ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವುಲೆ ಕೆರೆ: ಪರ, ವಿರೋಧದ ಪ್ರತಿಭಟನೆ

Last Updated 7 ಫೆಬ್ರುವರಿ 2018, 7:13 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ನವುಲೆ ಕೆರೆ ಉಳಿಸಬೇಕೆಂದು ಒತ್ತಾಯಿಸಿ ಪರಿಸರಾಸಕ್ತರು ಮಂಗಳವಾರ ನವುಲೆ ಕೆರೆ ಬಳಿ ಪ್ರತಿಭಟನೆ ನಡೆಸಿದರು. ನವುಲೆ ಕೆರೆಗೆ ಹೊಂದಿಕೊಂಡಂತೆ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಕೆರೆಯ 30 ಎಕರೆಗೂ ಹೆಚ್ಚು ಪ್ರದೇಶ ಒತ್ತುವರಿಯಾಗಿದೆ. ಶೀಘ್ರ ಕೆರೆ ಒತ್ತುವರಿ ತಡೆಯಬೇಕು. ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಕೆರೆ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಹಿಂದೆಯೇ ನವುಲೆ ಕೆರೆಯನ್ನು ರಕ್ಷಿಸಬೇಕು ಎಂದು ಪ್ರತಿಭಟನೆ ನಡೆಸಲಾಗಿತ್ತು. ರಸ್ತೆ ಅಭಿವೃದ್ಧಿ ಮಾಡುವುದಾದರೇ ಕೆರೆಯನ್ನು ಉಳಿಸಿಕೊಂಡೆ ಅಭಿವೃದ್ದಿ ಮಾಡಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿತ್ತು. ಆದರೆ ಮತ್ತೆ ಕಾಮಗಾರಿ ಆರಂಭಿಸಲು ಮುಂದಾಗಿದ್ದರಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಗ್ರಾಮಸ್ಥರ ಪ್ರತಿಭಟನೆ: ಪರಿಸರಾಸಕ್ತರು ನಡೆಸಿದ ಪ್ರತಿಭಟನೆಗೆ ವಿರುದ್ಧವಾಗಿ ಸ್ಥಳೀಯ ನವುಲೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ  ಸಂಚಾರ ದಟ್ಟಣೆ ಇದೆ. ಕೃಷಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹೋಗಿಬರುತ್ತಾರೆ. ಹಲವು ಶಾಲಾ ಕಾಲೇಜು, ಗ್ರಾಮಗಳಿಗೂ ಸಂಪರ್ಕ ರಸ್ತೆ ಇದಾಗಿದೆ ಎಂದರು.

ಸವಳಂಗ ಮಾರ್ಗದ ಕಡೆಗೆ ಹೋಗುವ ವಾಹನಗಳು  ಇದೇ ರಸ್ತೆ ಮೂಲಕ ಸಂಚರಿಸುತ್ತವೆ. ರಸ್ತೆ ವಿಸ್ತರಣೆ ಮಾಡದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದೆ. ಹಾಗಾಗಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೆರೆಯ ಜಾಗವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಪರಿಸರಾಸಕ್ತರಾದ ಕೆ.ವಿ.ವಸಂತ್‌ಕುಮಾರ್, ಡಾ.ಶ್ರೀಪತಿ, ಅಶ್ವತ್ಥ ನಾರಾಯಣ ಶೆಟ್ಟಿ, ಅ.ನ.ವಿಜಯೇಂದ್ರ ರಾವ್, ವಿಜಯ್ ಕುಮಾರ್, ಪರಿಸರ ನಾಗರಾಜ್, ಸುಬ್ಬಣ್ಣ, ಅನಿಲ್ ಕುಮಾರ್ ಶೆಟ್ಟಿ, ರವಿ ಹಾಗೂ ನವುಲೆ ಗ್ರಾಮಸ್ಥರಾದ ಮಂಜು, ಕೃಷ್ಣಪ್ಪ, ರವೀಂದ್ರ ಇದ್ದರು.

ಅಂದು ವಿರೋಧಿಸಲಿಲ್ಲ ಏಕೆ ?

ನವುಲೆ ಕೆರೆಯ ಪಕ್ಕದಲ್ಲಿಯೇ ಕ್ರಿಕೆಟ್ ಕ್ರೀಡಾಂಗಣಕ್ಕಾಗಿ 27 ಎಕರೆಯಷ್ಟು ಕೆರೆಯನ್ನು ಬಳಸಿಕೊಳ್ಳಲಾಗಿದೆ. ಆಗ ಪರಿಸರ ಪ್ರೇಮಿಗಳು ವಿರೋಧಿಸಲಿಲ್ಲ. ಆದರೆ ಸಾವಿರಾರು ಜನರಿಗೆ ಅನುಕೂಲವಾಗುವ ರಸ್ತೆ ಅಭಿವೃದ್ಧಿಗಾಗಿ ಅಲ್ಪ ಪ್ರಮಾಣದ ಕೆರೆ ಜಾಗ ಬಳಸಿಕೊಳ್ಳುತ್ತಿರುವಾಗ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ಸ್ಥಳೀಯ ಗ್ರಾಮಸ್ಥರು ಪ್ರತಿರೋಧ ಒಡ್ಡಿದರು. ಈ ಸಂದರ್ಭ ಕೆಲಕಾಲ ಪರ-ವಿರೋಧ ಪ್ರತಿಭಟನೆಗಳಿಂದಾಗಿ ಗೊಂದಲದ ವಾತಾವರಣ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT