ರಾಮಸಮುದ್ರದಲ್ಲಿ ಕಾಂಗ್ರೆಸ್‌–ಬಿಎಸ್‌ಪಿ ಕಾರ್ಯಕರ್ತರ ಮಾರಾಮಾರಿ, 8 ಜನರಿಗೆ ಗಾಯ

7
ಪಕ್ಷದ ಬಾವುಟ ಕಟ್ಟುವ ವಿಚಾರದಲ್ಲಿ ಜಗಳ, ಎಂಟು ಜನರಿಗೆ ಗಾಯ

ರಾಮಸಮುದ್ರದಲ್ಲಿ ಕಾಂಗ್ರೆಸ್‌–ಬಿಎಸ್‌ಪಿ ಕಾರ್ಯಕರ್ತರ ಮಾರಾಮಾರಿ, 8 ಜನರಿಗೆ ಗಾಯ

Published:
Updated:

ಚಾಮರಾಜನಗರ: ಪಟ್ಟಣಕ್ಕೆ ಸಮೀಪದ ರಾಮಸಮುದ್ರ ಬಡಾವಣೆಯಲ್ಲಿ ಭಾನುವಾರ ಮಧ್ಯಾಹ್ನ ಕಾಂಗ್ರೆಸ್‌ ಹಾಗೂ ಬಿಎಸ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಎರಡೂ ಪಕ್ಷಗಳ ಎಂಟು ಕಾರ್ಯಕರ್ತರಿಗೆ ಗಾಯಗಳಾಗಿವೆ.

ಏಳು ಮಂದಿ ತಲೆಗೆ ಏಟು ಬಿದ್ದಿದೆ. ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರಸಭೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡ ದಿನದಂದು (ಸೆ.3) ಬಾವುಟ ಕಟ್ಟುವ ವಿಚಾರಕ್ಕೆ ನಡೆದಿದ್ದ ಜಗಳವೇ ಈ ಘರ್ಷಣೆಗೆ ಕಾರಣ. ಗಾಯಗೊಂಡವರೆಲ್ಲ ಪರಸ್ಪರ ಸಂಬಂಧಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಸ್ವಾಮಿ, ಮಂಜು, ಮಹದೇವಸ್ವಾಮಿ (ಬಿಎಸ್‌ಪಿ ಕಾರ್ಯಕರ್ತರು), ಚಂದ್ರಶೇಖರ್‌, ನಟರಾಜ್‌, ನಾಗರಾಜ್‌, ಮಹದೇವಸ್ವಾಮಿ ಮತ್ತು ಅಂಜನಯ್ಯ (ಕಾಂಗ್ರೆಸ್‌ ಕಾರ್ಯಕರ್ತರು) ಗಾಯಗೊಂಡವರು.

ಘಟನೆ ವಿವರ: ಸೆಪ್ಟೆಂಬರ್‌ 3ರಂದು ಚುನಾವಣೆ ಫಲಿತಾಂಶ ಬಂದ ದಿನ ಬಿಎಸ್‌ಪಿ ಕಾರ್ಯಕರ್ತರು ಕಂಬವೊಂದಕ್ಕೆ ಪಕ್ಷದ ಧ್ವಜ ಕಟ್ಟಿದ್ದರು, ಇದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು. ಮಧ್ಯ ಪ್ರವೇಶಿಸಿದ್ದ ಬಡಾವಣೆಯ ಮುಖಂಡರು ಪಂಚಾಯಿತಿ ಮಾಡಿ ಸಮಸ್ಯೆಯನ್ನು ಬಗೆಹರಿಸಲು ತೀರ್ಮಾನಿಸಿದ್ದರು.

ಅದರಂತೆ ಭಾನುವಾರ (ಸೆ.16) ಪಂಚಾಯಿತಿ ನಡೆದಿತ್ತು. ವಾದ ಪ್ರತಿವಾದ ಆಲಿಸಿದ್ದ ಮುಖಂಡರು, ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಅವರಿಗೆ ದಂಡವನ್ನೂ ವಿಧಿಸಿದ್ದರು.

‘ಮಧ್ಯಾಹ್ನ 1ರಿಂದ 1.30 ಗಂಟೆ ನಡುವೆ ಪಂಚಾಯಿತಿ ಮುಗಿಸಿಕೊಂಡು ಹೊರ ಬರುತ್ತಿದ್ದ ಎರಡೂ ಕಾರ್ಯಕರ್ತರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಕಲ್ಲು ಹಾಗೂ ಮಚ್ಚು ಹಿಡಿದುಕೊಂಡು ಪರಸ್ಪರ ಹೊಡೆದುಕೊಂಡಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪೊಲೀಸ್‌ ಬಿಗಿ ಬಂದೋಬಸ್ತ್‌

ಘರ್ಷಣೆ ನಡೆದಿರುವ ರಾಮಸಮುದ್ರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್‌ಪಿ ಜಯಕುಮಾರ್‌, ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮಹದೇವಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !