ಗುಂಡಾಲ್ ಜಲಾಶಯ ಈಗ ಕುಡುಕರ ತಾಣ, ಎಲ್ಲೆಂದರಲ್ಲಿ ಬಾಟಲಿ, ಪ್ರವಾಸಿಗರಿಗೆ ತೊಂದರೆ

7
ಸೌಂದರ್ಯಕ್ಕೆ ಧಕ್ಕೆ

ಗುಂಡಾಲ್ ಜಲಾಶಯ ಈಗ ಕುಡುಕರ ತಾಣ, ಎಲ್ಲೆಂದರಲ್ಲಿ ಬಾಟಲಿ, ಪ್ರವಾಸಿಗರಿಗೆ ತೊಂದರೆ

Published:
Updated:
Deccan Herald

ಕೊಳ್ಳೇಗಾಲ: ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಗುಂಡಾಲ್ ಜಲಾಶಯದ ಆವರಣ ಈಗ ಕುಡುಕರ ತಾಣವಾಗಿ ಮಾರ್ಪಟಿದೆ. ಎಲ್ಲೆಂದರಲ್ಲಿ ಎಸೆದ ಮದ್ಯದ ಬಾಟಲಿಗಳೇ ಕಣ್ಣಿಗೆ ರಾಚುತ್ತವೆ.

ತಾಲ್ಲೂಕಿನ ಸತ್ತಿ ಅಂತರರಾಜ್ಯ ಮುಖ್ಯ ರಸ್ತೆಯಲ್ಲಿರುವ ಗುಂಡಾಲ್ ಜಲಾಶಯ ಬಿಳಿಗಿರಿ ರಂಗನ ಬೆಟ್ಟದ ಅರಣ್ಯ ವ್ಯಾಪ್ತಿಗೆ ಒಳಪಡುವ ಬೆಟ್ಟಗಳಿಂದ ಕೂಡಿದ ರಮಣೀಯ ಸ್ಥಳ. ಅಂತಹ ಜಾಗ ಕುಡುಕರ, ಜೂಜುಕೋರರ ಮೋಜಿನ ಅಡ್ಡೆಯಾಗಿ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.

ನೀರಾವರಿ ಇಲಾಖೆಗೆ ಸೇರಿದ ಅತಿಥಿ ಗೃಹವನ್ನು (ಪ್ರವಾಸಿ ಮಂದಿರ) ಕುಡುಕರು ಬಾರ್ ಅಂಡ್ ರೆಸ್ಟೋರೆಂಟ್ ಆಗಿ ಪರಿವರ್ತಿಸುತ್ತಾರೆ. ಅತಿಥಿ ಗೃಹದ ಸುತ್ತ ಪ್ರವಾಸಿಗರೂ ಸೇರಿದಂತೆ ಕೆಲ ಸ್ಥಳೀಯ ಪುಢಾರಿಗಳು ಕುಡಿಯುತ್ತಾ ಕುಳಿತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ಸುಮ್ಮನಾಗುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇಲ್ಲಿಗೆ ಭೇಟಿ ನೀಡುವ ಪ್ರಭಾವಿ ವ್ಯಕ್ತಿಗಳು ಹಾಗೂ ಪ್ರವಾಸಿಗರು ಪಾನಮತ್ತರಾಗಿ ನೀರಿನಲ್ಲಿ ಈಜುವ ಸಾಹವನ್ನೂ ಪ್ರದರ್ಶಿಸುತ್ತಾರೆ. ಇನ್ನು ಕೆಲವರು ಜಲಾಶಯದ ಆವರಣದಲ್ಲಿ ಜೂಜು ಕೂಡ ಆಡುತ್ತಾರೆ ಎಂಬ ಆರೋಪಗಳಿವೆ. ಪೊಲೀಸ್‌ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರಾದ ಪ್ರೇಮ್‌ ಸಾಗರ್‌ ಒತ್ತಾಯಿಸಿದರು.

ಎಲ್ಲೆಂದರಲ್ಲಿ ಬಾಟಲಿ: ಜಲಾಶಯದ ಸೌಂದರ್ಯವನ್ನು ಸವಿಯಲು ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಕುಡಿಯುವ ಉದ್ದೇಶಕ್ಕಾಗಿಯೇ ಇಲ್ಲಿಗೆ ಬರುವವರೂ ಇದ್ದಾರೆ. ಕುಡಿದ ಬಳಿಕ ಬಾಟಲಿಯನ್ನು ರಸ್ತೆ ಮಧ್ಯೆ, ಪ್ರವಾಸಿ ಮಂದಿರದ ಮುಂದೆ, ಜಲಾಶಯದತ್ತ ಎಸೆಯುತ್ತಾರೆ. ಕುಡಿದ ಅಮಲಿನಲ್ಲಿ ಕೆಲವರು ಬಾಟಲಿಯನ್ನು ಒಡೆದೂ ಹಾಕುತ್ತಾರೆ. ಜಲಾಶಯ ಆವರಣ ಪ್ರವೇಶಿಸಿ ಸುತ್ತಲೂ ಕಣ್ಣು ಹಾಯಿಸಿದರೆ ಸಾಕು. ಅಲ್ಲಲ್ಲಿ ಬಾಟಲಿಗಳ ರಾಶಿಯೇ ಕಾಣುತ್ತವೆ.

ಪ್ರವಾಸಿಗರಿಗೆ ತೊಂದರೆ: ‘ಜಲಾಶಯ ತುಂಬಿದಾಗ ವೀಕ್ಷಿಸಲು ಬೇರೆ ಬೇರೆ ರಾಜ್ಯಗಳಿಂದ ಕುಟುಂಬ ಸಮೇತರಾಗಿ ಇಲ್ಲಿಗೆ ಬರುತ್ತಾರೆ. ಕೆಲ ಕುಡುಕರು ಪ್ರವಾಸಿಗರಿಗೆ ಕುಡಿದ ಮತ್ತಿನಲ್ಲಿ ತೊಂದರೆ ನೀಡುತ್ತಾರೆ. ಕೆಲವರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇದರಿಂದ ಅನೇಕ ಬಾರಿ ಗಲಾಟೆಗಳೂ ನಡೆದಿವೆ. ಈ ಜಲಾಶಯಕ್ಕೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಈ ಪ್ರವಾಸಿತಾಣವನ್ನು ಅಭಿವೃದ್ಧಿ ಪಡಿಸಬೇಕು’ ಎಂದು ಪ್ರವಾಸಿ ಸ್ಪಂದನಾ ಒತ್ತಾಯಿಸಿದರು.

‘ಕಡಿವಾಣ ಹಾಕುತ್ತೇವೆ’

‘ಕುಡಿತಕ್ಕೆ ದಾಸರಾಗಿರುವ ಕೆಲವರು ಅಕ್ರಮವಾಗಿ ಮಧ್ಯವನ್ನು ತಂದು ಪ್ರವಾಸಿ ಮಂದಿರದ ಆವರಣದಲ್ಲಿ ಸೇವನೆ ಮಾಡಿದ ಬಳಿಕ ಬಾಟಲಿ ಒಡೆದು ಹಾಕುತ್ತಿದ್ದಾರೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಇದನ್ನು ಪೊಲೀಸರ ಗಮನಕ್ಕೆ ತಂದು, ತಕ್ಷಣವೇ ಕಡಿವಾಣ ಹಾಕುತ್ತೇವೆ’ ಎಂದು ಕಾವೇರಿ ನೀರಾವರಿ ನಿಗಮದ ಕಿರಿಯ ಎಂಜಿನಿಯರ್ ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !