ಕಾಡಂಚಿನ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಕರೆ

7
ವೆಂಕಟಯ್ಯನ ಛತ್ರ: ಸರ್ಕಾರಿ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಕಾಡಂಚಿನ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಕರೆ

Published:
Updated:
Deccan Herald

ಚಾಮರಾಜನಗರ: ‘ಗಡಿ ಜಿಲ್ಲೆಯ ಕಾಡಂಚಿನ ಗ್ರಾಮದ ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚಿನ ತರಬೇತಿ ನೀಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ ಅವರು ದೈಹಿಕ ಶಿಕ್ಷಣ ಶಿಕ್ಷಕರಿಗೆ ಬುಧವಾರ ಸಲಹೆ ನೀಡಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ವೆಂಕಟಯ್ಯನ ಛತ್ರ ಸರ್ಕಾರಿ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಂಕಟಯ್ಯನ ಛತ್ರದ ಕ್ಲಸ್ಟರ್‌ ವಲಯದಲ್ಲಿ 23 ಶಾಲೆಗಳಿವೆ. ಕ್ಲಸ್ಟರ್‌ ಮಟ್ಟದ ಅಧಿಕಾರಿಗಳು ಶಾಲಾ ಮಕ್ಕಳ ಕ್ರೀಡೋತ್ಸಾಹಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.

‘ಈ ವಲಯದ ಶಾಲೆಗಳು ಕಾಡಂಚಿನಲ್ಲಿವೆ. ಇಲ್ಲಿನ ಮಕ್ಕಳು ದೈಹಿಕವಾಗಿ ಸದೃಢರಾಗಿರುತ್ತಾರೆ. ಇಂತಹ ಮಕ್ಕಳನ್ನು ಗುರುತಿಸಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು’ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷೆ ಎನ್. ನೇತ್ರಾವತಿ ಮಾತನಾಡಿ, ‘ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಶಾಲೆಗಳಿಗೆ ಕೀರ್ತಿ ತಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟು ಅಗಬಹುದು’ ಎಂದು ತಿಳಿಸಿದರು.

ಬ್ಯಾಡಮೂಡ್ಲು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಚಯ್ಯ, ದೊಡ್ಡಮೋಳೆ ಗ್ರಾಮ ಪಚಾಯಿತಿ ಅಧ್ಯಕ್ಷೆ ಸುಧಾ ನಾಗರಾಜು, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಕೆ.ಎಸ್. ಮಾದಪ್ಪ, ಎಸ್‌ಡಿಎಂಸಿ ಸದಸ್ಯ ಶಿವಣ್ಣ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಜಯರಾಜು, ಸಿಆರ್‌ಪಿ ನಾಗೇಂದ್ರ ಇದ್ದರು.

ಉಡಿಗಾಲ ವಲಯ ಮಟ್ಟದ ಕ್ರೀಡಾಕೂಟ: ಉಡಿಗಾಲ ವಲಯ ಮಟ್ಟದ ಕ್ರೀಡಾಕೂಟವು ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಿತು. ಉಡಿಗಾಲ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜಿ.ಮಹೇಶ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಶಿಕ್ಷಣ ಇಲಾಖೆಯ ಕ್ರೀಡಾಕೂಟಗಳಲ್ಲಿ ಗ್ರಾಮೀಣ ಆಟಗಳನ್ನು ಸೇರಿಸುವ ಮೂಲಕ ಅವುಗಳಿಗೆ ಉತ್ತೇಜನ ನೀಡಬೇಕು’ ಎಂದು ಹೇಳಿದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಶಂಕರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎನ್.ಜೋಸೆಫ್, ಸದಸ್ಯ ಜಯರಾಜು, ಸಿದ್ದಲಿಂಗಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !