ಜಿಲ್ಲೆಯಲ್ಲಿ ₹1,957 ಕೋಟಿ ಕೃಷಿ ಸಾಲ

7
ಸಾಲ ಮನ್ನಾ ನಿರೀಕ್ಷೆಯಲ್ಲಿ ರೈತರು, ಸಾಲ ಮರುಪಾವತಿಗೆ ತೋರುತ್ತಿಲ್ಲ ಉತ್ಸಾ‌ಹ

ಜಿಲ್ಲೆಯಲ್ಲಿ ₹1,957 ಕೋಟಿ ಕೃಷಿ ಸಾಲ

Published:
Updated:

ಚಾಮರಾಜನಗರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರ್‌ಸ್ವಾಮಿ ಅವರು ಬಜೆಟ್‌ ಮಂಡನೆಗೆ ಸಿದ್ಧತೆ ನಡೆಸಿರುವಂತೆಯೇ ಜಿಲ್ಲೆಯ ಕೃಷಿಕರಲ್ಲಿ ಸಾಲಮನ್ನಾ ಘೋಷಣೆಯ ಬಗ್ಗೆ ನಿರೀಕ್ಷೆ ಗರಿಗೆದರಿದೆ.

ಕೃಷಿ ಮಾಡುವುದಕ್ಕಾಗಿ, ಜಿಲ್ಲೆಯ ರೈತರು ರಾಷ್ಟ್ರೀಕೃತ, ಖಾಸಗಿ ಮತ್ತು ಸಹಕಾರ ಬ್ಯಾಂಕುಗಳಲ್ಲಿ ಒಟ್ಟು ₹1,957.29 ಕೋಟಿ ಸಾಲ ಮಾಡಿದ್ದಾರೆ. 2018ರ ಮಾರ್ಚ್‌ 31ವರೆಗಿನ ಅಂಕಿ ಅಂಶಗಳ ಪ್ರಕಾರ, ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಖಾಸಗಿ ಬ್ಯಾಂಕ್‌ಗಳ ಮೊತ್ತ ₹1,635.3 ಕೋಟಿ. ಸಹಕಾರ ಬ್ಯಾಂಕ್‌ಗಳಲ್ಲಿ (ಕಾವೇರಿ ಗ್ರಾಮೀಣ ಬ್ಯಾಂಕ್‌ ಸೇರಿ) ₹ 321.‌99 ಸಾಲ ಇದೆ.

ಬ್ಯಾಂಕ್‌ನಲ್ಲಿ ವಹಿವಾಟು ಇಲ್ಲ: ಎಲ್ಲ ರೀತಿಯ ಕೃಷಿ ಸಾಲ ಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ರೈತರು, ಸಾಲ ಮರುಪಾವತಿಗಾಗಿ ಬ್ಯಾಂಕ್‌ಗಳಿ‌ಗೆ ಹೋಗುತ್ತಿಲ್ಲ. ಹಾಗಾಗಿ, ಕೃಷಿಗೆ ಸಂಬಂಧಿಸಿದ ದೊಡ್ಡ ಮಟ್ಟಿನ ವಹಿವಾಟು ಯಾವುದೇ ಬ್ಯಾಂಕ್‌ಗಳಲ್ಲಿ ನಡೆಯುತ್ತಿಲ್ಲ. ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳಿಗೆ ಇದು ದೊಡ್ಡ ಪ್ರಮಾಣದ ಸಮಸ್ಯೆಯಾಗಿಲ್ಲ. ಆದರೆ‌, ಸ್ಥಳೀಯವಾಗಿ ಕೃಷಿಕರನ್ನೇ ಅವಲಂಬಿಸಿ ಕಾರ್ಯನಿರ್ವಹಿಸುವ ಸಹಕಾರಿ ಬ್ಯಾಂಕ್‌ಗಳಿಗೆ ಇದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

‘ಅಲ್ಪಾವಧಿ ಬೆಳೆ ಸಾಲ ತೀರಿಸಿ, ರೈತರು ಹೊಸದಾಗಿ ಸಾಲ (ರಿನಿವಲ್‌) ತೆಗೆದುಕೊಳ್ಳಬೇಕು. ಆದರೆ, ಯಾವ ರೈತರೂ ಬ್ಯಾಂಕ್‌ಗಳಿಗೆ ಬರುತ್ತಿಲ್ಲ. ಉದಾಹರಣೆಗೆ ತಂಬಾಕು ವಾಣಿಜ್ಯ ಬೆಳೆ, ಅದಕ್ಕೆ ಒಳ್ಳೆಯ ಬೆಲೆಯೂ ಸಿಗುತ್ತಿದೆ. ಆದರೆ, ಅದರ ಬೆಳೆಗಾರರು ಕೂಡ ಸಾಲ ಮರುಪಾವತಿ ಮಾಡುತ್ತಿಲ್ಲ’ ಎಂದು ಕಾವೇರಿ ಗ್ರಾಮೀಣ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಸ್ತವದಲ್ಲಿ ಅಲ್ಪಾವಧಿ ಬೆಳೆಸಾಲಗಳನ್ನು ಸರಿಯಾದ ಸಮಯಕ್ಕೆ ಪಾವತಿಸಿದರೆ, ರೈತರಿಗೆ ಬೋನಸ್‌ನಂತಹ ಕೆಲವು ಅನುಕೂಲಗಳಿವೆ. ಆದರೆ, ಸಾಲಮನ್ನಾದ ನಿರೀಕ್ಷೆಯಲ್ಲಿರುವ ಅವರು ಸಾಲ ಮರುಪಾವತಿಸಲು ಮುಂದಾಗುತ್ತಿಲ್ಲ. ಸದ್ಯದ ಕೃಷಿ ಕೆಲಸಗಳಿಗಾಗಿ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಿದ್ದಾರೆ’ ಎಂದು ಅವರು ಹೇಳಿದರು.

ರೈತರು ಬೆಳೆಸಾಲವನ್ನು ನವೀಕರಣ ಮಾಡಲು ಬ್ಯಾಂಕ್‌ಗಳಿಗೆ ಹೋಗುತ್ತಿಲ್ಲ ಎಂಬುದನ್ನು ರೈತಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ಒಪ್ಪುತ್ತಾರೆ. ‘ಸಾಲ ಮನ್ನಾಕ್ಕೂ, ಹೊಸ ಕೃಷಿ ಸಾಲ ಪಡೆಯುವುದಕ್ಕೂ ಯಾವುದೇ ಸಂಬಂಧ ಇಲ್ಲ. ಬ್ಯಾಂಕುಗಳು ಹೊಸ ಸಾಲ ಕೊಡಲೇ ಬೇಕು. ಆದರೆ, ರೈತರು ಈಗಾಗಲೇ ಮಾಡಿದ ಸಾಲವನ್ನು ಪಾವತಿಸಿದರೆ, ಬ್ಯಾಂಕ್‌ಗಳು ಹೊಸ ಸಾಲ ಕೊಡುತ್ತವೆ. ಆದರೆ, ಮುಖ್ಯಮಂತ್ರಿ ಅವರು ಸಾಲ ಮನ್ನಾ ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ರೈತರು ಬ್ಯಾಂಕುಗಳಿಗೆ ಹೋಗು‌ತ್ತಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !