ಮಲ್ಲಿಗೆ ಇಳಿಮುಖ; ಹಣ್ಣು, ತರಕಾರಿ ಯಥಾಸ್ಥಿತಿ

7
ಕನಕಾಂಬರ ಬೆಲೆಯಲ್ಲಿ ಹೆಚ್ಚಳವಿಲ್ಲ

ಮಲ್ಲಿಗೆ ಇಳಿಮುಖ; ಹಣ್ಣು, ತರಕಾರಿ ಯಥಾಸ್ಥಿತಿ

Published:
Updated:
ಅಂಗಡಿಯೊಂದರಲ್ಲಿ ಮಾರಾಟಕ್ಕಿಟ್ಟಿರುವ ಹಣ್ಣುಗಳು

ಚಾಮರಾಜನಗರ: ಕಳೆದ ವಾರ ದುಬಾರಿಯಾಗಿದ್ದ ಹೂವುಗಳ ಬೆಲೆ ಈ ವಾರ ಆರಂಭದಲ್ಲಿ ಇಳಿಮುಖ ಕಂಡಿದೆ. ಉಳಿದಂತೆ, ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಹೆಚ್ಚೇನು ವ್ಯತ್ಯಾಸವಾಗಿಲ್ಲ.

ಕಳೆದ ವಾರದ ಆರಂಭದಲ್ಲಿ ₹ 400ರಷ್ಟಿದ್ದ ಒಂದು ಕೆ.ಜಿ ಮಲ್ಲಿಗೆ ಬೆಲೆ ಸೋಮವಾರ ₹ 240ಕ್ಕೆ ಇಳಿದಿದೆ. ಸೂಜಿಮಲ್ಲಿಗೆಯ ಬೆಲೆಯಲ್ಲೂ ಕೊಂಚ ಇಳಿಕೆ ಆಗಿದೆ. ಹೋದ ವಾರ ಕೆ.ಜಿ ಸೂಜಿ ಮಲ್ಲಿಗೆ ₹ 240ರಿಂದ ₹ 280ಕ್ಕೆ ಮಾರಾಟವಾಗುತ್ತಿತ್ತು. ಈ ವಾರ ₹ 200ಕ್ಕೆ ಸಿಗುತ್ತಿದೆ. ಕನಕಾಂಬರ  ಈ ವಾರವೂ  ₹800ರಿಂದ ₹1,000 ನಡುವೆ ಇದೆ. ಚೆಂಡು ಹೂ ಪ್ರತಿ ಕೆಜಿಗೆ ₹ 10ರಿಂದ ₹ 20ಗೆ ಮಾರಾಟವಾಗುತ್ತಿದೆ.

ತರಕಾರಿ ಯಥಾಸ್ಥಿತಿ: ತರಕಾರಿಗಳ ಬೆಲೆಯಲ್ಲಿ ಹೇಳುವಂತಹ ಬದಲಾವಣೆಯಾಗಿಲ್ಲ. ದಪ್ಪಮೆಣಸಿನಕಾಯಿ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಕ್ಯಾರೆಟ್‌ ಮತ್ತು ಟೊಮೆಟೊ ಬೆಲೆ ಸ್ವಲ್ಪ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ದಪ್ಪಮೆಣಸಿನಕಾಯಿ ₹80ಗೆ ಮಾರಾಟವಾಗುತ್ತಿದೆ. ಕಳೆದ ವಾರ  ₹60 ಇತ್ತು. ಹಸಿಮೆಣಸಿನಕಾಯಿಗೆ ಕಳೆದ ವಾರ ₹30 ಇದ್ದರೆ ಈ ವಾರ ₹ 40 ಇದೆ. ಈರುಳ್ಳಿ ₹20ರಿಂದ ₹ 25ಕ್ಕೆ ಬಿಕರಿಯಾಗುತ್ತಿದೆ. ಕ್ಯಾರೆಟ್‌ ಬೆಲೆ ₹30ರಿಂದ ₹20ಕ್ಕೆ ಇಳಿದಿದೆ. ‌ಕೆಜಿ ಟೊಮೆಟೊದ ಬೆಲೆ ಸೋಮವಾರ  ₹10 ಇತ್ತು. ಕಳೆದ ಕೆಲವು ವಾರಗಳಿಂದ ಅದು ₹15ಗೆ ಮಾರಾಟವಾಗುತ್ತಿತ್ತು.

ಬೀನ್ಸ್‌ಗೆ ₹ 30ರಿಂದ ₹ 50ರವರೆಗೆ ಬೆಲೆ ಇದೆ (ಗುಣಮಟ್ಟಕ್ಕೆ ಅನುಗುಣವಾಗಿ). ಹಿರೇಕಾಯಿ, ಮೂಲಂಗಿ, ಸೌತೆಕಾಯಿಗಳ ‌ಬೆಲೆ ಕ್ರಮವಾಗಿ ₹ 40, ₹ 30 ಮತ್ತು ₹ 20 ಇದೆ. ತಳ್ಳುಗಾಡಿಗಳಲ್ಲಿ ಮಾರಾಟವಾಗುತ್ತಿರುವ ತರಕಾರಿಗಳು ಮಾರುಕಟ್ಟೆ ದರಕ್ಕಿಂತ ₹ 5ರಿಂದ ₹ 15ರಷ್ಟು ಕಡಿಮೆಗೆ ಸಿಗುತ್ತಿವೆ.

ದ್ರಾಕ್ಷಿ ಸ್ವಲ್ಪ ಹುಳಿ!

ಹಣ್ಣುಗಳ ಪೈಕಿ ದ್ರಾಕ್ಷಿ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಕೆ.ಜಿ ದ್ರಾಕ್ಷಿಗೆ ₹ 50 ಇದೆ. ಕಳೆದ ವಾರ ₹ 30 ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ₹ 80ರಿಂದ ₹ 100ಗೆ ಮಾರಾಟ ಆಗುತ್ತಿದೆ.

ಮೋಸಂಬಿ, ಕಿತ್ತಳೆಯ ಸಗಟು ದರ ₹ 75 ಮತ್ತು ₹ 60 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಎರಡೂ ಫಲಗಳ ಬೆಲೆ ₹ 100ರವೆಗೆ ಇದೆ. ಆ್ಯಪಲ್‌ನ ಸಗಟು ಬೆಲೆ ₹ 150ರಷ್ಟಿದೆ.

ಈ ವಾರವೂ ಮಾವಿನ ಹಣ್ಣಿಗೆ ಬೇಡಿಕೆ ಸೃಷ್ಟಿಯಾಗಿಲ್ಲ. ಹಾಗಾಗಿ ಬೆಲೆಯಲ್ಲಿ ಏರಿಕೆಯೂ ಆಗಿಲ್ಲ ಇಳಿಕೆಯೂ ಕಂಡಿಲ್ಲ. ಸಗಟು ಮಾರುಕಟ್ಟೆಯಲ್ಲಿ ವಿವಿಧ ತಳಿಗಳ ಮಾವುಗಳು ₹ 20ರಿಂದ ₹ 30ಗೆ ಸಿಗುತ್ತಿವೆ. ಅನನಾಸಿಗೆ ₹20 ಇದೆ.

‘ಈ ವರ್ಷ ನಿಫಾ ವೈರಸ್‌ನ ಪರಿಣಾಮ ಎಲ್ಲ ಹಣ್ಣುಗಳ ಮೇಲೆ ಬೀರಿದೆ. ಮಾವಿನ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಿದೆ’ ಎಂದು ಹಣ್ಣುಗಳ ಪೂರೈಕೆದಾರ ಪೈನಾಪಲ್‌ ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !