ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ಎದುರಿಸಲಾಗದವರಿಂದ ಆರೋಪ

ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
Last Updated 9 ಮೇ 2018, 12:58 IST
ಅಕ್ಷರ ಗಾತ್ರ

ಗಂಗಾವತಿ: ವ್ಯಾಪಾರಕ್ಕಾಗಿ ಗದಗದಿಂದ ಗಂಗಾವತಿಗೆ ಬಂದ ಪರಣ್ಣ ಮುನವಳ್ಳಿ ರಾಜಕೀಯ ಪ್ರವೇಶಕ್ಕಿಂತಲೂ ಮೊದಲು ಸಹಕಾರ ಕ್ಷೇತ್ರ, ಸಾಮಾಜಿಕ ಸೇವೆ ಮೂಲಕ ಗುರುತಿಸಿಕೊಂಡವರು. ಮುನವಳ್ಳಿ ಅವರು 2008ರಿಂದ 2013ರ ಅವಧಿಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಶಾಸಕರಾದರು. ಮತ್ತೊಂದು ವಿಧಾನಸಭಾ ಚುನಾವಣೆಗೆ ಗಂಗಾವತಿ ಮತ ಕ್ಷೇತ್ರದಿಂದ ಆಯ್ಕೆ ಬಯಸಿ ಅಖಾಡಕ್ಕಿಳಿದ್ದಿದ್ದಾರೆ. ಕ್ಷೇತ್ರದಲ್ಲಿನ ಚಿತ್ರಣದ ಬಗ್ಗೆ, ಅವರ ಮಾತಿನಲ್ಲೆ ಹೇಳುವುದಾದರೆ....

ಪ್ರಬಲ ಪೈಪೋಟಿ ಮಧ್ಯೆ ಟಿಕೆಟ್ ಗಿಟ್ಟಿಸಿಕೊಂಡಿದ್ದು ಹೇಗೆ?

ಹಿರಿಯರ ಅಭಿಲಾಷೆ, ಸಮೀಕ್ಷೆ, ಕ್ಷೇತ್ರದ ಜನರ ಅಭಿಪ್ರಾಯ ನನ್ನ ಪರವಾಗಿದ್ದರಿಂದ ಸಹಜವಾಗಿ ಟಿಕೆಟ್ ಲಭಿಸಿದೆ. ಎಷ್ಟೇ ಜನ ಅಕಾಂಕ್ಷಿಗಳಿದ್ದರೂ ಈಗ ಎಲ್ಲರೂ ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುತ್ತಿದ್ದೇವೆ. ನನ್ನ ಗೆಲುವಿಗಿಂತ ಮುಖ್ಯವಾಗಿ ಪಕ್ಷ ಅಧಿಕಾರಕ್ಕೆ ತರಬೇಕು ಎಂಬ ತುಡಿತ ಪ್ರತಿಯೊಬ್ಬ ಕಾರ್ಯಕರ್ತರಲ್ಲಿದೆ.

ಕ್ಷೇತ್ರದಲ್ಲಿ ಹಣ, ಜಾತಿ, ಮದ್ಯದ ಲಾಬಿ ಇದೆಯೆಂಬ ಆರೋಪವಿದೆ. ಹೇಗೆ ಸೆಣಸುವಿರಿ?

ಯಾರೇ ಹಣ, ಮದ್ಯ ಹಂಚಿದರೂ ಜನರಲ್ಲಿ ಒಂದು ಸ್ಪಷ್ಟ ಅಭಿಪ್ರಾಯವಿದೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು ಎಂಬ ಭಾವನೆ ಆಳವಾಗಿ ಬೇರೂರಿದೆ. ಹಣದ ವಿಚಾರದಲ್ಲಿ ನನ್ನ ಪ್ರತಿಸ್ಪರ್ಧಿ ಸ್ವಲ್ಪ ಮುಂದಿದ್ದರೂ ಜನ ಹಣ, ಆಸ್ತಿ, ಅಂತಸ್ತು ನೋಡುವುದಿಲ್ಲ. ನಂಬಿಕೆ, ಪ್ರೀತಿ, ವಿಶ್ವಾಸ ಮುಖ್ಯ.

ಶಾಸಕ ಇಕ್ಬಾಲ್ ಅನ್ಸಾರಿ ನಿಮ್ಮನ್ನಷ್ಟೆ ಗುರಿಯಾಗಿಸಿಕೊಂಡು ಆರೋಪ, ಟೀಕೆ, ವಾಗ್ದಾಳಿ ನಡೆಸುವುದು ಏಕೆ?

ನನ್ನ ಮತ್ತು ಅನ್ಸಾರಿ ಮಧ್ಯೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಬಿಜೆಪಿಯಿಂದ ಟಿಕೆಟ್ ಮುನವಳ್ಳಿಗೆ ಸಿಕ್ಕರೆ ಪ್ರಬಲ ಪ್ರತಿಸ್ಪರ್ಧಿಯಾಗುತ್ತಾರೆ ಎಂಬ ಭಯ ಅವರಲ್ಲಿದೆ. ಅವರು ಈ ರೀತಿ ಟೀಕಾಸ್ತ್ರ ಬಳಸುತ್ತಿದ್ದಾರೆ.

ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗಿವೆ. ರಕ್ಷಣೆಗೆ ಮುಖಂಡರು ಧಾವಿಸುತ್ತಿಲ್ಲ ಎಂಬ ಅಸಮಾಧಾನ ಇದೆಯಲ್ಲ?

ಈ ವಿಚಾರದಲ್ಲಿ ತುಂಬಾ ನೋವಿದೆ. ಹಿಂದೂ- ಮುಸ್ಲಿಂ ಸಮಾಜದ ಅಮಾಯಕ ಯುವಕರ ಮೇಲೆ ರಾಜಕೀಯ ಪ್ರೇರಿತ ದೂರು ದಾಖಲಾಗಿವೆ. ಪ್ರತಿ ತಿಂಗಳು, ವಾರಗಳ ಕಾಲ ಯುವಕರು ನ್ಯಾಯಾಲಯದ ಆವರಣದಲ್ಲಿ ಅಲೆದಾಡುವುದು ನೋಡಿದರೆ ಖೇದವಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸುಳ್ಳು ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ.

ಪರಣ್ಣ ಪರ್ಸಂಟೇಜ್ ಪಡೆದಿದ್ದಾರೆ. ಲೆಟರ್ ಪ್ಯಾಡ್ ಮಾರಿಕೊಂಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರಲ್ಲ?

ನನ್ನನ್ನು ನೇರ ಮಾರ್ಗದಲ್ಲಿ ಎದುರಿಸಲು ಸಾಧ್ಯವಾಗದವರು ಈ ರೀತಿ ಆರೋಪ ಮಾಡುತ್ತಾರೆ. ಆರೋಪ ಮಾಡುವವರು ತಾಕತ್ತಿದ್ದರೆ ಒಂದೇ ಒಂದು ಪ್ರಕರಣ ಸಾಬೀತು ಮಾಡಲಿ. ವಾಸ್ತವಾಗಿ ಪರ್ಸಂಟೇಜ್ ತಿಂದವರು ಶಾಸಕರು ಮತ್ತು ಅವರ ಹಿಂಬಾಲಕರು. ಅನ್ಸಾರಿ ಅವರ ನಾಲ್ಕೈದು ಜನ ಹಿಂಬಾಲಕರ ಆಸ್ತಿ ಕೇವಲ ಐದು ವರ್ಷದಲ್ಲಿ ಹತ್ತು, ನೂರು ಪಟ್ಟು ಹೆಚ್ಚಾಗಿದೆ. ಇದೆಲ್ಲವೂ ಎಲ್ಲಿಂದ ಬಂತು? 

ಸಂಘ ಪರಿವಾರದೊಂದಿಗೆ ಸೇರಿ ಪರಣ್ಣ ಕೋಮು ಸಾಮರಸ್ಯ ಕದಡುತ್ತಿದ್ದಾರೆ ಎಂಬ ಆರೋಪವಿದೆ?

2008ರಿಂದ 2018ರವರೆಗೂ ದಾಖಲೆ ತೆಗೆಯಿರಿ. 2008ರಿಂದ 2013 ರವರೆಗಿನ ಗಲಭೆ, ಆ ಬಳಿಕ 2013ರಿಂದ 2018 ರವರೆಗಿನ ದಾಖಲೆ ಗಮನಿಸಿ. ಯಾರ ಅಧಿಕಾರವಧಿಯಲ್ಲಿ ಹೆಚ್ಚು ಗಲಭೆಯಾಗಿವೆ ಎಂಬುವುದು ಜನರಿಗೆ ಗೊತ್ತಿದೆ. ಗಲಭೆಗಳನ್ನು ನಿಯಂತ್ರಿಸಬೇಕಿರುವುದು ಆಡಳಿತ ನಡೆಸುವ ಶಾಸಕರಲ್ಲವೆ?. ಜಾತಿ ಗಲಭೆಗಳಿಗೆ ಮುಖ್ಯ ಕಾರಣ ಇಕ್ಬಾಲ್ ಅನ್ಸಾರಿ.

ಯಾವ ಕಾರಣಕ್ಕಾಗಿ ಜನ ನಿಮ್ಮನ್ನು ಆಯ್ಕೆ ಮಾಡಬೇಕು?

5 ವರ್ಷ ಶಾಸಕನಾಗಿದ್ದೆ. ಆ ಬಳಿಕ ಪರಾಭವಗೊಂಡಿದ್ದೇನೆ. ಆದರೆ ಇಂದಿಗೂ ಹತ್ತು ವರ್ಷದ ಹಿಂದೆ ಜನ ತೋರುತ್ತಿದ್ದ ಪ್ರೀತಿ ವಿಶ್ವಾಸದಲ್ಲಿ ಕಿಂಚಿತ್ ಕಡಿಮೆಯಾಗಿಲ್ಲ. ಜನರ ಸಮಸ್ಯೆಗೆ ಇಂದಿಗೂ ಸ್ಪಂದಿಸುತ್ತೇನೆ. ಪರಾಭವಗೊಂಡಿದ್ದೇನೆ ಎಂಬ ಕಾರಣಕ್ಕೆ ಪಲಾಯನ ಮಾಡಿಲ್ಲ.

ಎಂ.ಜೆ. ಶ್ರೀನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT