ಮಕ್ಕಳ ಕೌಶಲ ವೃದ್ಧಿಗೆ ಅಟಲ್‌ ಟಿಂಕರಿಂಗ್‌ ಲ್ಯಾಬ್‌

7
ಎಂಸಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಜಿಲ್ಲೆಯ ಮೊದಲ ಪ್ರಯೋಗಾಲಯ ಸ್ಥಾಪನೆ

ಮಕ್ಕಳ ಕೌಶಲ ವೃದ್ಧಿಗೆ ಅಟಲ್‌ ಟಿಂಕರಿಂಗ್‌ ಲ್ಯಾಬ್‌

Published:
Updated:
Deccan Herald

ಚಾಮರಾಜನಗರ: ಮಕ್ಕಳನ್ನು ಕೌಶಲಪಟುಗಳನ್ನಾಗಿ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ಚಾಮರಾಜನಗರದಲ್ಲಿ ಆರಂಭವಾಗಿದೆ.

ಪಟ್ಟಣದ ಸಮೀಪದ ಸೋಮವಾರ ಪೇಟೆಯ ಎಂಸಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಜಿಲ್ಲೆಯ ಮೊದಲ ಅಟಲ್‌ ಟಿಂಕರಿಂಗ್‌ ಪ್ರಾಯೋಗಾಲಯ ಸ್ಥಾಪನೆಯಾಗಿದೆ. 6ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಲ್ಲಿ ತಾಂತ್ರಿಕ, ಡಿಜಿಟಲ್‌ ಕೌಶಲವನ್ನು ಹೆಚ್ಚಿಸುವ ಉದ್ದೇಶ ಈ ಪ್ರಯೋಗಾಲಯದ್ದು. 

ಅನುದಾನ: ಕೇಂದ್ರ ಸರ್ಕಾರವು ದೇಶದ 1,500 ಶಾಲೆಗಳಲ್ಲಿ ಈ ಅತ್ಯಾಧುನಿಕ ಪ್ರಯೋಗಾಲಯವನ್ನು ಸ್ಥಾಪಿಸಿದ್ದು, ಜಿಲ್ಲೆಯಲ್ಲಿ ಎಂಸಿಎಸ್‌ ಪಬ್ಲಿಕ್‌ ಶಾಲೆಗೆ ಪ್ರಯೋಗಾಲಯ ಲಭ್ಯವಾಗಿದೆ.

ಇದು 5 ಶೈಕ್ಷಣಿಕ ವರ್ಷಗಳ ಯೋಜನೆಯಾಗಿದ್ದು, ಕೇಂದ್ರವು ₹20 ಲಕ್ಷ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತದೆ. ಮೊದಲ ಹಂತದಲ್ಲಿ ಬಿಡುಗಡೆಯಾದ ₹12 ಲಕ್ಷದಲ್ಲಿ ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ₹10 ಲಕ್ಷ ಪರಿಕರಗಳ ಖರೀದಿಗೆ ಮತ್ತು ₹2 ಲಕ್ಷ  ಪ್ರಸಕ್ತ ಸಾಲಿನ ನಿರ್ವಹಣೆಗೆ ವ್ಯಯವಾಗಿದೆ. ಉಳಿದ ₹8 ಲಕ್ಷವನ್ನು ನಾಲ್ಕು ವರ್ಷಗಳ ಕಾಲ ತಲಾ ₹2 ಲಕ್ಷದಂತೆ ನಿರ್ವಹಣೆಗೆ ಕೇಂದ್ರ ಬಿಡುಗಡೆ ಮಾಡಲಿದೆ. 

ಲ್ಯಾಬ್‌ನಲ್ಲಿ ಏನಿದೆ?: ರೋಬೋಟಿಕ್ಸ್, ಗಣಿತವಿಜ್ಞಾನ, ವಿಜ್ಞಾನ ಮತ್ತು 3ಡಿ ಕಂಪ್ಯೂಟರ್‌, ಎಲ್‌ಇಡಿ ಪ್ರೊಜೆಕ್ಟರ್, ಲ್ಯಾಪ್‌ಟಾಪ್‌ ಹಾಗೂ ಇವುಗಳಿಗೆ ಸಂಬಂಧಿಸಿದ ಸಾಧನಗಳು ಇಲ್ಲಿವೆ.

ಪ್ರಯೋಜನಗಳು: ವಿದ್ಯಾರ್ಥಿಗಳು ಎಸ್‌ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ) ವಿಷಯಗಳ ಕಡೆಗೆ ಹೆಚ್ಚು ಗಮನ ಹರಿಸಲು ಅನುಕೂಲವಾಗುವಂತೆ ಪ್ರಯೋಗಾಲಯವನ್ನು ರೂಪಿಸಲಾಗಿದೆ.  ನೀವೇ ಸ್ವತಃ ಮಾಡಿಕೊಳ್ಳಿ (ಡು ಇಟ್‌ ಯುವರ್‌ಸೆಲ್ಫ್‌) ಎಂಬ ಧ್ಯೇಯದೊಂದಿಗೆ ಮಕ್ಕಳಿಗೆ ಇಲ್ಲಿ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. 

‘ಐದು ವರ್ಷಗಳ ಬಳಿಕ ಶಾಲೆಯು ಪ್ರಯೋಗಾಲಯವನ್ನು ಯಾವ ರೀತಿ ನಿರ್ವಹಿಸಿದೆ ಎಂಬುದನ್ನು ಪರಿಶೀಲಿಸಿದ ನಂತರ ಅನುದಾನ ಮುಂದುವರಿಸಬೇಕೇ, ಬೇಡವೇ ಎಂಬ ಬಗ್ಗೆ  ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ’ ಎಂದು ಶಾಲೆಯ ಪ್ರಾಂಶುಪಾಲ ಆರ್.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳಾವಕಾಶ ಬೇಕು: ‘ಪ್ರಯೋಗಾಲಯ ಮಂಜೂರಾತಿಗೂ ಮೊದಲು ಸೂಕ್ತ ಸ್ಥಳ ಹಾಗೂ ಇನ್ನಿತರ ಮೂಲಸೌಲಭ್ಯ ಶಾಲೆಯಲ್ಲಿರಬೇಕು. 1,800ರಿಂದ 2 ಸಾವಿರ ಚದರ ಅಡಿಗಳಷ್ಟು ಕೊಠಡಿ ಹಾಗೂ ಎಲೆಕ್ಟ್ರಾನಿಕ್‌ ವ್ಯವಸ್ಥೆ ಪೂರ್ಣಗೊಂಡ ಬಳಿಕವೇ ಮಂಜೂರಾತಿಗೆ ಅವಕಾಶ ನೀಡುತ್ತದೆ. ಆರಂಭದಲ್ಲಿ ₹6ರಿಂದ ₹10ಲಕ್ಷ ವೆಚ್ಚವಾಗಲಿದೆ. ಈ ಹಣವನ್ನು ಶಾಲೆಯೇ ಭರಿಸಬೇಕು’ ಎಂದು ಅವರು ಹೇಳಿದರು.

‘ನಾವು ಈ ವರ್ಷದ ಜನವರಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದೆವು. 8 ತಿಂಗಳಿಗೆ ಮಂಜೂರಾತಿ ದೊರೆಯಿತು. 6ನೇ ತರಗತಿಯಿಂದ 10ನೇ ತರಗತಿಯ 40 ವಿದ್ಯಾರ್ಥಿಗಳ ತಂಡ ಪ್ರತಿ 5 ಮಂದಿಯ ಗುಂಪಿನಲ್ಲಿ ಭೌತ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಪ್ರಯೋಗಗಳನ್ನು ವಾರಕ್ಕೊಮ್ಮೆ 2ರಿಂದ 3 ಗಂಟೆಗಳ ಅವಧಿಯಲ್ಲಿ ನಡೆಸುತ್ತಾರೆ. ಆಯಾ ವಿಷಯಕ್ಕೆ ಸಂಬಂಧಿಸಿದ ಶಿಕ್ಷಕರು ಪ್ರಯೋಗ ಕುರಿತು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ’ ಎಂದು ವಿವರಿಸಿದರು.

‘ಆಟದೊಂದಿಗೆ ವಿಜ್ಞಾನ ಕಲಿಕೆ’

‘ಶಿಕ್ಷಕರು ಜೊತೆಗಿದ್ದು ಪ್ರಯೋಗವನ್ನು ತಿಳಿಸಿಕೊಡುತ್ತಾರೆ. ಸುಲಭವಾಗಿ ಹಾಗೂ ಉತ್ತಮವಾಗಿ ಪ್ರಯೋಗ ಮಾಡಲು ನನಗೆ ಸಹಕಾರಿಯಾಗಿದೆ. ಆಟದೊಂದಿಗೆ ವಿಜ್ಞಾನ ಕಲಿಯುವ ಹೊಸ ಅನುಭವವಾಯಿತು’ ಎಂದು ವಿದ್ಯಾರ್ಥಿನಿ ಪವಿತ್ರಾ ‘ಪ್ರಜಾವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಳು.

ಸುಲಭದ ಪ್ರಯೋಗ: ‘ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯ ಸುಸಜ್ಜಿತವಾಗಿದೆ. ಪ್ರಯೋಗ ಮಾಡುವುದು ಹೊಸ ಅನುಭವ ನೀಡುತ್ತಿದೆ. ಪ್ರಯೋಗಗಳನ್ನು ಸ್ವಂತವಾಗಿ ಮಾಡುವ ಧೈರ್ಯ ಈಗ ಬಂದಿದೆ’ ಎಂಬುದು ವಿದ್ಯಾರ್ಥಿ ಸುಮಂತ್‌ ಪಟೇಲ್‌ ಮಾತು.

‘ಕೇಂದ್ರ ಸರ್ಕಾರದ ನೇರ ಯೋಜನೆ’

‘ಇದು ಕೇಂದ್ರ ಸರ್ಕಾರದ ನೇರ ಯೋಜನೆಯಾಗಿದೆ. ಒಂದು ಖಾಸಗಿ ಕಂಪನಿ ಮೂಲಕ ಪರಿಕರಗಳನ್ನು ತರಿಸಿಕೊಂಡು ಪ್ರಯೋಗಾಲಯ ಸ್ಥಾಪಿಸಲಾಗುತ್ತದೆ. ಸರ್ಕಾರಿ, ಖಾಸಗಿ ಹಾಗೂ ಟ್ರಸ್ಟ್‌ಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ನಮ್ಮ ಇಲಾಖೆಯಿಂದ ಯಾವುದೇ ಅನುದಾನ ನೀಡುವುದಿಲ್ಲ’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !