ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಲಸಿಕೆ ಉತ್ಸವಕ್ಕೆ ಚಾಲನೆ

ಈ ವರೆಗೆ 1.01 ಲಕ್ಷ ಜನರಿಗೆ ಲಸಿಕೆ, ಸ್ವಯಂಪ್ರೇರಿತರಾಗಿ ಹಾಕಿಸಿಕೊಳ್ಳಲು ಮನವಿ
Last Updated 11 ಏಪ್ರಿಲ್ 2021, 14:37 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲೂ ಭಾನುವಾರ ಲಸಿಕಾ ಉತ್ಸವಕ್ಕೆ ಚಾಲನೆ ನೀಡಲಾಯಿತು. 14ರವರೆಗೆ ಉತ್ಸವ ನಡೆಯಲಿದೆ.

ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಇತರೆ ಆಸ್ಪತ್ರೆಗಳಲ್ಲಿ ಇರುವ ಲಸಿಕಾ ಕೇಂದ್ರಗಳಲ್ಲಿ ಉತ್ಸವ ಆರಂಭವಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿರುವ ಲಸಿಕಾ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಅವರು ಲಸಿಕಾ ಉತ್ಸವ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಕೋವಿಡ್‌ ತಡೆಗೆ ಲಸಿಕೆಯನ್ನು ಹಾಕಿಸಿಕೊಳ್ಳಲು ಉತ್ತೇಜಿಸುವ ಸಲುವಾಗಿ ನಾಲ್ಕು ದಿನಗಳ ಕಾಲ ಲಸಿಕಾ ಉತ್ಸವ ಆಯೋಜಿಸಲಾಗಿದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರೂ ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು’ ಎಂದರು.

‘ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾಕಷ್ಟು ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಹೋಬಳಿ ಕೇಂದ್ರಗಳನ್ನು ಕೇಂದ್ರಿಕರಿಸಿಕೊಂಡು ಲಸಿಕಾ ಕಾರ್ನರ್‌ಗಳನ್ನು ತೆರೆದಿದ್ದು, ಇಲ್ಲಿಯೂ ಕೋವಿಡ್ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ’ ಎಂದರು.

ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ವಿಶ್ವೇಶರಯ್ಯ ಅವರು ಮಾತನಾಡಿ, ‘ಕೊರೊನಾ ವೈರಸ್‌ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಲಸಿಕೆ ಪಡೆಯಬೇಕು. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಅನೇಕ ಇಲಾಖೆಗಳು, ಆರೋಗ್ಯ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದಾರೆ. ಎಲ್ಲರೂ ಸೇರಿ ಲಸಿಕಾ ಉತ್ಸವವನ್ನು ಯಶಸ್ವಿಗೊಳಿಸಬೇಕು’ ಎಂದರು.

ಪ್ರಚಾರಕ್ಕೆ ಚಾಲನೆ: ಲಸಿಕಾ ಉತ್ಸವದ ಅಂಗವಾಗಿ ನಗರಸಭೆ ವತಿಯಿಂದ ಲಸಿಕೆ ಪಡೆಯಲು ಜಾಗೃತಿ ಮೂಡಿಸುವ ವಿಶೇಷ ಪ್ರಚಾರ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಅವರು ಚಾಮರಾಜೇಶ್ವರ ದೇವಾಲಯದ ಬಳಿ ಚಾಲನೆ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಕ ಶರವಣ, ಕಿರಿಯ ಆರೋಗ್ಯ ನಿರೀಕ್ಷಕ ಪ್ರಸಾದ್, ಮಂಜು ಸೇರಿದಂತೆ ಇತರರು ಇದ್ದರು.

ಲಕ್ಷ ದಾಟಿದ ಲಸಿಕೆ ವಿತರಣೆ

ಈ ಮಧ್ಯೆ, ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಇದುವರೆಗೆ ‌ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ.

ಜನವರಿ 16ರಂದು ಲಸಿಕೆ ವಿತರಣೆಗೆ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ವೈದ್ಯರು ಹಾಗೂ ಇತರ ಆರೋಗ್ಯ ಕಾರ್ಯಕರ್ತರಿಗೆ ನಂತರ ಕಂದಾಯ, ಪೊಲೀಸ್, ನಗರಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿ ಸಿಬ್ಬಂದಿಗೆ ನೀಡಲಾಗಿತ್ತು.

ಮಾರ್ಚ್ 1ರಿಂದ 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಿಸುವ ಅಭಿಯಾನ ಕೈಗೊಳ್ಳಲಾಗಿತ್ತು. ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನ ನಡೆಯುತ್ತಿದೆ.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರು 2,97,000 ಮಂದಿ ಇದ್ದಾರೆ. ಈ ಪೈಕಿ 45 ರಿಂದ 59 ವರ್ಷ ವಯಸ್ಸಿನವರು 1,96,530 ಜನರಿದ್ದಾರೆ. 60 ವರ್ಷ ಮೇಲ್ಪಟ್ಟವರು 1,00,470 ಜನರಿದ್ದಾರೆ. ಏಪ್ರಿಲ್ 10ರವರೆಗೆ ಜಿಲ್ಲೆಯಲ್ಲಿ ಒಟ್ಟು 1,01,586 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

ಇದುವರೆಗೆ 10,601 ಆರೋಗ್ಯ ಕಾರ್ಯಕರ್ತರು, 4,301 ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. 45 ರಿಂದ 59 ರ ವಯೋಮಾನದವರು 27,707 ಹಾಗೂ 60 ವರ್ಷ ಮೇಲ್ಪಟ್ಟರು 58,977 ಲಸಿಕೆ ಹಾಕಿಸಿಕೊಂಡಿದ್ದಾರೆ.

ಜಿಲ್ಲೆಯ ಜನರುಕೋವಿಡ್ ಲಸಿಕಾ ಅಭಿಯಾನಕ್ಕೆ ಬೆಂಬಲ ನೀಡುವ ಮೂಲಕ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT