ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಆಲಿಕಲ್ಲು ಸಹಿತ ಮಳೆ

Last Updated 30 ಮಾರ್ಚ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಶುಕ್ರವಾರ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಮೊಳಕಾಲ್ಮುರಿನಲ್ಲಿ ಸಿಡಿಲಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ರಾಜಧಾನಿಯಲ್ಲಿ ಮಧ್ಯಾಹ್ನವೇ ಮೋಡ ಕವಿದ ವಾತಾವರಣ ಉಂಟಾಗಿದ್ದು, ಸಂಜೆ ವೇಳೆಗೆ ಬಿರುಗಾಳಿ ಬೀಸಲಾರಂಭಿಸಿತು. ಇದರಿಂದ ಸಾಕಷ್ಟು ಭಾಗಗಳಲ್ಲಿ ಮರಗಳು ಧರೆಗುರುಳಿದವು.

ಗುಡುಗಿನ ಆರ್ಭಟದೊಂದಿಗೆ ಪ್ರಾರಂಭವಾದ ಮಳೆ ಸತತ ಒಂದು ತಾಸು ಸುರಿಯಿತು. ಪೂರ್ವ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿದ್ದವು.

ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ 1.30 ಆಲಿಕಲ್ಲು ಮಳೆ ಪ್ರಾರಂಭವಾಗಿದ್ದು, ಸುಮಾರು ಮುಕ್ಕಾಲು ತಾಸು ಬಿರುಸಿನ ವರ್ಷಧಾರೆಯಾಗಿದೆ. ಗಾಳಿಯಿಂದಾಗಿ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದವು. 11 ಮಿ.ಮೀ ಮಳೆ ದಾಖಲಾಗಿದೆ. ಇಂದಾವರ, ಕೂದುವಳ್ಳಿ, ಕೈಮರ, ದಾಸರಹಳ್ಳಿ, ಹಿರೇಕೊಳಲೆ, ಕೆಳಗೂರು, ಆಲ್ದೂರು, ಬೈಗೂರು, ಕೆ.ಆರ್‌.ಪೇಟೆ, ಮೂಡಿಗೆರೆ ತಾಲ್ಲೂಕಿನ ಹಲವೆಡೆ ಮಳೆಯಾಗಿದೆ.

ಮೊಳಕಾಲ್ಮುರು  ತಾಲ್ಲೂಕಿನ ಹಿರೇಕೆರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳವಾರಹಳ್ಳಿಯ ತಿಪ್ಪೇಸ್ವಾಮಿ (20) ಅವರು ಸಮೀಪದ ಅರಣ್ಯಕ್ಕೆ ಮೇಕೆ ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದಿದೆ.

ಬಿರು ಬಿಸಿಲಿನಿಂದ ಬಸವಳಿದಿದ್ದ ಮಾಲೂರು ಪಟ್ಟಣದಲ್ಲೂ ಅರ್ಧಗಂಟೆಗೂ ಹೆಚ್ಚು ನಿಮಿಷ ಆಲಿಕಲ್ಲು ಸಹಿತ ಮಳೆಯಾಗಿದೆ. ಹಗಲಲ್ಲಿ ನೆತ್ತಿ ಸುಡುವಷ್ಟು ಬಿಸಿಲು ಇದ್ದರೂ ಮಧ್ಯಾಹ್ನದ ವೇಳೆಗೆ ಮೋಡ ಕವಿದು ತುಂತುರು ಹನಿ ಬಿದ್ದಿತ್ತು.

ಕಾವೇರಿ ಕಣಿವೆ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಹಾಸನ ಜಿಲ್ಲೆಯ ಗಂಡಸಿಯಲ್ಲಿ ಸಿಡಿಲಿಗೆ ಎರಡು ಹಸುಗಳು ಮೃತಪಟ್ಟಿವೆ. ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕಿನಲ್ಲಿ ಮಳೆ ಸುರಿದಿದೆ.

ಧರೆಗುರುಳಿದ ಮರಗಳು: ಕೊಡಗು ಜಿಲ್ಲೆಯ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಸಹಿತ ಮಳೆ ಸುರಿಯಿತು. ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಅಂಗಡಿಗಳಿಗೆ ನೀರು ನುಗ್ಗಿತು. ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಮರಗಳು ಧರೆಗುರುಳಿವೆ. ಕೆಲವು ಕಡೆ ವಿದ್ಯುತ್ ಕಂಬಗಳು ಉರುಳಿದ್ದು, ಕೆಲಕಾಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ ಕೆಲವೆಡೆ ಬಿರುಗಾಳಿ, ಆಲಿಕಲ್ಲು ಮಳೆಗೆ ದ್ರಾಕ್ಷಿ ಫಸಲು ಮಣ್ಣುಪಾಲಾಯಿತು. ತಾಲ್ಲೂಕಿನ ಹೊಸಹೂಡ್ಯ, ಗಿಡ್ನಳ್ಳಿ, ಯಲ್ಲಹಳ್ಳಿ, ರಾಮಚಂದ್ರ ಹೊಸೂರು ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು, ಅಪ್ಪೆಗೌಡನಹಳ್ಳಿ, ಮೇಲೂರು, ಮಳ್ಳೂರಿನಲ್ಲಿ ಬೆಳೆಗಳು ನೆಲಕಚ್ಚಿವೆ. ಹೊಸಹೂಡ್ಯದಲ್ಲಿ ರೈತ ಸುರೇಶ್ ಅವರ ಜಮೀನಿನಲ್ಲಿ ನಿರ್ಮಿಸಿದ್ದ ಪಾಲಿಹೌಸ್ ಹಾಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT