ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಸೇವೆ ಮುಂದುವರಿಸಲು ಒತ್ತಾಯ

ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆ ಸಭಾಂಗಣದಲ್ಲಿ ಸಂಸದ ಸುರೇಶ ಅಂಗಡಿ ಹೇಳಿಕೆ
Last Updated 10 ಏಪ್ರಿಲ್ 2018, 5:40 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ವಿಮಾನನಿಲ್ದಾಣದಿಂದ ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಎಲ್ಲ ವಿಮಾನಗಳ ಸೇವೆಯನ್ನು ಮುಂದುವರಿಸುವಂತೆ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದರು. ನಗರದ ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಮೇಲ್ದರ್ಜೆಗೇರಿರುವ ಇಲ್ಲಿನ ವಿಮಾನನಿಲ್ದಾಣ ರಾಜ್ಯದ ಎರಡನೇ ಪ್ರಮುಖ ನಿಲ್ದಾಣವಾಗಿದೆ. ಆರ್ಥಿಕವಾಗಿಯೂ ಅತಿ ಹೆಚ್ಚು ಲಾಭ ತರುತ್ತಿದೆ. ಇಲ್ಲಿಂದ ಹೊರಡುವ ಸ್ಪೈಸ್‌ ಜೆಟ್ ಕಂಪನಿಯು ಎಲ್ಲ ವಿಮಾನಗಳನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದರೆ ಬೆಳಗಾವಿಯ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತದೆ. ಪರ್ಯಾಯ ವ್ಯವಸ್ಥೆ ಆಗುವವರೆಗೂ ಈ ಸೇವೆ ಮುಂದುವರಿಸಲು ಕಂಪನಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಈ ಹಿಂದೆಯೇ ಸ್ಥಳಾಂತರದ ಮುನ್ಸೂಚನೆ ಸಿಕ್ಕಾಗ ಸಚಿವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದೆ. ಆಗ ಸ್ಪೈಸ್ ಜೆಟ್ ಸ್ಥಳಾಂತರ ನಿರ್ಧಾರದಿಂದ ಹಿಂದೆ ಸರಿದಿತ್ತು. ಆದರೆ, ಹುಬ್ಬಳ್ಳಿ ಭಾಗದ ರಾಜಕೀಯ ಒತ್ತಡದಿಂದ ಈಗ ಮತ್ತೆ ಸ್ಥಳಾಂತರಕ್ಕೆ ಮುಂದಾಗಿದೆ. ಈಗಲೂ ಸಚಿವರೊಂದಿಗೆ ಮಾತನಾಡಿದ್ದೇನೆ. ವಿಮಾನ ಸೇವೆಯ ಅಗತ್ಯದ ಬಗ್ಗೆ ಸಾರ್ವಜನಿಕರಿಂದಲೂ ಒತ್ತಡ ಬರಬೇಕಾದ ಅಗತ್ಯವಿದೆ’ ಎಂದರು.

ಅಮಿತ್‌ ಶಾ ಗಮನಕ್ಕೆ: ‘ಏ. 13ರಂದು ನಗರಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡೋಣ. ಉದ್ಯಮಿಗಳ ನಿಯೋಗಕ್ಕೆ ಅವರನ್ನು ಭೇಟಿ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

‘ನಗರದ ಅಭಿವೃದ್ಧಿ ವಿಷಯದಲ್ಲಿ ಇಲ್ಲಿನ ಸಂಘ–ಸಂಸ್ಥೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ. ವಿಮಾನಯಾನ ಸೇವೆ ಸ್ಥಳಾಂತರಗೊಂಡರೆ ಬೆಳಗಾವಿ ಮಾತ್ರವಲ್ಲದೇ ವಿಜಯಪುರ, ಬಾಗಲಕೋಟೆ ಹಾಗೂ ಮಹಾರಾಷ್ಟ್ರದ ಮೇಲೂ ಪರಿಣಾಮ ಉಂಟಾಗುತ್ತದೆ. ವಿಜಯಪುರ ಹಾಗೂ ಬಾಗಲಕೋಟೆ ಭಾಗದವರು ಹುಬ್ಬಳ್ಳಿಗಿಂತ ಹೆಚ್ಚಾಗಿ ಬೆಳಗಾವಿ ನಿಲ್ದಾಣವನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಆದಷ್ಟು ಬೇಗ ಸಚಿವರನ್ನು ಭೇಟಿಯಾಗಿ ಒತ್ತಾಯಿಸುವ ಅಗತ್ಯವಿದೆ. ಅವಶ್ಯ ಬಿದ್ದರೆ ಪ್ರಧಾನಿ ಗಮನಕ್ಕೂ ತಂದು ಸಮಸ್ಯೆ ಪರಿಹಾರಕ್ಕೆ ಮುಂದಾಗೋಣ’ ಎಂದರು.

‘ಬೆಳಗಾವಿಗೆ ಬರುವವರು ಮೊದಲು ಕೇಳುವುದೇ ವಿಮಾನ ನಿಲ್ದಾಣ. ಈಗ ಅದೇ ಸ್ಥಗಿತಗೊಂಡರೆ ಹೇಗೆ?’ ಎಂದು ಕ್ರೆಡಾಯ್ ಅಧ್ಯಕ್ಷ ಕ್ವಾಯಿಸ್ ನುರಾಣಿ ಕೇಳಿದರು.

ಕ್ರೆಡಾಯ್‌ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ ಮಾತನಾಡಿದರು. ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

**

ಬೆಳಗಾವಿಯಿಂದ ಹುಬ್ಬಳ್ಳಿಗೆ ವಿಮಾನಯಾನ ಸೇವೆ ಸ್ಥಳಾಂತರಗೊಂಡರೆ ಇಲ್ಲಿನ ವ್ಯಾಪಾರ, ಕೈಗಾರಿಕೆಗಳು ನಷ್ಟಕ್ಕೆ ಸಿಲುಕುತ್ತವೆ. ಜನಪ್ರತಿನಿಧಿಗಳು ಇದಕ್ಕೆ ಅವಕಾಶ ಕೊಡಬಾರದು –  ಅವಿನಾಶ ಪೋತದಾರ, ಉದ್ಯಮಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT