130 ಗ್ರಾಮ ಪಂಚಾಯಿತಿ ವ್ಯಾಪ್ತಿ ಗುರಿ ತಲುಪದ ತೆರಿಗೆ ವಸೂಲಾತಿ

7
ಗ್ರಾ.ಪಂ ವ್ಯಾಪ್ತಿಯಲ್ಲಿ ಕಂದಾಯ ಸಂಗ್ರಹ ಅಭಿಯಾನ ನಡೆಸಲಿರುವ ಜಿಲ್ಲಾ ಪಂಚಾಯಿತಿ

130 ಗ್ರಾಮ ಪಂಚಾಯಿತಿ ವ್ಯಾಪ್ತಿ ಗುರಿ ತಲುಪದ ತೆರಿಗೆ ವಸೂಲಾತಿ

Published:
Updated:
Deccan Herald

ಚಾಮರಾಜನಗರ: ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಂದಾಯ ವಸೂಲಾತಿ ಗುರಿಯನ್ನು ತಲುಪಲು ಜಿಲ್ಲಾ ಪಂಚಾಯಿತಿ ವಿಫಲವಾಗಿದ್ದು, ಈ ವರ್ಷ ಕಂದಾಯ ಸಂಗ್ರಹಕ್ಕಾಗಿ ವಿಶೇಷ ಅಭಿಯಾನ ನಡೆಸಲು ಸಿದ್ಧತೆ ನಡೆಸಿದೆ.

ಈ ಬಾರಿ ಕಂದಾಯ ಪರಿಷ್ಕರಣೆ ಆಗಲಿದ್ದು, ಪ್ರಕ್ರಿಯೆ ಜಾರಿಯಲ್ಲಿದೆ. ಪರಿಷ್ಕೃತ ತೆರಿಗೆ ವಿವರಗಳನ್ನು ಜಿಲ್ಲಾ ಪಂಚಾಯಿತಿ ಶೀಘ್ರ ಪ್ರಕಟಿಸಲಿದೆ.

ತಲುಪದ ಗುರಿ: ಹಲವು ವರ್ಷಗಳಿಂದೀಚೆಗೆ ಜಿಲ್ಲಾ ಪಂಚಾಯಿತಿಗೆ ನಿಗದಿತ ಗುರಿಯಷ್ಟು ತೆರಿಗೆ ಮೊತ್ತವನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. 2014–15ನೇ ಸಾಲಿನಿಂದ 2017–18ರವರೆಗೆ ವಸೂಲು ಮಾಡಬೇಕಿದ್ದ ಕಂದಾಯ ಮೊತ್ತದಲ್ಲಿ ಸರಾಸರಿ ಶೇ 24.81ರಷ್ಟು ಮಾತ್ರ ವಸೂಲಾತಿ ಆಗಿದೆ. 

2018–19ನೇ ಸಾಲಿನಲ್ಲಿ ಜೂನ್‌ ತಿಂಗಳವರೆಗೆ ಶೇ 5.78ರಷ್ಟು ಮಾತ್ರ ತೆರಿಗೆ ಸಂಗ್ರಹ ಆಗಿದೆ. ₹17.69 ಕೋಟಿಯಷ್ಟು ತೆರಿಗೆ ವಸೂಲಾತಿಗೆ ಬಾಕಿ ಇದೆ.

ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಪರಿಸ್ಥಿತಿ ಇತ್ತು. ಸಂಪನ್ಮೂಲದ ಕೊರತೆ ಇದ್ದರಿಂದ ಜನರಿಗೆ ತೆರಿಗೆ ಪಾವತಿ ಕಷ್ಟವಾಗಬಹುದು ಎಂಬ ಕಾರಣಕ್ಕೆ ಜಿಲ್ಲಾ ಪಂಚಾಯಿತಿ ಕಟ್ಟುನಿಟ್ಟಾಗಿ ನಡೆದುಕೊಂಡಿರಲಿಲ್ಲ.

ನಮ್ಮಲ್ಲಿ ನಿರೀಕ್ಷೆಯಷ್ಟು ಕಂದಾಯ ವಸೂಲಿ ಆಗುತ್ತಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜೂನ್‌ವರೆಗೆ ಶೇ 6ರಷ್ಟು ತೆರಿಗೆ ವಸೂಲಿ ಆಗಿದೆಯಷ್ಟೆ. ಹಿಂದೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇತ್ತು. ರೈತರು ಸಂಕಷ್ಟದಲ್ಲಿದ್ದರು. ಹಾಗಾಗಿ, ಸರ್ಕಾರ ಕಂದಾಯ ಸಂಗ್ರಹದ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವರ್ಷ ಉತ್ತಮ ಮಳೆ ಬಂದಿದೆ. ಸಾಕಷ್ಟು ಸಂಪನ್ಮೂಲವೂ ಲಭ್ಯವಿದೆ. ಹಾಗಾಗಿ ಕಂದಾಯ ವಸೂಲು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್‌ ಇಲಾಖೆಯಿಂದ ಸೂಚನೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಕಂದಾಯ ಪರಿಷ್ಕರಣೆ: ‘ಈ ವರ್ಷ ಕಂದಾಯ ಪರಿಷ್ಕರಣೆ ಆಗಲಿದೆ. ಈಗಾಗಲೇ ಉಪ ನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್‌) ಕಚೇರಿಯಿಂದ ಭೂಮಿಯ ಮಾರುಕಟ್ಟೆ ಮೌಲ್ಯ ತೆಗೆದುಕೊಂಡಿದ್ದೇವೆ. ಪರಿಷ್ಕೃತ ತೆರಿಗೆ ನಿಗದಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಕನಿಷ್ಠ ತೆರಿಗೆಯನ್ನು ನಿಗದಿಪಡಿಸುತ್ತೇವೆ. ನಂತರದಲ್ಲಿ ಆಯಾ ಗ್ರಾಮ ಪಂಚಾಯಿತಿಗಳು ಭೂಮಿಯ ಮಾರುಕಟ್ಟೆಯ ಮಾರ್ಗಸೂಚಿಯ ಬೆಲೆಗೆ ಅನುಗುಣವಾಗಿ ತೆರಿಗೆ ನಿಗದಿಪಡಿಸಲಿವೆ’ ಎಂದು ಹೇಳಿದರು.

ಎರಡು ಬಾರಿ ಪರಿಷ್ಕರಣೆ

ಈ ಹಿಂದೆ 2010–11 ಮತ್ತು 2014–15ರಲ್ಲಿ ಕಂದಾಯ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಅದು ಪತ್ರದಲ್ಲಿ ಆದೇಶ ರೂಪದಲ್ಲಿ ಇತ್ತೇ ವಿನಃ ಸರಿಯಾಗಿ ಅನುಷ್ಠಾನಗೊಂಡಿರಲಿಲ್ಲ.

ಈ ಬಾರಿ ಕಟ್ಟುನಿಟ್ಟಾಗಿ ಕಂದಾಯ ವಸೂಲು ಮಾಡಲು ಜಿಲ್ಲಾ ಪಂಚಾಯಿತಿ ನಿರ್ಧರಿಸಿದ್ದು, ಅದಕ್ಕಾಗಿಯೇ ಅಭಿಯಾನ ನಡೆಸುವ ತೀರ್ಮಾನಕ್ಕೆ ಬಂದಿದೆ.

ಗುಂಡ್ಲು‍‍ಪೇಟೆಯಲ್ಲಿ ಹೆಚ್ಚು, ಯಳಂದೂರು ಕಡಿಮೆ

ಜಿಲ್ಲೆಯ ನಾಲ್ಕು ತಾಲ್ಲೂಕುಗಳ (ಅವಿಭಜಿತ ಕೊಳ್ಳೇಗಾಲ) ಪೈಕಿ ಗುಂಡ್ಲುಪೇಟೆಯಲ್ಲಿ ಹೆಚ್ಚಿನ ಕಂದಾಯ ‌ವಸೂಲಾಗಿದೆ. ಇಲ್ಲಿ 34 ಗ್ರಾಮ ಪಂಚಾಯಿತಿಗಳಿವೆ. 2016–17ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ₹4.80 ಕೋಟಿ ತೆರಿಗೆ ಸಂಗ್ರಹವಾಗಬೇಕಿತ್ತು. ₹1.41 ಕೋಟಿ ವಸೂಲು (‌ಶೇ 29.44) ಆಗಿದೆ. 2017–18ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ₹1.57 ಕೋಟಿ ಸಂಗ್ರಹವಾಗಿದೆ (ಶೇ 34.48). ಪ್ರಸಕ್ತ ಆರ್ಥಿಕ ವರ್ಷದ (2018–19) ಮೊದಲ ಮೂರು ತಿಂಗಳಲ್ಲಿ ₹38.38 ಲಕ್ಷ ವಸೂಲು ಮಾಡಲಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ 7.15ರಷ್ಟು ವಸೂಲಾಗಿದೆ.

12 ಗ್ರಾಮ ಪಂಚಾಯಿತಿಗಳಿರುವ ಯಳಂದೂರು ತಾಲ್ಲೂಕಿನಲ್ಲಿ ಅತಿ ಕಡಿಮೆ ಸಂಗ್ರಹವಾಗಿದೆ. 2016–17ರಲ್ಲಿ ₹2.02 ಕೋಟಿ ಪೈಕಿ ವಸೂಲಾಗಿದ್ದು ₹30 ಲಕ್ಷ ಮಾತ್ರ (‌ಶೇ 14.83). 2017–18ರಲ್ಲಿ ₹30.89 ಲಕ್ಷ (ಶೇ 14.16) ಹಾಗೂ 2018–19 ಜೂನ್‌ವರೆಗೆ ₹6.48 ಲಕ್ಷ (ಶೇ 2.89) ಕಂದಾಯ ವಸೂಲಾಗಿದೆ.

ತೆರಿಗೆ ಸಂಗ್ರಹ: ಯಾವ ವರ್ಷ, ಎಷ್ಟು? (ಕೋಟಿ ₹ಗಳಲ್ಲಿ)

* 2014–15 ಗುರಿ– 10.80 ಸಂಗ್ರಹ–3.17

* 2015–16 ಗುರಿ–12.93 ಸಂಗ್ರಹ–3.55

* 2016–17 ಗುರಿ–17.87 ಸಂಗ್ರಹ– 3.55 

* 2017–18 ಗುರಿ–18 ಸಂಗ್ರಹ–4.44

* 2018–19* ಗುರಿ–18.77  ಸಂಗ್ರಹ 1.08

* ಜೂನ್‌ವರೆಗೆ

ಯಾವ ತಾಲ್ಲೂಕಿನಲ್ಲಿ ಎಷ್ಟು ಬಾಕಿ? (ಕೋಟಿ ₹ಗಳಲ್ಲಿ)

ಚಾಮರಾಜನಗರ–5.35

ಕೊಳ್ಳೇಗಾಲ–5.17

ಗುಂಡ್ಲುಪೇಟೆ–4.99

ಯಳಂದೂರು–2.17

ಒಟ್ಟು– 17.69

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !