳನ್ನು ನಾಲ್ಕು ತಿಂಗಳಲ್ಲಿ ಮುಗಿಸುವ ಗುರಿ ಹೊಂದಲಾಗಿದೆ’ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆ ಅಭಿವೃದ್ಧಿ, ಜಲಸಂರಕ್ಷಣೆಗೆ ಒತ್ತು: ಪ್ರತಿ ಗ್ರಾಮ ಪಂಚಾಯಿತಿಯ ಎರಡು ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ (ವೆಚ್ಚ ತಲಾ ₹1.40 ಲಕ್ಷ), ಎಲ್ಲ ಶಾಲೆಗಳಲ್ಲಿ ತರಕಾರಿ/ಕೈತೋಟ ನಿರ್ಮಾಣ (₹60 ಸಾವಿರ), ಎರಡು ಶಾಲೆಗಳಿಗೆ ಆಟದ ಮೈದಾನ/ಕಾಂಪೌಂಡ್‌ (ತಲಾ ₹5 ಲಕ್ಷದಿಂದ–₹10 ಲಕ್ಷ) ನಿರ್ಮಾಣವಾಗಲಿದೆ.

ಜಿ.ಪಂ. ಸಿಇಒ ಹರ್ಷಲ್‌ ಭೋಯರ್ ನಾರಾಯಣ ರಾವ್

'ನಾವು ಸರ್ಕಾರಿ ಶಾಲೆಗಳನ್ನು ಕೇಂದ್ರೀಕರಿಸಿ, ಮಕ್ಕಳ ಆಟೋಟ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಕ್ರೀಡಾಂಗಣಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ರಾಜ್ಯದಾದ್ಯಂತ ನರೇಗಾ ಅಡಿ ವಿವಿಧ ಪ್ರಯತ್ನಗಳು ನಡೆಯುತ್ತಿವೆ. ನಾವು ಇಲ್ಲಿ ಸಾಮುದಾಯಿಕ ಅಭಿವೃದ್ಧಿಯ ಗುರಿ ಇಟ್ಟುಕೊಂಡು ಯೋಜನೆ ರೂಪಿಸಿದ್ದೇವೆ' ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೋಯರ್ ನಾರಾಯಣ ರಾವ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

‘ಆರಂಭದಲ್ಲಿ 21 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ‌ ಮಾಡಿಕೊಂಡಿದ್ದೇವೆ. ನಂತರ ಎಲ್ಲ ಕಡೆಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು’ ಎಂದು ಅವರು ಹೇಳಿದರು.

ಇತರ ಕಾಮಗಾರಿಗಳು

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಎರಡು ಚೆಕ್‌ ಡ್ಯಾಂ (ತಲಾ ₹58,200), ಗ್ರಾಮ ಪಂಚಾಯಿತಿಗೆ ಎರಡರಂತೆ 100 ಕೊಳವೆ ಬಾವಿಗಳಿಗೆ ಜಲಮರುಪೂರಣ ವ್ಯವಸ್ಥೆ (ತಲಾ ₹68 ಸಾವಿರ), ಸ್ವಸಹಾಯ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಶೆಡ್‌ (₹13.25 ಲಕ್ಷ), ನರೇಗಾ ಫಲಾನುಭವಿಯೊಬ್ಬರಿಗೆ ಕೋಳಿ ಸಾಕಣೆ ಶೆಡ್‌ (₹40 ಸಾವಿರ), ತಲಾ ಐವರು ರೈತರಿಗೆ ಎಳೆಹುಳ ಗೊಬ್ಬರ ತಯಾರಿಸುವ ಪಿಟ್‌ (ತಲಾ 33 ಸಾವಿರ), ಅಜೋಲಾ ಬೆಳೆಯಲು ಗುಂಡಿ (ತಲಾ 12 ಸಾವಿರ), ಜಾಗದ ಲಭ್ಯತೆಗೆ ಅನುಗುಣವಾಗಿ ವೈಯಕ್ತಿಕ ಫಲಾನುಭವಿಗಳಿಗೆ ಅಥವಾ ಸಮುದಾಯಕ್ಕೆ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಹಾಯಿಸಲು ಐದರಿಂದ 10 ಗುಂಡಿಗಳ ನಿರ್ಮಾಣದ (ತಲಾ ₹17 ಸಾವಿರ) ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಜಿಲ್ಲಾ ಪಂಚಾಯಿತಿ ಉದ್ದೇಶಿಸಿದೆ.

ಯೋಜನೆಗೆ ಆಯ್ಕೆ ಮಾಡಿರುವ ಗ್ರಾಮಗಳು

ಚಾಮರಾಜನಗರ ತಾಲ್ಲೂಕು: ಭೋಗಾಪುರ, ಮಂಗಲ, ಸಂತೇಮರಹಳ್ಳಿ, ಕುಲಗಾಣ, ಅರಕಲವಾಡಿ

ಗುಂಡ್ಲುಪೇಟೆ ತಾಲ್ಲೂಕು: ಹಂಗಳ, ನಿಟ್ರೆ, ಕೆಲಸೂರು, ಬರಗಿ, ವಡ್ಡಗೆರೆ

ಹನೂರು ತಾಲ್ಲೂಕು: ಎಲ್ಲೆಮಾಳ, ಲೊಕ್ಕನಹಳ್ಳಿ, ಶಾಗ್ಯ, ಮಾರ್ಟಳ್ಳಿ, ದಿನ್ನಹಳ್ಳಿ

ಕೊಳ್ಳೇಗಾಲ ತಾಲ್ಲೂಕು: ಕುಂತೂರು, ಚಿಕ್ಕಲ್ಲೂರು, ಮಧುವಿನಹಳ್ಳಿ

ಯಳಂದೂರು ತಾಲ್ಲೂಕು:ಮಾಂಬಳ್ಳಿ, ಕೆಸ್ತೂರು, ಗುಂಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT