ಸಿದ್ಧತೆ ಹಂತದಲ್ಲಿ ಅಂಗವಿಕಲರ ಗಣತಿ

7
ಚಾಮರಾಜನಗರದಲ್ಲಿ ಅಂಗವಿಕಲರ ಕಾಯ್ದೆ ಆಯುಕ್ತ ವಿ.ಎಸ್‌. ಬಸವರಾಜು ಪತ್ರಿಕಾಗೋಷ್ಠಿ

ಸಿದ್ಧತೆ ಹಂತದಲ್ಲಿ ಅಂಗವಿಕಲರ ಗಣತಿ

Published:
Updated:
Deccan Herald

ಚಾಮರಾಜನಗರ: ರಾಜ್ಯದಾದ್ಯಂತ ಅಂಗವಿಕಲರ ಗಣತಿ ಮಾಡಲು ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಇದು ಈಗ ತಯಾರಿ ಹಂತದಲ್ಲಿದೆ ಎಂದು ರಾಜ್ಯ ಅಂಗವಿಕಲರ ಕಾಯ್ದೆ ಆಯುಕ್ತ ವಿ.ಎಸ್‌. ಬಸವರಾಜು ಅವರು ಶುಕ್ರವಾರ ಹೇಳಿದರು.

ಈ ಉದ್ದೇಶಕ್ಕಾಗಿ ಸರ್ಕಾರವು ಬಜೆಟ್‌ನಲ್ಲಿ ₹5 ಕೋಟಿ ಮೀಸಲಿಟ್ಟಿದೆ. ಗಣತಿ ಪ್ರಕ್ರಿಯೆ ಆರಂಭವಾಗಿ ಪೂರ್ಣಗೊಳ್ಳಲು ಒಂದೂವರೆ ವರ್ಷ ಬೇಕಾಗಬಹುದು. ಅದಕ್ಕೂ ಮೊದಲು ಪ್ರಾಯೋಗಿಕವಾಗಿ ಗಣತಿ ನಡೆಸಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2011ರ ಜನಗಣತಿಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ 20 ಸಾವಿರದಷ್ಟು ಅಂಗವಿಕಲರಿದ್ದರು. ಈಗ 35 ಸಾವಿರದಿಂದ 40 ಸಾವಿರ ಮಂದಿ ಇರಬಹುದು ಎಂದರು.

ಸಮನ್ವಯ ಮುಖ್ಯ: ‘ಅಂಗವಿಕಲರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮಕ್ಕಳಲ್ಲಿ ಅತಿ ಸಣ್ಣ ವಯಸ್ಸಿನಲ್ಲಿ ಅಂದರೆ 5ರಿಂದ 6 ವರ್ಷಗಳಿಗಿಂತಲೂ ಮೊದಲು ಅಂಗ ವೈಕಲ್ಯವನ್ನು ಗುರುತಿಸುವುದು ಅತಿ ಮುಖ್ಯ. ಬೇಗ ಗುರುತಿಸಿದರೆ, ಪುನಶ್ಚೇತನ ಕಾರ್ಯಕ್ರಮಕ್ಕೆ ಸುಲಭವಾಗುತ್ತದೆ’ ಎಂದು ಹೇಳಿದರು.

‘ಅಂಗವಿಕಲರಿಗೆ ಉತ್ತಮ ಸೇವೆ, ಸೌಲಭ್ಯ ಸಿಗಬೇಕಾದರೆ ಅಂಗವಿಕಲರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ನಡುವೆ ಸಮನ್ವಯ ಅತ್ಯಂತ ಮುಖ್ಯ. ಮೂರು ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಇದರ ಬಗ್ಗೆ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಯಾವ ರೀತಿ ಸಮನ್ವಯದಿಂದ ಕೆಲಸ ಮಾಡಬಹುದು ಎಂಬ ಬಗ್ಗೆ ಎರಡು– ಮೂರು ತಿಂಗಳಲ್ಲಿ ಕ್ರಿಯಾ ಯೋಜನೆ ರೂಪಿಸುವ ಭರವಸೆಯನ್ನು ನೀಡಿದ್ದಾರೆ’ ಎಂದರು.

ಡೇ–ಕೇರ್‌ ಕೇಂದ್ರ: ‘ಅಂಗವಿಕಲ ಮಕ್ಕಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಡೇ ಕೇರ್‌ ಕೇಂದ್ರಗಳನ್ನು ಆರಂಭಿಸುವಂತೆ ಅನೇಕ ಪೋಷಕರು ಮನವಿ ಮಾಡಿದ್ದಾರೆ. ಈ ಅಂಶವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ನಮ್ಮಲ್ಲಿ ಅದಕ್ಕೆ ಬೇಕಾದ ಸಂಪ‍ನ್ಮೂಲ ಇದೆ. ಪ್ರಯತ್ನ ಮಾಡಬೇಕಷ್ಟೆ. ಈ ಪ್ರಸ್ತಾವಕ್ಕೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಸ್ಪಂದಿಸಿದ್ದು, ಬ್ಲಾಕ್‌ ಮಟ್ಟದಲ್ಲಿ ಡೇ–ಕೇರ್‌ ಕೇಂದ್ರ ಆರಂಭಿಸಲು ಕ್ರಿಯಾ ಯೋಜನೆ ರೂಪಿಸುವುದಾಗಿ ಹೇಳಿದ್ದಾರೆ’ ಎಂದು ಮಾಹಿತಿ ನೀಡಿದರು.

ಮಾತ್ರೆಗಳ ಕೊರತೆ: ‘ವಿವಿಧ ರೀತಿಯ ಅಂಗವೈಕಲ್ಯದಿಂದ ಬಳಲುತ್ತಿರುವರಿಗೆ ಬೇರೆ ಬೇರೆ ರೀತಿಯ ಮಾತ್ರೆಗಳು ಬೇಕಾಗುತ್ತವೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧ ಲಭ್ಯವಾಗುತ್ತಿಲ್ಲ. ಇದರಿಂದ ತಮಗೆ ಆರ್ಥಿಕ ಹೊರೆ ಆಗುತ್ತಿದೆ ಎಂದು ಪೋಷಕರಿಂದ ಎಂಬ ದೂರುಗಳು ಬಂದಿವೆ. ಇದನ್ನು ಜಿಲ್ಲಾ ಆರೋಗ್ಯಾಧಿಕಾರಿ ಅವರ ಗಮನಕ್ಕೆ ತಂದಿದ್ದೇನೆ. ಅಗತ್ಯ ಮಾತ್ರೆಗಳನ್ನು ಖರೀದಿಸಲಾಗುವುದು ಎಂದು ಅವರು ಹೇಳಿದ್ದಾರೆ’ ಎಂದರು. 

‘ಅಂಗವಿಕಲರ ವಿಷಯದಲ್ಲಿ ಶಿಕ್ಷಣ ಇಲಾಖೆಯಲ್ಲೂ ಸುಧಾರಣೆ ತರಬೇಕಾಗಿದೆ. ಬ್ಲಾಕ್‌ ಮಟ್ಟದಲ್ಲಿ ಸಂಪನ್ಮೂಲ ಕೇಂದ್ರಗಳ ಅಗತ್ಯವಿದೆ. ಶಾಲೆಗಳಲ್ಲಿ ಇವರಿಗೆ ಮಾತ್ರ ಬೋಧನೆ ಮಾಡುವ ವಿಶೇಷ ಶಿಕ್ಷಕರ ಅವಶ್ಯಕತೆ ಇದೆ’ ಎಂದು ಹೇಳಿದರು.

‌ಅಂಗವಿಕಲರ ಕಾಯ್ದೆಯ ಮಾಜಿ ಆಯುಕ್ತ ರಾಜಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಸವರಾಜು, ಸಹಾಯಕ ಆಯುಕ್ತ ಎಸ್‌.ಕೆ. ಪದ್ಮನಾಭ್‌, ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ದೊಡ್ಡಪ್ಪ ಮೂಲಿಮನೆ ಇದ್ದರು.

ಸಂತೇಮರಹಳ್ಳಿಯಲ್ಲಿ ‍ಪುನಶ್ಚೇತನ ಕೇಂದ್ರ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಅಂಗವಿಕಲರಿಗಾಗಿ ಜಿಲ್ಲಾಮಟ್ಟದಲ್ಲಿ ಪುನಶ್ಚೇತನ ಕೇಂದ್ರ (ಡಿಇಐಸಿ) ತೆರೆಯಲು ಅವಕಾಶ ಇದೆ. ಇಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂಗವಿಕಲ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅವರ ಪುನಶ್ಚೇತನಕ್ಕೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ಇಲ್ಲಿ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ ತಜ್ಞರೂ ಲಭ್ಯವಿರುತ್ತಾರೆ. ಇಂತಹ ಕೇಂದ್ರವು ಸಂತೇಮರಹಳ್ಳಿಯಲ್ಲಿ ಸ್ಥಾಪನೆಯಾಗಲಿದೆ. ಅದಕ್ಕಾಗಿ ಜಾಗ ಗುರುತಿಸಲಾಗಿದೆ ಎಂದು ಬಸವರಾಜು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !