ಗಡಿ ಜನರಲ್ಲಿ ಹೆಚ್ಚುತ್ತಿದೆ ವಾಹನ ಮೋಹ

7
ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯಲ್ಲಿ ಏರಿಕೆ

ಗಡಿ ಜನರಲ್ಲಿ ಹೆಚ್ಚುತ್ತಿದೆ ವಾಹನ ಮೋಹ

Published:
Updated:

ಚಾಮರಾಜನಗರ: ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಜಿಲ್ಲೆಯ ಜನರಲ್ಲಿ ಇತ್ತೀಚೆಗೆ ವಾಹನಗಳ ಮೋಹವೂ ಹೆಚ್ಚಾಗುತ್ತಿದೆ. ಎರಡು ವರ್ಷಗಳಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಹೊಸದಾಗಿ ನೋಂದಣಿಯಾದ ವಾಹನಗಳ ವಿವರಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ.

ವರ್ಷದಿಂದ ವರ್ಷಕ್ಕೆ ನೋಂದಣಿ ಆಗುತ್ತಿರುವ ವಾಹನಗಳಲ್ಲಿ ಹೆಚ್ಚಳವಾಗುತ್ತಲೇ ಇದೆ. ಇವುಗಳಲ್ಲಿ ಸಿಂಹಪಾಲು ದ್ವಿಚಕ್ರವಾಹನಗಳದ್ದು. 2016ರ ಏಪ್ರಿಲ್‌ನಿಂದ 2017ರ ಮಾರ್ಚ್‌ವರೆಗೆ ಜಿಲ್ಲೆಯಲ್ಲಿ 12,507 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. 2017–18ರಲ್ಲಿ ಇದು 13,991ಕ್ಕೆ ಏರಿತ್ತು. ಪ್ರಸಕ್ತ ಆರ್ಥಿಕ ವರ್ಷದ (2018–19) ಮೊದಲ ಮೂರು ತಿಂಗಳಲ್ಲಿ 3,211 ಮಂದಿ ಹೊಸ ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದಾರೆ.

ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಟ್ರ್ಯಾಕ್ಟರ್, ಟ್ರಿಲ್ಲರ್‌ಗಳ ಸಂಖ್ಯೆಯೂ ಏರು ಮುಖವಾಗಿ ಸಾಗುತ್ತಿದೆ. ಈ ವರ್ಷದ ಮೂರು ತಿಂಗಳಲ್ಲಿ 131 ಟ್ರ್ಯಾಕ್ಟರ್, 27 ಟ್ರಿಲ್ಲರ್‌ಗಳು ನೋಂದಣಿಯಾಗಿವೆ. ಇದು ವಹಿವಾಟು ಹೆಚ್ಚಾಗಿರುವುದರ ಸೂಚಕ ಎಂದು ಹೇಳುತ್ತಾರೆ ವ್ಯಾಪಾರಸ್ಥರು.

ವಾಹನಗಳ ಸಂಖ್ಯೆ ಹೆಚ್ಚುವುದು ಸಾಮಾನ್ಯ ಎಂಬುದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಅವರ ಅಭಿಪ್ರಾಯ. ಆದರೆ, ಜನರಲ್ಲಿ ವಾಹನಗಳ ಕ್ರೇಜ್ ಹೆಚ್ಚಾಗಿರುವುದನ್ನು ಅವರು ಒಪ್ಪುತ್ತಾರೆ.

‘ವರ್ಷಗಳು ಕಳೆದಂತೆ ಜನರ ಪ್ರವೃತ್ತಿ ಬದಲಾಗುತ್ತಿದೆ. ಮಾರುಕಟ್ಟೆಯಲ್ಲೂ ಹೊಸ ವಿನ್ಯಾಸದ ವಾಹನಗಳು ಬರುತ್ತಿವೆ. ಜನರು ಸಹಜವಾಗಿ ಇವುಗಳ ಮೇಲೆ ಆಕರ್ಷಿತರಾಗುತ್ತಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭಿನ್ನ ನಿಲುವು: ವಾಹನ ಉದ್ಯಮದಲ್ಲಿ ತೊಡಗಿಕೊಂಡವರು ಹೇಳುವುದೇ ಬೇರೆ. ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಅವರು ಅನುಮೋದಿಸಿದರೂ, ಹೆಚ್ಚಳವಾಗುತ್ತಿರುವ ಪ್ರಮಾಣದ ಬಗ್ಗೆ ಅವರಿಗೆ ತೃಪ್ತಿ ಇಲ್ಲ.

‘ಬೆಂಗಳೂರು, ಮೈಸೂರಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಮಾರಾಟ ಆಗುತ್ತಿರುವ ವಾಹನಗಳ ಸಂಖ್ಯೆ ಏನೇನೂ ಅಲ್ಲ’ ಎಂಬುದು ಚಾಮರಾಜನಗರದ ಚಕ್ರಿಕ ಹೋಂಡಾ ಷೋ ರೂಂ ನಿರ್ದೇಶಕ ಎಂ.ಪ್ರತೀಶ್ ಅವರ ಅಭಿಪ್ರಾಯ.

ಒಂದು ವರ್ಷದಲ್ಲಿ 1,500 ದ್ವಿಚಕ್ರ ವಾಹನಗಳು ಹೆಚ್ಚು ಮಾರಾಟ ಆಗಿವೆ ಎಂದರೆ, ತಿಂಗಳಿಗೆ 125 ವಾಹನಗಳು ಹೆಚ್ಚು ಮಾರಾಟವಾಗಿವೆ ಎಂದರ್ಥ. ಇಡೀ ಜಿಲ್ಲೆಗೆ ಹೋಲಿಸಿದರೆ ಇದು ದೊಡ್ಡ ಸಂಖ್ಯೆ ಅಲ್ಲ ಎನ್ನುತ್ತಾರೆ ಅವರು.

ಈಗ ಮಕ್ಕಳಿಗೆ 18 ವರ್ಷ ತುಂಬುವ ಹೊತ್ತಿಗೆ ಪೋಷಕರು ವಾಹನವನ್ನು ಕೊಡಿಸುತ್ತಾರೆ. ಹೆಣ್ಣುಮಕ್ಕಳು ಕೂಡ ದ್ವಿಚಕ್ರ ಅಥವಾ ನಾಲ್ಕು ಚಕ್ರಗಳ ವಾಹನವನ್ನು ಚಲಾಯಿಸುತ್ತಾರೆ. ಇದೆಲ್ಲ ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳು. ದ್ವಿಚಕ್ರ ವಾಹನಗಳಲ್ಲಿ ಸ್ಕೂಟರ್‌ಗಳಿಗೇ ಬೇಡಿಕೆ ಹೆಚ್ಚು ಎಂದು ವಿವರಿಸುತ್ತಾರೆ.

ವಾಹನಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚದೇ ಇರುವುದಕ್ಕೆ ಅವರು ನೀಡುವ ಕಾರಣ ರಸ್ತೆ ಸರಿ ಇರದೇ ಇರುವುದು.

‘ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಉತ್ತಮವಾಗಿದ್ದರೆ, ವಾಹನಗಳನ್ನು ಖರೀದಿಸಲು ಜನರು ಹಿಂದೆ ಮುಂದೆ ನೋಡುವುದಿಲ್ಲ. ರಸ್ತೆ ಸರಿ ಇಲ್ಲದಿದ್ದರೆ ಅಪಾಯ ಇದ್ದೇ ಇರುತ್ತದೆ, ಹೀಗಾಗಿ ಹಿಂಜರಿಯುತ್ತಾರೆ’ ಎಂದು ಪ್ರತೀಶ್ ಪ್ರತಿಪಾದಿಸುತ್ತಾರೆ.

ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು ನಿರ್ಮಾಣವಾದರೆ, ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ವಾಹನ ಉದ್ಯಮದಲ್ಲಿ ತೊಡಗಿಸಿಕೊಂಡವರು ಹೇಳುತ್ತಾರೆ.

ಕಾರು ಮಾಲೀಕರ ಸಂಖ್ಯೆ ಹೆಚ್ಚಳ:  ಮೂರು ವರ್ಷಗಳ ವಾಹನ ನೋಂದಣಿ ಅಂಕಿ ಅಂಶಗಳನ್ನು ಗಮನಿಸಿದಾಗ, ಜಿಲ್ಲೆಯಲ್ಲಿ ಕಾರುಗಳ ಮಾಲೀಕರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. 2016–17ರಲ್ಲಿ ಪ್ರತಿ ತಿಂಗಳು ಸರಾಸರಿ 44 ಹೊಸ ಕಾರುಗಳು ನೋಂದಣಿಯಾಗಿದ್ದವು. 2017–18ರಲ್ಲಿ ಈ ಸಂಖ್ಯೆ 50ಕ್ಕೆ ಏರಿತ್ತು. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ 54 ಕಾರುಗಳು ನೋಂದಣಿಯಾಗಿವೆ.

ಆಟೊಗಳ ಖರೀದಿ ಕಡಿಮೆ:  ಕುತೂಹಲದ ಸಂಗತಿ ಎಂದರೆ ಆಟೊ ರಿಕ್ಷಾಗಳ ನೋಂದಣಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2016–17ರಲ್ಲಿ 139 ಹೊಸ ಆಟೊಗಳು ನೋಂದಣಿಯಾಗಿದ್ದರೆ, 2017–18ರಲ್ಲಿ ಕೇವಲ 59 ಆಟೊಗಳು ನೋಂದಣಿಯಾಗಿದ್ದವು. ಈ ವರ್ಷದಲ್ಲಿ ಜೂನ್‌ವರೆಗೆ 16 ಆಟೊರಿಕ್ಷಾಗಳು ನೋಂದಣಿಯಾಗಿವೆಯಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !