ಚಾಮರಾಜನಗರ: ಪರಿಸರ ಸ್ನೇಹಿ ಗಣಪತಿಗೆ ಹೆಚ್ಚಿನ ಬೇಡಿಕೆ

7
ಸ್ಥಳೀಯ ಆಡಳಿತ ಎಚ್ಚರಿಕೆ: ಪಿಒಪಿ ಗಣೇಶನ ಮಾರಾಟ, ಖರೀದಿಗೆ ಜನರ ಹಿಂದೇಟು

ಚಾಮರಾಜನಗರ: ಪರಿಸರ ಸ್ನೇಹಿ ಗಣಪತಿಗೆ ಹೆಚ್ಚಿನ ಬೇಡಿಕೆ

Published:
Updated:
Deccan Herald

ಗುಂಡ್ಲುಪೇಟೆ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ಮಾಡಿದ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ರಾರಾಜಿಸುತ್ತಿದ್ದರೂ ಗ್ರಾಹಕರು ಪರಿಸರ ಸ್ನೇಹಿ ಗಣಪನತ್ತ ಮುಖ ಮಾಡಿದ್ದಾರೆ.

ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಕೊಳ್ಳಲು ಜನರು ಉತ್ಸಾಹ ತೋರುತ್ತಿದ್ದುದು ಪಟ್ಟಣದ ಮಾರುಕಟ್ಟೆಯಲ್ಲಿ ಬುಧವಾರ ಕಂಡುಬಂತು. ಹಣ ದುಬಾರಿಯಾದರೂ ಜನರು ವಿಘ್ನನಿವಾರಕನ ಮಣ್ಣಿನ ಮೂರ್ತಿಗಳನ್ನೇ ಖರೀದಿಸಿದರು.

ಅನೇಕ ಮಾರಾಟಗಾರರು ಮೈಸೂರಿನಿಂದ ಗಣೇಶ ಮತ್ತು ಗೌರಿಯ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಾರೆ. ಕುಂಬಾರಿಕೆ ಕಸುಬನ್ನು ರೂಢಿಸಿಕೊಂಡಿರುವ ಕೆಲವರು, ಗ್ರಾಹಕರಿಂದ ಮುಂಗಡ ಪಡೆದು ಇಲ್ಲಿಯೇ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ಪಟ್ಟಣದ ಹಳೇ ಬಸ್ ನಿಲ್ದಾಣದ ರಸ್ತೆಯಲ್ಲಿ ಅನೇಕರು ಮಣ್ಣಿನ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದಾರೆ.

ಸಾರ್ವಜನಿಕರು ಮತ್ತು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಯುವಕರು ₹10 ಸಾವಿರದವರೆಗೂ ನೀಡಿ ಮಣ್ಣಿನ ಗಣಪತಿಯನ್ನು ಖರೀದಿಸಲು ಮುಂದೆ ಬರುತ್ತಿದ್ದಾರೆ. 

ಬಳಸಲು ಹಿಂದೇಟು: ಪಿಒಪಿ ಗಣೇಶ ವಿಗ್ರಹಗಳನ್ನು ತಯಾರು ಮತ್ತು ಮಾರಾಟ ಮಾಡಬಾರದು ಎಂದು ಪುರಸಭೆ ಆಡಳಿತ ಹೇಳಿತ್ತು. ತಯಾರಿಕೆ ಅಥವಾ ಮಾರಾಟ ಮಾಡಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರಿಂದ ‌ಪಿಒಪಿ ಮೂರ್ತಿಯನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ.

ಪಟ್ಟಣದ ಕುಂಬಾರರ ಬೀದಿಯಲ್ಲಿ ಮೋಹನ್‌ ಕುಮಾರ್ ಎಂಬುವರು 20 ವರ್ಷಗಳಿಂದ ಮಣ್ಣಿನ ಗಣಪತಿಯನ್ನು ಮಾಡಿ ಮಾರಾಟ ಮಾಡುತ್ತಾರೆ. ಈ ವರ್ಷ ಅವರ ಗಣಪತಿ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.

‘ಇತ್ತೀಚಿನ ದಿನಗಳಲ್ಲಿ ಪಿಒಪಿ ಗಣಪತಿ ವಿಗ್ರಹಗಳಿಂದಾಗಿ ಮಣ್ಣಿನ ಗಣಪತಿಗೆ ಬೇಡಿಕೆ ಕಡಿಮೆಯಾಗಿತ್ತು. ಈಗ ಸ್ಥಳೀಯ ಆಡಳಿತ ನೀಡಿರುವ ಎಚ್ಚರಿಕೆಯಿಂದ ಮಣ್ಣಿನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಲ್ಲಿ ಸಂಪಾದನೆ ಕಡಿಮೆಯಾದರೂ ಪರಿಸರಕ್ಕೆ ಉಪಯೋಗ ಆಗುವಂತಹದ್ದನ್ನು ಮಾಡುತ್ತಿದ್ದೇವೆ ಎಂಬ ತೃಪ್ತಿ ಇದೆ’ ಎಂದು ಮೋಹನ್‌ ಕುಮಾರ್‌ ತಿಳಿಸಿದರು.

ಬಗೆ ಬಗೆಯ ಮೂರ್ತಿಗಳು: 12 ಇಂಚಿನಿಂದ ಹಿಡಿದು 5 ಅಡಿಗಳಷ್ಟು ಎತ್ತರದ ವಿವಿಧ ವಿನ್ಯಾಸದ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಲಕ್ಷಿ ಗಣಪತಿ, ಚಾಮುಂಡಿ ಮೇಲೆ ಕುಳಿತಿರುವ ಗಣಪತಿ, ಆಂಜನೇಯ ಗಣಪತಿ, ಸುಬ್ರಹ್ಮಣ್ಯ ಗಣಪತಿ ಹೀಗೆ ವಿವಿಧ ಗಣೇಶ ಮೂರ್ತಿಗಳು ದೊರಕುತ್ತಿವೆ.

‘ಹಿಂದೆ ಪಿಒಪಿಯಿಂದ ಮಾತ್ರ ವಿವಿಧ ವಿನ್ಯಾಸದ ಮೂರ್ತಿಗಳನ್ನು ತಯಾರು ಮಾಡಲು ಸಾಧ್ಯ ಎಂದು ಹೇಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಮಣ್ಣಿನಿಂದ ವಿವಿಧ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಈ ಬಾರಿ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ವ್ಯಾಪಾರಿ ಚಂದ್ರು ತಿಳಿಸಿದರು.

‘ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ’

ಪಟ್ಟಣದಲ್ಲಿ ಎಲ್ಲೂ ಪಿಒಪಿ ಗಣೇಶ ಮೂರ್ತಿಗಳನ್ನು ಬಳಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪಂಚಾಯಿತಿ ವ್ಯಾಪ್ತಿಗೆ ಬರುವ ಸ್ಥಳಗಳಲ್ಲೂ ಮಾರಾಟ ಮಾಡಬಾರದು ಎಂದು ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗೂ ಪತ್ರ ಬರೆಯಲಾಗಿದೆ. ಮಾರಾಟ ಮತ್ತು ತಯಾರು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ರಮೇಶ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !