ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವನ ಮಹೋತ್ಸವ ಮಾದರಿಯಾಗಲಿ

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಸತ್ಯವತಿ ಎಚ್ಚರಿಕೆ
Last Updated 30 ಮೇ 2018, 11:36 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಜೂನ್‌ 5ರಂದು ನಡೆಯುವ ವನ ಮಹೋತ್ಸವವು ಮಾದರಿಯಾಗಬೇಕು. ಅಧಿಕಾರಿಗಳು ಕಾಟಾಚಾರಕ್ಕೆ ವನಮಹೋತ್ಸವ ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಎಚ್ಚರಿಕೆ ನೀಡಿದರು.

ವನಮಹೋತ್ಸವದ ರೂಪುರೇಷೆಗಳ ಸಂಬಂಧ ನಗರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಪ್ಲಾಸ್ಟಿಕ್‌ ಉತ್ಪನ್ನಗಳ ನಿರ್ಬಂಧ ಸಂಬಂಧ ಸುಪ್ರೀಂ ಕೋರ್ಟ್‌ 2016ರಲ್ಲೇ ಆದೇಶ ಹೊರಡಿಸಿದೆ. ಆದರೆ, ಅಧಿಕಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಅಧಿಕಾರಿಗಳು ನ್ಯಾಯಾಲಯದ ಆದೇಶ ನಿರ್ಲಕ್ಷಿಸಿದರ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದರು.

‘ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ನಿರ್ಬಂಧದ ಸಂಬಂಧ ವರ್ತಕರಿಗೆ ಪದೇ ಪದೇ ಎಚ್ಚರಿಕೆ ನೀಡಲಾಗುತ್ತಿದೆ. ಆದರೂ ಅವರು ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ನಿಲ್ಲಿಸುತ್ತಿಲ್ಲ. ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ವರ್ತಕರಿಗೆ ದಂಡ ವಿಧಿಸಬೇಕು. ಅದಕ್ಕೂ ಬಗ್ಗದಿದ್ದರೆ ಅಂಗಡಿಯ ವಾಣಿಜ್ಯ ಪರವಾನಗಿ ರದ್ದುಪಡಿಸಿ’ ಎಂದು ಸೂಚಿಸಿದರು.

ದೂರು ಬಂದಿವೆ: ‘ನಗರದ ಮತ್ತು ಸುತ್ತಮುತ್ತಲಿನ ಕಲ್ಯಾಣ ಮಂಟಪಗಳ ವಿರುದ್ಧ ಸಾಕಷ್ಟು ದೂರು ಬಂದಿವೆ. ಕಲ್ಯಾಣ ಮಂಟಪಗಳ ಕೆಲಸಗಾರರು ಮನಬಂದಂತೆ ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದಾರೆ. ಅಲ್ಲದೇ, ಹಸಿ ಮತ್ತು ಒಣ ಕಸ ವಿಂಗಡಿಸಿ ವಿಲೇವಾರಿ ಮಾಡುತ್ತಿಲ್ಲ. ಈ ಸಮಸ್ಯೆ ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ?’ ಎಂದು ಕೆಂಡಾಮಂಡಲರಾದರು.

‘ಸಮರ್ಪಕವಾಗಿ ಕಸ ವಿಲೇವಾರಿ ಮಾಡುವಂತೆ ಕಲ್ಯಾಣ ಮಂಟಪಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ. ನೋಟಿಸ್‌ಗೆ ಬಗ್ಗದಿದ್ದರೆ ಕಲ್ಯಾಣ ಮಂಟಪದ ಪರವಾನಗಿ ರದ್ದುಪಡಿಸಿ. ಆಗ ಮಾಲೀಕರು ಸರಿ ದಾರಿಗೆ ಬರುತ್ತಾರೆ’ ಎಂದರು.

ಗಮನ ಹರಿಸಿ: ‘ಮುಜರಾಯಿ ಇಲಾಖೆ ಸಿಬ್ಬಂದಿಯ ಜಿಲ್ಲೆಯ ದೇವಸ್ಥಾನಗಳು ಮತ್ತು ದೇವಸ್ಥಾನಗಳ ಸುತ್ತಲಿನ ಪರಿಸರ ಕಾಪಾಡುವತ್ತ ಹೆಚ್ಚು ಗಮನ ಹರಿಸಬೇಕು. ಮುಳಬಾಗಿಲು ತಾಲ್ಲೂಕಿನ ಆವಣಿ, ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ದೇವಸ್ಥಾನದ ಸುತ್ತಮುತ್ತ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳನ್ನು ಹಾಕಿ ಪರಿಸರ ಹಾಳು ಮಾಡಿರುವುದನ್ನು ಗಮನಿಸಿದ್ದೇನೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸರ್ವೇಶ್‌, ‘ಆವಣಿ ದೇವಸ್ಥಾನಕ್ಕೆ ಬರುವ ಭಕ್ತರು ತ್ಯಾಜ್ಯ ವಸ್ತುಗಳು ಹಾಗೂ ಬಾಟಲಿಗಳನ್ನು ದೇವಾಲಯದ ಆವರಣದಲ್ಲಿ ಎಸೆಯುತ್ತಾರೆ’ ಎಂದರು.

ಇದರಿಂದ ಮತ್ತಷ್ಟು ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ‘ಭಕ್ತರು ಬಾಟಲಿ ಎಸೆಯುತ್ತಾರೆಂದು ನೀವು ಸುಮ್ಮನಿರುತ್ತೀರಾ? ಭಕ್ತರು ಕುಡಿದು ಮಜಾ ಮಾಡಲು ದೇವಸ್ಥಾನಕ್ಕೆ ಬರುತ್ತಾರಾ? ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ನಿಮ್ಮ ಜವಾಬ್ದಾರಿ. ಆ ಕೆಲಸವನ್ನು ಸರಿಯಾಗಿ ಮಾಡಿ’ ಎಂದು ತಾಕೀತು ಮಾಡಿದರು.

‘ಜನರಿಗೆ ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ. ಬುದ್ಧಿವಂತರು ಮತ್ತು ಸುಶಿಕ್ಷಿತರೇ ಇಂತಹ ಕೆಲಸ ಮಾಡಿದರೆ ಹೇಗೆ? ಅವರಿಗೆಲ್ಲಾ ಬುದ್ಧಿ ಹೇಳಿ ಸರಿ ದಾರಿಗೆ ತರುವಷ್ಟರಲ್ಲಿ ಪ್ರಪಂಚವೇ ಮುಳುಗಿ ಹೋಗಿರುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಕಲ್ಪ ಮಾಡಬೇಕು: ‘ವನಮಹೋತ್ಸವದ ಯಶಸ್ಸಿಗೆ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು, ಸರ್ಕಾರೇತರ ಸ್ವಯಂ ಸಂಸ್ಥೆಗಳು, ಸಂಘಟನೆಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಬರಪೀಡಿತ ಜಿಲ್ಲೆಯನ್ನು ಹಸಿರೀಕರಣಗೊಳಿಸುವ ದೃಢ ಸಂಕಲ್ಪ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಕೋಲಾರ ನಗರದ ಹಲವೆಡೆ ಕಸ ರಾಶಿಯಾಗಿ ಬಿದ್ದಿದೆ. ಕಸ ವಿಂಗಡಣೆ ಮತ್ತು ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ಕಸ ವಿಲೇವಾರಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿ ತೆರೆಯಬೇಕು ಮತ್ತು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ಮಾಡಿ ಕಸದ ರಾಶಿ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ವಿಲೇವಾರಿ ಮಾಡಬೇಕು. ಈ ಕೆಲಸಕ್ಕೆ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯಬೇಕು’ ಎಂದು ಸಲಹೆ ನೀಡಿದರು.

1 ಸಾವಿರ ಸಸಿ: ‘ಜಿಲ್ಲೆಯಲ್ಲಿ 156 ಗ್ರಾಮ ಪಂಚಾಯಿತಿಗಳಿದ್ದು, ಎಲ್ಲಾ ಗ್ರಾ.ಪಂಗಳ ವ್ಯಾಪ್ತಿಯಲ್ಲಿ ತಲಾ 1 ಸಾವಿರ ಸಸಿ ನೆಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್‌.ಲತಾಕುಮಾರಿ ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಚಕ್ರಪಾಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ಎಸ್‌.ಶ್ರೀನಿವಾಸರಾವ್‌ ಹಾಜರಿದ್ದರು.

**
ಕೋಲಾರ ನಗರದಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದೆ. ಇದಕ್ಕೆ ನಗರಸಭೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಬಟ್ಟೆ ಬ್ಯಾನರ್‌ಗಳನ್ನು ಕಟ್ಟಿಕೊಂಡರೆ ಅಭ್ಯಂತರವಿಲ್ಲ. ಆದರೆ, ಫ್ಲೆಕ್‌ಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಪೂರ್ವಾನುಮತಿ ಪಡೆಯದೆ ಫ್ಲೆಕ್ಸ್‌ ಹಾಕುವವರಿಗೆ ದಂಡ ವಿಧಿಸಿ
ಜಿ.ಸತ್ಯವತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT