ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯಾಗಿಯೇ ಉಳಿದ ಬಸ್‌ ನಿಲ್ದಾಣ

ಸುಂಟಿಕೊಪ್ಪದ ಸಮಸ್ಯೆಗಳತ್ತ ಗಮನಹರಿಸುವರೇ ಶಾಸಕರು?
Last Updated 11 ಜೂನ್ 2018, 10:32 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಮಡಿಕೇರಿ ಕ್ಷೇತ್ರದಿಂದ ವಿಧಾನಸಭೆಗೆ ಮತ್ತೊಮ್ಮೆ ಎಂ.ಪಿ. ಅಪ್ಪಚ್ಚು ರಂಜನ್‌ ಆಯ್ಕೆಗೊಂಡಿದ್ದಾರೆ. ಈ ಭಾಗದ ಸಮಸ್ಯೆಗಳನ್ನು ಪರಿಹರಿಸಲು ಮತದಾರರು ಅವರಿಗೆ ಅವಕಾಶ ನೀಡಿದ್ದಾರೆ.

ಸುಂಟಿಕೊಪ್ಪ, ಬ್ರಿಟಿಷರ ಕಾಲದಲ್ಲಿ ಉಲುಗುಲಿ ಗ್ರಾಮವಾಗಿತ್ತು. ಈ ಗ್ರಾಮದಲ್ಲಿ ಅತ್ಯಂತ ದೊಡ್ಡದಾದ ಸಂತೆಗೆ ಹೆಸರುವಾಸಿಯಾಗಿದ್ದ ಈ ಭಾಗವನ್ನು ‘ಸಂತೆಕೊಪ್ಪ’ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಅದು ಸುಂಟಿಕೊಪ್ಪ ಎಂದು ಪರಿಚಿತವಾಗಿದೆ. ಇಂದಿಗೂ ಸಂತೆ ದಿನವಾದ ಭಾನುವಾರ ಸುತ್ತಮುತ್ತಲಿನ ಅನೇಕ ಗ್ರಾಮದ ರೈತರು ಮತ್ತು ಸಾರ್ವಜನಿಕರು ವ್ಯಾಪಾರಕ್ಕೆ ಬರುತ್ತಾರೆ.

ಸಂತೆಗೆ ಹೆಸರುವಾಸಿಯಾದ ಸುಂಟಿಕೊಪ್ಪದಲ್ಲಿ ಇಂದಿಗೂ ಸೂಕ್ತ ಬಸ್‌ ನಿಲ್ದಾಣವೇ ಇಲ್ಲ! ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯೂ ಸುಂಟಿಕೊಪ್ಪದ ಮೂಲಕವೇ ಹಾದು ಹೋಗಿದ್ದು, ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್ಸುಗಳು ಈ ಮಾರ್ಗದಲ್ಲಿಯೇ ಹಾಸನ, ಚಿಕ್ಕಮಗಳೂರು, ಸಕಲೇಶಪುರ, ಮೈಸೂರು, ಮಂಗಳೂರು, ಬೆಂಗಳೂರು ಇನ್ನಿತರ ಕಡೆಗಳಿಗೆ ತೆರಳುತ್ತವೆ. ಆದರೆ, ಪ್ರಯಾಣಿಕರಿಗೆ ಬಸ್‌ ನಿಲ್ದಾಣವಿಲ್ಲದೆ ರಸ್ತೆ ಬದಿ ಹಾಗೂ ಅಂಗಡಿ ಮುಂದೆ ನಿಲ್ಲಬೇಕಾದಂತಹ ಪರಿಸ್ಥಿತಿಯಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಿಲ್ಲ.

ಗ್ರಾಮ ಪಂಚಾಯಿತಿ ಮತ್ತು ಮಾರುಕಟ್ಟೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ, ಈ ಸ್ಥಳದಲ್ಲಿ ಬಸ್‌ ನಿಲ್ದಾಣವನ್ನು ಮಾಡುವುದಾಗಿ ಶಾಸಕ ಅಪ್ಪಚ್ಚು ರಂಜನ್ ಅನೇಕ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭರವಸೆ ನೀಡಿದ್ದರು. ಅದು ಜಾರಿಗೆ ಮಾತ್ರ ಬಂದಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಸಂಚಾರದ ಕಿರಿಕಿರಿ:
ಸುಂಟಿಕೊಪ್ಪ ಮಾರ್ಗದಲ್ಲಿ ಮಿತಿ ಮೀರಿದ ಪ್ರವಾಸಿ ವಾಹನಗಳು ಸಂಚರಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಸಹ ಇಕ್ಕಟ್ಟಿನಿಂದ ಇರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ವಾಹನ ನಿಲುಗಡೆಗೆ ಸ್ಥಳಾವಕಾಶವೂ ಕಡಿಮೆಯಿದೆ.

ಕಳೆ ಕಳೆದುಕೊಂಡ ಫುಟ್‌ಬಾಲ್‌ ಮೈದಾನ: ‘ಕೊಡಗಿನ ಕೋಲ್ಕತ್ತಾ’, ‘ಫುಟ್‌ಬಾಲ್‌ ತವರೂರು’ ಸುಂಟಿಕೊಪ್ಪದಲ್ಲಿ ಫುಟ್‌ಬಾಲ್‌ ಮೈದಾನ ತನ್ನ ಅಂದ ಕಳೆದುಕೊಳ್ಳುತ್ತಿದೆ. ಜಿಎಂಪಿ ಶಾಲೆಯ ಅಧೀನದಲ್ಲಿರುವ ಈ ಮೈದಾನದಲ್ಲಿ ಆಡಿದ ಅದೆಷ್ಟೋ ಆಟಗಾರರು ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಗಳಲ್ಲಿ ಮಿಂಚಿದ್ದರು. ಹಾಗೆಯೇ ಅಂತರ ರಾಷ್ಟ್ರೀಯ ಆಟಗಾರರನ್ನು ಇಲ್ಲಿನ ಕ್ರೀಡಾ ಭಿಮಾನಿಗಳಿಗೆ ಪರಿಚಯಿಸಿದ ಕೀರ್ತಿ ಈ ಮೈದಾನಕ್ಕಿದೆ.

ಆದರೆ, ಇಂದು ಈ ಮೈದಾನ ದಲ್ಲಿ ಸೂಕ್ತವಾದ ವೇದಿಕೆ ಇಲ್ಲ. ಕ್ರೀಡಾಪಟುಗಳು ಉಡುಪು ಬದಲಾಯಿಸುವುದಕ್ಕೆ ಕೊಠಡಿಗಳ ಸಮಸ್ಯೆ, ಶೌಚಾಲಯದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಯ ಜೊತೆಯಲ್ಲಿ ಮೈದಾನದ ಅಲ್ಲಲ್ಲಿ ಕಲ್ಲುಗಳು ಬಿದ್ದಿದ್ದು ಕ್ರೀಡಾ ಚಟುವಟಿಕೆಗೆ ಅಡ್ಡಿ ಉಂಟಾಗಿದೆ ಎಂಬ ದೂರಿದೆ.

ಅಕ್ರಮ ಗಣಿ, ಮರಳು ದಂಧೆ: ಅಕ್ರಮ ಗಣಿ ಮತ್ತು ಮರಳು ತೆಗೆಯುವ ದಂಧೆ ನಿಷೇಧವಾಗಿದ್ದರೂ ಸಮೀಪದ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ಹರದೂರು ಹೊಳೆಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಈ ಭಾಗದ ಗ್ರಾಮಸ್ಥರಿಗೂ ತೊಂದರೆ ಉಂಟಾಗುತ್ತಿದೆ.

‘ವಸತಿ ಗೃಹದ ಸಮಸ್ಯೆ: ರಕ್ಷಣೆ ನೀಡುವ ಪೊಲೀಸ್ ಸಿಬ್ಬಂದಿಗೆ ವಸತಿ ಸಮಸ್ಯೆಯಿದೆ. ಹಲವಾರು ಬಾರಿ ಸೋಮವಾರಪೇಟೆ ತಹಶೀಲ್ದಾರ್‌ ಹಾಗೂ ಕಂದಾಯ ಇಲಾಖೆಗೆ ದಾಖಲೆ ಗಳನ್ನು ನೀಡಿದ್ದರೂ ಇತ್ತ ಗಮನ ಹರಿಸು ತ್ತಿಲ್ಲ’ ಎನ್ನುತ್ತಾರೆ ಪಿಎಸ್‌ಐ ಜಯರಾಂ.

‘ಈ ಹೋಬಳಿಯ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಬಹಳಷ್ಟು ಅರಿವು ಇರುವು ದರಿಂದ ಸಾರ್ವಜನಿಕರ ನಿರೀಕ್ಷೆಗೂ ಮೀರಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.

ಗ್ರಾಮಗಳ ರಸ್ತೆ ವಿಸ್ತರಣೆ, ಸರ್ಕಾರಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಿ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಆಗ್ರಹಿಸುತ್ತಾರೆ.

ಬಸ್ ನಿಲ್ದಾಣವಾದರೆ ಪ್ರಯಾಣಿಕರಿಗೆ ಅನುಕೂಲ; ಅಂಗಡಿಗಳ ಮುಂದೆ ನಿಂತು ಬಸ್‌ ಏರುವುದು ತಪ್ಪಲಿದೆ. ಶಾಸಕ ಅಪ್ಪಚ್ಚು ರಂಜನ್‌ ಅವರು ಸುಸಜ್ಜಿತ ಬಸ್‌ ನಿಲ್ದಾಣಕ್ಕೆ ಆದ್ಯತೆ ನೀಡಲಿ.
ಅಣ್ಣಾ ಶೆರೀಫ್, ಅಧ್ಯಕ್ಷ, ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘ

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ನೇಮಕವಾಗಬೇಕು. ರಾತ್ರಿ ವೇಳೆಯೂ ವೈದ್ಯರು ಕರ್ತವ್ಯದಲ್ಲಿರುವಂತೆ ನೋಡಿಕೊಳ್ಳಬೇಕು
– ಪಿ.ಆರ್. ಸುನಿಲ್ ಕುಮಾರ್, ಅಧ್ಯಕ್ಷ, ನಗರ ಬಿಜೆಪಿ ಘಟಕ

– ಸುನಿಲ್ ಎಂ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT