ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರ್ಶನಿಕರ ಪಂಚಶೀಲ ತತ್ವ ಪಾಲಿಸಿ: ಬೋಧಿದತ್ತ ಬಂತೇಜಿ

ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ: ಸರ್ವಧರ್ಮ ಗುರುಗಳಿಂದ ಉಪದೇಶ, ರಾಷ್ಟ್ರಪಿತನ ವೇಷ ಧರಿಸಿ ಸಂಭ್ರಮಿಸಿದ ಚಿಣ್ಣರು
Last Updated 2 ಅಕ್ಟೋಬರ್ 2018, 14:19 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಹಾತ್ಮ ಗಾಂಧೀಜಿ, ಭಗವಾನ್‌ ಬುದ್ಧ ಸೇರಿದಂತೆ ಎಲ್ಲ ದಾರ್ಶನಿಕರು ಸಾರಿದ ಪಂಚಶೀಲ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು’ ಎಂದು ಬೌದ್ಧ ಧರ್ಮಗುರು ಬೋಧಿದತ್ತ ಬಂತೇಜಿ ಹಿತವಚನ ನುಡಿದರು.

ಪಟ್ಟಣದ ಜೆ.ಎಚ್. ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕೊಲೆ, ಕುಡಿತ, ಕಳ್ಳತನ, ಸುಳ್ಳು ಹೇಳುವುದು, ವ್ಯಭಿಚಾರ... ಈ ಐದು ಕೆಲಸಗಳನ್ನು ಮನುಷ್ಯ ಮಾಡಬಾರದು ಎಂಬ ಪಂಚಶೀಲ ತತ್ವವನ್ನು ಭಗವಾನ್‌ ಬುದ್ಧ, ಬಸವಣ್ಣ, ಅಂಬೇಡ್ಕರ್‌, ಗಾಂಧೀಜಿ ಸೇರಿದಂತೆ ಎಲ್ಲ ದಾರ್ಶನಿಕರು ಹೇಳುತ್ತಾ ಬಂದಿದ್ದಾರೆ. ಒಬ್ಬೊಬ್ಬರು ತಮ್ಮದೇ ರೀತಿಯಲ್ಲಿ ಜನರಿಗೆ ಉಪದೇಶ ನೀಡಿದ್ದಾರೆ. ಗಾಂಧೀಜಿ ಅವರದು ಹೆಂಡ–ಸರಾಯಿ ಕುಡಿತ ಬಿಡಬೇಕು ಎನ್ನುವುದಾಗಿತ್ತು’ ಎಂದು ಅವರು ಹೇಳಿದರು.

ಜೈನ ಧರ್ಮಗುರು ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಾತನಾಡಿ, ‘ಗಾಂಧೀಜಿ ಅವರು ತಾವು ಮಾಡಿದ ತಪ್ಪಿಗೆ ತಾವೇ ಶಿಕ್ಷೆ ವಿಧಿಸಿಕೊಳ್ಳುತ್ತಿದ್ದರು. ಒಮ್ಮೆ ಮಾಡಿದ ತಪ್ಪು ಮರುಕಳಿಸದಂತೆ ಸೂಕ್ಷ್ಮತೆಯಿಂದ ಎಚ್ಚರವಹಿಸುತ್ತಿದ್ದರು. ಅವರ ಆಶ್ರಮದಲ್ಲಿ ಬೇರೆಯವರು ತಪ್ಪು ಮಾಡಿದರೆ ಇವರು ಉಪವಾಸ ಇರುತ್ತಿದ್ದರು. ಇದನ್ನು ಮನಗಂಡವರು ‘ಗಾಂಧೀಜಿ ಅವರು ಉಪವಾಸ ಮಾಡುತ್ತಿದ್ದಾರೆ’ ಎಂದು ಅರಿತು ತಪ್ಪುನ್ನು ಅರಿತು ತಿದ್ದುಕೊಳ್ಳುತ್ತಿದ್ದರು’ ಎಂದು ಹೇಳಿದರು.

‘ಜನರು ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಬಾಪು ಅವರು ತಮ್ಮ ತಪ್ಪನ್ನು ತಪ್ಪು ಎಂದು ಹೇಳುವ ಮೂಲಕ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದರು’ ಎಂದು ಹೇಳಿದರು.

ಉಪವಾಸ ಸರಳ ಶಿಕ್ಷೆ: ‘ಸೂಕ್ಷ್ಮ ತಪ್ಪುಗಳಿಗೆ ಅವರು ಉಪವಾಸ ಮಾಡುವ ಮೂಲಕ ಶಿಕ್ಷೆ ವಿಧಿಸಿಕೊಳ್ಳುತ್ತಿದ್ದರು. ಆಶ್ರಮಗಳಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಅವರೇ ಸ್ವಚ್ಛತೆಗೆ ಮುಂದಾಗುತ್ತಿದ್ದರು. ತಾವು ಮಾಡಬೇಕಿರುವ ಕರ್ತವ್ಯದ ಬಗ್ಗೆ ಪ್ರಜ್ಞೆ ಇತ್ತು. ನಮ್ಮ ತಪ್ಪಿಗೆ ಉಪವಾಸವೇ ಸರಳ ಶಿಕ್ಷೆ ಎನ್ನುತ್ತಿದ್ದರು. ಇದರಿಂದಲೇ ಅವರು ಆದರ್ಶ ಪುರುಷರಾದರು’ ಎಂದರು.

ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮಗುರು ಮಹಮದ್‌ ಜಿಯಾವುಲ್ಲಾ, ಕ್ರೈಸ್ತ ಧರ್ಮಗುರು ಪುಟ್ಟರಾಜು, ಹಿಂದೂ ಧರ್ಮಗುರು ಚೆನ್ನಬಸವಸ್ವಾಮೀಜಿ ಹಿತವಚನ ನೀಡಿದರು.

ಚಿಣ್ಣರು ಗಾಂಧೀಜಿ ವೇಷತೊಟ್ಟು ಸಂಭ್ರಮಿಸಿದರು. ಇಲಾಖೆ ಪ್ರಕಟಿಸಿದ್ದ ಗಾಂಧೀಜಿ ಅವರ ಕುರಿತ ಕಿರು ಹೊತ್ತಗೆಯನ್ನುಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಬಿಡುಗಡೆಗೊಳಿಸಿದರು.

ವಸ್ತು ಪ್ರದರ್ಶನ:ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀಜಿ ಅವರು ಭಾಗವಹಿಸಿದ್ದ ವಿವಿಧ ಘಟನಾವಳಿಗಳನ್ನು ಬಿಂಬಿಸುವ ಗ್ಯಾಲರಿ ವಸ್ತು ಪ್ರದರ್ಶನ ಏರ್ಪಡಿಸಿದ್ದರು. ಅಪೂರ್ವ ಛಾಯಾಚಿತ್ರಗಳನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ ಇದ್ದರು.

‘ಮಹತ್ವದ ದಿನ, ಸುಂದರವಾಗಿದೆ’

’ಇಂದು ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ ದೇಶದಾದ್ಯಂತ ಎಲ್ಲಿಯೂ ಮಾಂಸ, ಸರಾಯಿ ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಘೋಷಿಸಿದೆ. ಈ ದಿನ ಸುಂದರವಾಗಿದೆ. ಯಾರೊಬ್ಬರೂ ಕುಡಿತಕ್ಕೆ ದಾಸರಾಗಬಾರದು. ಇದರಿಂದ ಬದುಕು ಸರ್ವನಾಶ ಎಂಬ ಸಂದೇಶವನ್ನು ಗಾಂಧೀಜಿ ಅವರು ಸಾರಿ ಹೇಳುತ್ತಿದ್ದರು’ ಎಂದು ಬೋಧಿದತ್ತ ಬಂತೇಜಿ ಹೇಳಿದರು.

‘ಪಂಚಶೀಲ ತತ್ವದಲ್ಲಿ ಕುಡಿತವೂ ಸೇರಿದೆ. ದಾರ್ಶನಿಕರು ಈ ಮಹತ್ವದ ಸಾರವನ್ನು ಜನರ ಮನಸ್ಸಿಗೆ ತಟ್ಟುವಂತೆ ಹೇಳುತ್ತಿದ್ದರು. ಇಂದು ಮಾತ್ರವಲ್ಲ ಮುಂದೆಯೂ ಜನರು ಕುಡಿತದ ದಾಸರಾಗಬಾರದು. ಏಕೆಂದರೆ, ಈ ಕೆಟ್ಟ ಚಟದಿಂದ ಕೊನೆ ಹಂತದ ಮನುಷ್ಯನ ಜೀವನ ವಿರೂಪಗೊಳ್ಳುತ್ತದೆ. ಬಂಧು–ಬಾಂಧವರು, ಸ್ನೇಹಿತರು ಯಾರೊಬ್ಬರೂ ಜೊತೆಗಿರುವುದಿಲ್ಲ. ನರಳಾಟ ಶುರುವಾಗುತ್ತದೆ. ಮನಸ್ಸು ವಿಕಲತೆ ಹೊಂದುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT