ಭಾನುವಾರ, ಮಾರ್ಚ್ 29, 2020
19 °C
ಚಾಮರಾಜನಗರದಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ ; ಹಣ ಸಂಗ್ರಹಿಸಿ ನೆರವಿನ ಹಸ್ತ

ಸ್ನೇಹ, ಸೌಹಾರ್ದ ಸಾರಿದ ಮುಸ್ಲಿಮರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್‌ (ಈದ್‌ ಉಲ್‌ ಅಧಾ) ಹಬ್ಬವನ್ನು ಮುಸ್ಲಿಮರು ಚಾಮರಾಜನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಭಕ್ತಿ ಭಾವದಿಂದ ಆಚರಿಸಿದರು.

ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಸಾವಿರಾರು ಮುಸ್ಲಿಮರು ಸೋಮವಾರಪೇಟೆಯ ಜಾಮಿಯಾ ಅಹಲೆ ಹದೀಶ್ ಈದ್ಗಾ ಮೈದಾನ, ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಸಮೀಪವಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮನೆಗೆ ತೆರಳಿ ಹಿರಿಯರಿಂದ ಆಶೀರ್ವಾದ ಪಡೆದರು.

ಚಿಣ್ಣರ ಸಂಭ್ರಮ: ಪ್ರವಾದಿ ಹಜರತ್‌ ಇಬ್ರಾಹಿಂ ಅವರು ತಮ್ಮ ಮಗನನ್ನು ಬಲಿಗಾಗಿ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ದೇವರು ‘ಮಗನ ಬದಲು ಕುರಿ–ಮೇಕೆಯನ್ನು ಬಲಿ ಕೊಡು’ ಎಂದಾಗ ಪ್ರವಾದಿಗೆ ಸಂತಸವಾಗುತ್ತದೆ. ಹಾಗಾಗಿ ಇದು ಪುತ್ರ ವಾತ್ಸಲ್ಯ ನೆನಪು ಮಾಡುವ ಹಬ್ಬ ಎಂದೇ ಜನಜನಿತ.

ಬಕ್ರೀದ್‌ನಂದು ಪೋಷಕರು ಮಕ್ಕಳಿಗೆ ಹೊಸ ಬಟ್ಟೆ ತೊಡಿಸಿ, ಅವರ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಹೊಸ ದಿರಿಸಿನಲ್ಲಿ ಕಂಗೊಳಿಸುತ್ತಿದ್ದ ಚಿಣ್ಣರು, ತಂದೆ, ತಾಯಿ ಹಾಗೂ ಹಿರಿಯರಿಗೆ ಸಿಹಿ ತಿನಿಸಿ ಖುಷಿಪಟ್ಟರು.   

ಸಂತ್ರಸ್ತರಿಗೆ ನಿಧಿ ಸಂಗ್ರಹ: ಸಾಮಾಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಕೊಡಗು ಮತ್ತು ಕೇರಳದ ಪ್ರವಾಹ ಸಂತ್ರಸ್ತರಿಗಾಗಿ ನೂರಾರು ಮಂದಿ ದೇಣಿಗೆಯನ್ನು ನೀಡಿದರು.

ಮುಸ್ಲಿಂ ಧರ್ಮ ಗುರುಗಳು ಮಾತನಾಡಿ, ‘ಈ ಬಾರಿಯ ಬಕ್ರೀದ್ ಹಬ್ಬದಲ್ಲಿ ಕೊಡಗು ಮತ್ತು ಕೇರಳದಲ್ಲಿ ಮಹಾ ಮಳೆಗೆ ಸಿಲುಕಿ ತತ್ತರಿಸಿದ ಜನರ ಬಗ್ಗೆಯೂ ಪ್ರಾರ್ಥನೆ ಸಲ್ಲಿಸಲಾಯಿತು. ಅವರಿಗಾಗಿ ದೇಣಿಗೆ ಸಂಗ್ರಹಿಸಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು. 

ದೇವರ ಹೆಸರಿನಲ್ಲಿ ಕುರಿ ಮತ್ತು ಮೇಕೆಗಳನ್ನು ಬಲಿದಾನ ಮಾಡಿ, ಸ್ನೇಹ ಸೌಹಾರ್ದದ ಸಂಕೇತವಾಗಿ ಎಲ್ಲ ಬಡ ಜನರಿಗೆ ಜಾತಿ ಬೇಧವಿಲ್ಲದೆ ಹಂಚಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಭಾಗಿ: ಜಾಮಿಯಾ ಅಹಲೆ ಹದೀಶ್ ಈದ್ಗಾ ಮೈದಾನದಲ್ಲಿ ಮಹಿಳೆಯರು ಮತ್ತು ಜಿಲ್ಲಾ ಕ್ರೀಡಾಂಗಣ ಸಮೀಪವಿರುವ ಈದ್ಗಾ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಶುಭಾ‌ಶಯ ಕೋರಿದರು.

ಬಿಗಿ ಬಂದೋಬಸ್ತ್‌ 

ಬಕ್ರೀದ್‌ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಈದ್ಗಾ ಮೈದಾನದ ಸುತ್ತಮುತ್ತ ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಗಾಳಿಪುರ ಬಡಾವಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರು.

ಧರ್ಮ ಗುರುಗಳಾದ ಮೌಲಾನಾ ಶಾಯದ್ ಸೆಲ್ಫಿ, ಮೌಲಾನಾ ಮೊಕ್ತಾರ್ ಅಹಮದ್ ಮತ್ತು ಮಹಮದ್ ಜಿಯಾ ಉಲ್ಲಾ ಸೇರಿದಂತೆ ಸಾವಿರಾರು ಮುಸ್ಲಿಮರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು