ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆ ಕಾರ್ಯ: ಎಚ್ಚರಿಕೆ ವಹಿಸಲು ಸೂಚನೆ

ಮತಎಣಿಕೆ ಕಾರ್ಯ ಕುರಿತ ತರಬೇತಿ ಕಾರ್ಯಕ್ರಮ
Last Updated 9 ಮೇ 2018, 12:55 IST
ಅಕ್ಷರ ಗಾತ್ರ

ಕೊಪ್ಪಳ: ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 15ರಂದು ನಡೆಯಲಿದ್ದು, ಮತ ಎಣಿಕೆಗೆ ನಿಯೋಜಿಸಲಾದ ಅಧಿಕಾರಿಗಳು, ಆಯೋಗ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ಸೆಕ್ಟರ್ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತಎಣಿಕೆ ಸಹಾಯಕ ಅಧಿಕಾರಿಗಳಿಗೆ ಮತಎಣಿಕೆ ಕಾರ್ಯ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ಸೇರಿದಂತೆ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಸಲಾಗುವುದು. ಈಗಾಗಲೆ ಮತ ಎಣಿಕೆ ಕೇಂದ್ರ ಸಜ್ಜುಗೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಅಲ್ಲದೆ ಇವಿಎಂ ಸ್ಟ್ರಾಂಗ್ ರೂಮ್‍ಗಳನ್ನು ಸ್ಥಾಪಿಸಲಾಗಿದೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 17 ಜನ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕರನ್ನು ನೇಮಿಸಲಾಗುವುದು. ಪ್ರತಿ ಕ್ಷೇತ್ರಕ್ಕೆ ಮತ ಎಣಿಕೆಗಾಗಿ 14 ಟೇಬಲ್‍ನಂತೆ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಅಂದಾಜು 16 ರಿಂದ 20 ಸುತ್ತುಗಳಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಬೇಕಾಗಿದ್ದು, ಮತ ಎಣಿಕಾ ಕಾರ್ಯಕ್ಕಾಗಿ ನಿಯೋಜಿಸಲಾದ ಅಧಿಕಾರಿಗಳು ಮೇ. 15ರಂದು ಬೆಳಿಗ್ಗೆ 5ಕ್ಕೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ, ಬೆಳಿಗ್ಗೆ 5-30ಕ್ಕೆ ವರದಿ ಮಾಡಿಕೊಳ್ಳಬೇಕು ಎಂದರು.

ಮೊದಲಿಗೆ ಬೆಳಿಗ್ಗೆ 8ಕ್ಕೆ ಸರಿಯಾಗಿ ಪೋಸ್ಟಲ್ ಮತಗಳ ಎಣಿಕೆ ಕ್ಷೇತ್ರ ಚುನಾವಣಾಧಿಕಾರಿ ಟೇಬಲ್‍ನಲ್ಲಿ ಆರಂಭಗೊಂಡು, ಉಳಿದಂತೆ ಮತಗಟ್ಟೆಗಳಲ್ಲಿ ಇವಿಎಂ ಮೂಲಕ ದಾಖಲಾದ ಮತಗಳ ಎಣಿಕೆ ಕಾರ್ಯ ಆರಂಭವಾಗುತ್ತದೆ. ಮತ ಎಣಿಕೆ ಕಾರ್ಯದಲ್ಲಿ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯನ್ನ ಪಾಲಿಸಬೇಕು. ಯಾವುದೇ ತೊಂದರೆ ಉಂಟಾದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ ಮಾತನಾಡಿ, ಮತ ಎಣಿಕೆ ಕಾರ್ಯದಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಎಂದರು. ಚುನಾವಣಾ ವೆಚ್ಚದ ಜಿಲ್ಲಾ ನೋಡಲ್ ಅಧಿಕಾರಿ ವಾಗೀಶ್ ಇದ್ದರು.

**
ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಅಲ್ಲದೆ ಇವಿಎಂ ಸ್ಟ್ರಾಂಗ್ ರೂಮ್‍ಗಳನ್ನು ಸ್ಥಾಪಿಸಲಾಗಿದೆ
ಎಂ.ಕನಗವಲ್ಲಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT