ಅಪಾಯ ಆಹ್ವಾನಿಸುವ ಛಲದಂಕ ಮಲ್ಲರು!

7
ಪರಂಪರಾಗತ ಸಾಹಸ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಬಳ್ಳಾರಿ ಪೈಲ್ವಾನರು

ಅಪಾಯ ಆಹ್ವಾನಿಸುವ ಛಲದಂಕ ಮಲ್ಲರು!

Published:
Updated:
Deccan Herald

ಯಳಂದೂರು: ಮಣ ಭಾರದ ಚಕ್ಕಡಿಯ ಎರಡು ಚಕ್ರಗಳನ್ನು ಗರಗರನೇ ಎರಡೂ ಕೈಗಳಿಂದ ಸುತ್ತಿಸುವುದು, ಎದೆಯ ಮೇಲೆ ನೂರು ಕೆಜಿಗೂ ಹೆಚ್ಚು ತೂಕದ ಕಲ್ಲುಗಳನ್ನು ಜೋಪಿಟ್ಟುಕೊಳ್ಳುವುದು, ಭಾರದ ಒಕ್ಕಣೆಯ ಗುಂಡುಕಲ್ಲನ್ನು ದೇಹದ ಮೇಲೆ ಹರಿಸಿಕೊಳ್ಳುವುದು, ಬಂಡೆ ಕಲ್ಲನ್ನು ತಮ್ಮ ಕರದಿಂದಲೇ ಅಪ್ಪಳಿಸಿ ಪುಡಿ ಮಾಡುವುದು ಇವರಿಗೆ ಸಲೀಸು!

ಪಟ್ಟಣ ಹಾಗೂ ಗ್ರಾಮಗಳಲ್ಲಿ ಇಂತಹ ಸಾಹಸ ಯಾತ್ರೆಗೆ ಟೊಂಕ ಕಟ್ಟಿ ದಕ್ಷಿಣ ಭಾರತದಾದ್ಯಂತ ಮನೆ ಮಾತಾಗಿರುವ ಇವರು ತಮ್ಮ ಜನ್ಮದಾತ ಕಲೆಯನ್ನು ಪ್ರದರ್ಶಿಸುವ ಮೂಲಕ ಗುರುತಾಗಿದ್ದಾರೆ. ಇವರೇ, ಬಳ್ಳಾರಿ ಬಾಬುಗಳು. ಇತ್ತೀಚಿಗೆ ಪಟ್ಟಣದ ಜಹಗೀರ್ದಾರ್ ಬಂಗಲೆ ಮುಂಭಾಗ ಇವರ ತಂಡ ಪ್ರಸ್ತುತ ಪಡಿಸಿದ ಕರಾಮತ್ತು ನೋಡುಗರನ್ನು ದಂಗುಬಡಿಸಿತ್ತು. 

ನಿಂತಲ್ಲಿ ನಿಲ್ಲದ ಇವರು ಬಿಸಿಲನಾಡು ಬಳ್ಳಾರಿ ಜಿಲ್ಲೆಯವರು. ಮಹಮ್ಮದ್ ಪೈಲ್ವಾನ್ ಇವರ ಕ್ಯಾಪ್ಟನ್‌. ತಂಡವಾಗಿ ಇವರು ಪಟ್ಟಣದಲ್ಲಿ ನಡೆಸಿಕೊಟ್ಟ ದೈಹಿಕ ಕಸರತ್ತುಗಳು ಕೆಲಕಾಲ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಪರಂಪರಾನುಗತವಾಗಿ ಬಂದಿರುವ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ  ಸಾರ್ವಜನಿಕರ ಮುಂದೆ ಪ್ರದರ್ಶಿಸುವುದು ಇವರ ನಿತ್ಯ ಕಾಯಕ. 

‘ಪ್ರತಿನಿತ್ಯ ನಮ್ಮದು ಅಲೆಮಾರಿ ಜೀವನ. ಜನಸಂದಣಿ ಹೆಚ್ಚು ಸೇರುವ ನಗರ, ಪಟ್ಟಣ, ಗ್ರಾಮಗಳನ್ನು ತಮ್ಮ ಸಾಹಸ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಳ್ಳಬೇಕು. ವಿವಿಧ ದೈಹಿಕ ಕಸರತ್ತು ಮತ್ತು ಸಾಹಸಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕು. ಅಪಾಯ ಲೆಕ್ಕಿಸದೆ ಜನಮನ ಗೆದ್ದರೆ ಅವರು ನೀಡುವ ಪುಡಿಗಾಸು ನಮ್ಮ ಜೀವನ ರೂಪಿಸಿಕೊಳ್ಳಲು ಬಳಕೆಯಾಗುತ್ತದೆ’ ಎನ್ನುವ ಜಲಾಲ್‌, ‘ಬದಲಿ ಉದ್ಯೋಗ ನಮಗೆ ಒಗ್ಗದು’ ಎನ್ನುತ್ತಾರೆ. 

‘ಬಾಲ್ಯದಲ್ಲಿ ತಾತ, ಮುತ್ತಾತ, ತಂದೆಯವರು ಊರೂರುಗಳಲ್ಲಿ ಮಾಡುತ್ತಿದ್ದ ಅನೌಪಚಾರಿಕ ಕಲೆ ನನಗೂ ಒಲಿದಿದೆ. ದೇಹ ದಂಡನೆಗೆ ತಕ್ಕಂತೆ ನಿತ್ಯ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಪ್ರದರ್ಶನ ಮುಗಿದ ನಂತರ ನಾವೇ ತಯಾರಿಸುವ ಶಮನಕಾರಿ ಆಯುರ್ವೇದ ಔಷಧಿಯನ್ನು ಮಾರಾಟ ಮಾಡುತ್ತೇವೆ. ಇದೇ ನಮ್ಮ ಆದಾಯದ ಮೂಲ. ಸಿಕ್ಕಷ್ಟರಿಂದಲೇ ಜೀವನ ನಿರ್ವಹಣೆ ಸಾಗಿಸುವ ಅನಿವಾರ್ಯತೆ ಇದೆ. ಕುಟುಂಬದ ಎಲ್ಲಾ ಸದಸ್ಯರನ್ನು ಪೋಷಣೆ ಮಾಡಬೇಕಾದ
ಜವಾಬ್ದಾರಿಯೂ ಸೇರಿದೆ. ಹೀಗಾಗಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲೂ ನಮ್ಮ ಕ್ಲಿಷ್ಟ ಕಲೆಯನ್ನು ವೀಕ್ಷಿಸಿ ಮೆಚ್ಚುವವರು ಇದ್ದಾರೆ’ ಎನ್ನುತ್ತಾರೆ ಸದಸ್ಯ ಎಂ.ಬಿ. ಬಷೀರ್. 

‘ಅನೇಕ ಅಧಿಕಾರಿಗಳು, ಚಿತ್ರನಟರು, ರಾಜಕೀಯ ಮುಖಂಡರು ನಮಗೆ ಬೆನ್ನು ತಟ್ಟುವ ಕೆಲಸವನ್ನು ಮಾಡಿದ್ದಾರೆ. ಇಂತಹ ಚಟುವಟಿಕೆಗಳಿಗೆ ದೇಹವನ್ನು ಹುರಿಗೊಳಿಸಬೇಕಾಗುತ್ತದೆ. ಏಕಾಗ್ರತೆಯೇ ನಮ್ಮ ಪ್ರಮುಖ ಅಸ್ತ್ರ. ನಮ್ಮ ಪರಿಕರಗಳನ್ನು ಸಾಗಿಸಲು ಸ್ವಂತ ವಾಹನವನ್ನು ಹೋದೆಡೆ ಕೊಂಡೊಯ್ಯಬೇಕು. 6 ರಿಂದ 7 ಮಂದಿ ಸದಸ್ಯರು ಸದಾ ನಮ್ಮ ತಂಡದಲ್ಲಿ ಇರಲೇಬೇಕು. ಒಮ್ಮೊಮ್ಮೆ ನಮ್ಮ ಸಂಪಾದನೆಗಿಂತ ಖರ್ಚು ಅಧಿಕವಾಗುವುದು ಉಂಟು. ಆದರೆ, ಅಭಿಮಾನಿಗಳ ಚಪ್ಪಾಳೆ ನಡುವೆ ಹುಮ್ಮಸ್ಸು ಮತ್ತು ಉತ್ಸಾಹ ಇಮ್ಮಡಿಯಾಗುತ್ತದೆ. ಆಗ ಹಣ ನೆನಪಿಗೆ ಬರುವುದಿಲ್ಲ. ಯಾವಾಗಲೂ ಹಣದಿಂದಲೇ ನಮ್ಮನ್ನು ಅಳೆದುಕೊಳ್ಳಬಾರದಲ್ವೇ’ ಎಂದು ಕಳಕಳಿ ವ್ಯಕ್ತಪಡಿಸುತ್ತಾರೆ ತಂಡದ ಮಹಮ್ಮದ್. 

ಸಾಹಸದ ನಡುವೆ ಆಯ ತಪ್ಪದಂತೆ ಎಚ್ಚರ ವಹಿಸಬೇಕು. ಗುಂಡಿನ ಭಾರ ತಡೆದುಕೊಳ್ಳುವಲ್ಲಿ ಯೋಗ ಮತ್ತು ಧ್ಯಾನವು ಮುಖ್ಯ. ನಮ್ಮ ಆಟವನ್ನು ನೋಡಿ ಮಕ್ಕಳು ಮತ್ತು ಯುವಕರು ಅನುಕರಿಸಬಾರದು
ಎಂ.ಬಿ. ಬಷೀರ್, ಹೂವಿನಹಡಗಲಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !