ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದನ ಕೈಚಳಕ

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಂಗೋಲಿ ಹಾಕಲು ಹೆಚ್ಚು ಸಮಯ ಹಾಗೂ ತಾಳ್ಮೆ ಬೇಕು. ಹೀಗಾಗಿ ಇದು ಹೆಣ್ಣುಮಕ್ಕಳ ಕಲೆ ಎಂಬುದು ಹಲವರ ನಂಬಿಕೆ. ಆದರೆ ಕಲೆಗೆ ಭೇದವಿಲ್ಲ. ಮನಸ್ಸಿದ್ದವರಿಗೆ ಕಲೆ ಕೈ ಹಿಡಿಯುತ್ತದೆ ಎಂಬುದಕ್ಕೆ ಹೆಬ್ಬಾಳದ ರಂಗೋಲಿ ಕಲಾವಿದ ಕಾರ್ತಿಕ್‌ ಖಾಡಿಲ್ಕರ್‌ ಅವರೇ ಸಾಕ್ಷಿ.

ನಗರದಲ್ಲಿ ನಡೆಯುವ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಶುಭ ಸಮಾರಂಭಗಳಲ್ಲಿ ಕಾರ್ತಿಕ್‌ ರಂಗೋಲಿ ಬಿಡಿಸುತ್ತಾರೆ. ಇವರು ಬಿಡಿಸುವ ರಂಗೋಲಿ ವಿಶೇಷವಾಗಿರುತ್ತದೆ. ರಂಗೋಲಿ ಹುಡಿಯಿಂದ ದುರ್ಗೆ, ಲಕ್ಷ್ಮೀ, ಗಣಪತಿ, ತಿರುಪತಿ ವೆಂಕಟೇಶ್ವರ, ಮಂಜುನಾಥ, ವಿಷ್ಣು, ನಾಗದೇವತೆ, ವಿವಿಧ ಹೂವುಗಳ ಚಿತ್ರಗಳನ್ನು ಆಕರ್ಷಕವಾಗಿ ಬಿಡಿಸುವುದು ಇವರ ವೈಶಿಷ್ಟ್ಯ.

ಸುಮಾರು 8ರಿಂದ 9 ಅಡಿ ವರೆಗಿನ ಚಿತ್ರಗಳನ್ನು ರಂಗೋಲಿ ಪುಡಿಯಲ್ಲಿ ಬಿಡಿಸುತ್ತಾರೆ. ರಂಗೋಲಿಯಲ್ಲಿ ಬಣ್ಣಗಳ ಸಂಯೋಜನೆಗೆ ಕಾರ್ತಿಕ್‌ ಹೆಚ್ಚು ಗಮನ ಕೊಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಗಾಢ ಬಣ್ಣಗಳನ್ನು ಒಂದಕ್ಕೊಂದು ಮಿಶ್ರಣ ಮಾಡಿ, ಹೊಸ ಬಣ್ಣದ ಪ್ರಯೋಗ ಮಾಡಿ ತಮ್ಮ ಕೈಚಳಕ ತೋರುತ್ತಾರೆ ಕಾರ್ತಿಕ್‌.

‘ಕೈಗಳು ಎಷ್ಟು ಪಳಗಿವೆ ಹಾಗೂ ಬಣ್ಣಗಳನ್ನು ಸರಿಯಾಗಿ ಬಳಕೆ ಮಾಡುವಲ್ಲಿಯೇ ಈ ಕಲೆಯ ಗುಟ್ಟು ಅಡಗಿದೆ. ರಂಗೋಲಿ ಬಿಡಿಸಲು ತಾಳ್ಮೆ ಹಾಗೂ ಏಕಾಗ್ರತೆ ಮುಖ್ಯ. ದೊಡ್ಡ ರಂಗೋಲಿಗಳನ್ನು ಬಿಡಿಸುವಾಗ ಕೊಂಚ ತಪ್ಪಿದರೂ ಚಿತ್ರ ಹಾಳಾಗುವ ಸಂಭವ ಇರುತ್ತದೆ. ಚಿತ್ರಕ್ಕೆ ಯಾವುದು ಸೂಕ್ತವೋ ಆ ಬಣ್ಣಗಳನ್ನು ಮನಸ್ಸಿನಲ್ಲೇ ಅಂದಾಜು ಮಾಡಿಕೊಳ್ಳಬೇಕು. ಒಂದು ದೊಡ್ಡ ರಂಗೋಲಿ ಬಿಡಿಸಲು 2–3 ಗಂಟೆ ಬೇಕು’ ಎನ್ನುತ್ತಾರೆ ಅವರು. 

‘ನನಗೆ ಬಾಲ್ಯದಲ್ಲಿ ರಂಗೋಲಿ ಬಿಡಿಸುವ ಆಸಕ್ತಿ ಇರಲಿಲ್ಲ. ಸಹೋದರನ ಜೊತೆ ಪೂಜೆ, ಪೌರೋಹಿತ್ಯಕ್ಕೆ ಹೋಗುತ್ತಿದ್ದ ಸಮಯದಲ್ಲಿ ರಂಗೋಲಿ ಹಾಕುವ ಬಗ್ಗೆ ಆಸಕ್ತಿ ತಳೆಯಿತು. ನಾನೇ ಅಭ್ಯಾಸ ಮಾಡಲು ಆರಂಭಿಸಿದೆ. ಬರುಬರುತ್ತಾ ಈ ಕಲೆ ಕೈಹಿಡಿಯಿತು. ಶುಭ ಸಮಾರಂಭಗಳಲ್ಲಿ ರಂಗೋಲಿಗೆ ಬೇಡಿಕೆ ಹೆಚ್ಚು. ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿ ಮೂಲಕ, ನಗರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ರಂಗೋಲಿ ಬಿಡಿಸಲು ಅವಕಾಶ ಸಿಗುತ್ತದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿಯೂ ರಂಗೋಲಿ ಬಿಡಿಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಇಷ್ಟು ಚಂದದ ರಂಗೋಲಿ ಹೇಗೆ ಒಂದೇ ಬಾರಿ ಬಿಡಿಸ್ತೀರಿ?’ ಎಂದು ಕೇಳಿದರೆ, ‘ಮೊದಲು ಬಿಳಿ ಬಣ್ಣದ ಹುಡಿಯಿಂದ ಗೆರೆಗಳ ಮೂಲಕ ಸ್ಕೆಚ್‌ ಹಾಕಿಕೊಳ್ಳುತ್ತೇನೆ. ಬಳಿಕ ಬಣ್ಣಗಳನ್ನು ಭರ್ತಿ ಮಾಡುತ್ತೇನೆ’ ಎಂದು ವಿವರಿಸುತ್ತಾರೆ.

ಕಾರ್ತಿಕ್‌ ಎಂ.ಎಸ್ಸಿ (ಗ್ರಾಫಿಕ್ಸ್‌) ಓದಿದ್ದಾರೆ. ಸ್ವಂತ ಕಂಪನಿಯೊಂದನ್ನು ನಡೆಸುತ್ತಿರುವ ಇವರು, ವೃತ್ತಿಯ ಜೊತೆಗೆ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಚಿತ್ರಕಲೆಯಲ್ಲೂ ಆಸಕ್ತಿ ಇದೆ. ವಾಲ್‌ ಪೇಂಟಿಂಗ್‌ ಮಾಡುತ್ತಾರೆ. ಸಂಗೀತ ಕಲಿತಿರುವ ಕಾರಣ ಸುಶ್ರಾವ್ಯವಾಗಿ ಸಿನಿಮಾ, ಭಕ್ತಿಗೀತೆ ಹಾಗೂ ಜನಪದ ಹಾಡುಗಳನ್ನು ಹಾಡುತ್ತಾರೆ. ಬೈಕ್ ರೈಡಿಂಗ್‌, ಟ್ರೆಕ್ಕಿಂಗ್‌ನಂತಹ ಹವ್ಯಾಸಗಳೂ ಕಾರ್ತಿಕ್‌ ಅವರಿಗಿದೆ.
 


–ಕಾರ್ತಿಕ್‌ ಖಾಡಿಲ್ಕರ್‌
ಸಂಪರ್ಕಕ್ಕೆ: 97434 87038

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT