ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಂಪೂರ್ಣ ಸಾಲ ಮನ್ನಾ ಮಾಡುವೆ

ಜೆಡಿಎಸ್‌ ವಿಕಾಸ ಪರ್ವ ಸಮಾವೇಶದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಘೋಷಣೆ
Last Updated 13 ಮಾರ್ಚ್ 2018, 10:37 IST
ಅಕ್ಷರ ಗಾತ್ರ

ಮಾನ್ವಿ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ಸೋಮವಾರ ಪಟ್ಟಣದ ಟಿಎಪಿಸಿಎಂಎಸ್‌ ಆವರಣದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಪಕ್ಷದ ವಿಕಾಸ ಪರ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಹಾಗೂ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ನಿರಂತರ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಗೆ ನೆರವು ನೀಡದ ಸರ್ಕಾರಗಳು ಕಾರ್ಪೋರೆಟ್‌ ಕಂಪೆನಿಗಳ ಮಾಲೀಕರ ನೂರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡಿವೆ. ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ₹51ಸಾವಿರ ಕೋಟಿ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ರೈತರಿಗಾಗಿ ₹ 25ಸಾವಿರ ಕೋಟಿ ಮೀಸಲಿಟ್ಟು ರೈತರ ಸ್ಥಿತಿಗತಿ, ರೈತರ ಬೆಳೆಗಳನ್ನು ಬೆಳೆಯುವ ಕುರಿತು ಪ್ರತಿ ತಿಂಗಳು ರೈತರೊಂದಿಗೆ ಸಮಾಲೋಚನೆ ನಡೆಸುವೆ. ಐಎಎಸ್‌ ಅಧಿಕಾರಿಗಳಿಂದ ಸರ್ಕಾರ ನಡೆಸದೆ ರೈತರಿಂದ ಸರ್ಕಾರದ ಆಡಳಿತ ನಡೆಸಿ ತೋರಿಸುವೆ’ ಎಂದು ಹೇಳಿದರು.

‘ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಮುಖಂಡರು ಜನಪರ ಕಾರ್ಯಕ್ರಮಗಳ ಕುರಿತು ಮಾತನಾಡದೆ, ಪರಸ್ಪರ ತೇಜೋವಧೆಯಲ್ಲಿ ತೊಡಗಿದ್ದಾರೆ. ಕರಾವಳಿ ಭಾಗದ ಅಮಾಯಕ ಯುವಕರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಹೊರತು ರಾಜ್ಯದ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರು ಟಿ.ವಿ, ಪತ್ರಿಕೆಗಳಲ್ಲಿ ಜಾಹೀರಾತು ನೀಡುವಲ್ಲಿ ಮಗ್ನರಾಗಿದ್ದಾರೆ. ಅಭಿವೃದ್ಧಿ ಕಡೆ ಗಮನಹರಿಸದೆ ರಾಜ್ಯದ ಜನರ ತೆರಿಗೆ ಹಣವನ್ನು ಕೇವಲ ಜಾಹೀರಾತು ಮೂಲಕ ಪ್ರಚಾರಕ್ಕೆ ಬಳಸುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

‘ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಅತೀ ಹೆಚ್ಚು ಹತ್ತಿ ಬೆಳೆಯುವ ರಾಯಚೂರು, ಯಾದಗಿರಿ, ಕಲಬರ್ಗಿ ಜಿಲ್ಲೆಗಳಲ್ಲಿ ಹತ್ತಿ ಗಿರಣಿಗಳನ್ನು ಸ್ಥಾಪಿಸುವ ಮೂಲಕ ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು. ಬಡ ರೈತರು, ಕೃಷಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲಾಗುವುದು. ವಿಧವೆಯರು ಹಾಗೂ ಅಂಗವಿಕಲರ ಮಾಸಾಶನವನ್ನು ₹2 ಸಾವಿರಕ್ಕೆ ಹೆಚ್ಚಿಸಲಾಗುವುದು.

70 ವರ್ಷ ದಾಟಿದ ವೃದ್ಧರಿಗೆ ಪ್ರತಿ ತಿಂಗಳು ₹5 ಸಾವಿರ ನೆರವು ನೀಡಲಾಗುವುದು. ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಸಮರ್ಪಕ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಪೂರ್ಣಗೊಂಡಿರುವ ಕೃಷ್ಣಾ ಬಿ ಸ್ಕೀಮ್‌ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ಪೂರೈಸಲಾಗುವುದು. ಸ್ತ್ರೀ ಶಕ್ತಿ ಸಂಘಗಳಿಗೆ ಪ್ರೋತ್ಸಾಹಧನ ಸೇರಿದಂತೆ ಎಲ್ಲಾ ವರ್ಗಗಳ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಐದು ವರ್ಷಗಳ ಕಾಲ ನಿದ್ರೆಯಲ್ಲಿ ಕಳೆದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಉದ್ರಿ ಸರ್ಕಾರವಾಗಿದೆ. ಸದಾ ಅಹಿಂದ ವರ್ಗಗಳ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಅಧಿಕಾರದಲ್ಲಿ ಅಹಿಂದ ವರ್ಗಗಳ ಅಭಿವೃದ್ಧಿಗೆ ಖರ್ಚು ಮಾಡಿದ ಅನುದಾನದ ಕುರಿತು ಕೂಡಲೇ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ಮಾನ್ವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ‘ಸ್ಥಳೀಯ ಶಾಸಕರು ತುಂಗಭದ್ರಾ ಕಾಡಾ ಅಧ್ಯಕ್ಷರಾಗಿದ್ದರೂ ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪಿಸುವಲ್ಲಿ ವಿಫಲರಾಗಿದ್ದಾರೆ.

ಕ್ಷೇತ್ರದ ರೈತರ ಹಿತಕ್ಕಾಗಿ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಬೇಕು. ಶಾಸಕನಾಗಿ ಆಯ್ಕೆಯಾದರೆ ಶುದ್ಧ ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ರಸ್ತೆ, ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜುಗಳ ಮಂಜೂರಾತಿ, ಮಿನಿ ವಿಧಾನಸೌಧ ನಿರ್ಮಾಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವೆ. ಎಲ್ಲಾ ವರ್ಗದ ಜನರ ಹಿತಕ್ಕಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ದುಡಿಯುವೆ’ ಎಂದು ಭರವಸೆ ನೀಡಿದರು.

ಸಿರವಾರದ ವಾಣಿಜ್ಯೋದ್ಯಮಿ ಲೋಕರೆಡ್ಡಿ, ಮಾನ್ವಿ ಪುರಸಭೆಯ ಮಾಜಿ ಅಧ್ಯಕ್ಷ ಮಹ್ಮದ್‌ ಇಸ್ಮಾಯಿಲ್‌ ಸೇರಿದಂತೆ ಅನೇಕ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಗಂಗಾವತಿಯ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ, ಸಿಂಧನೂರಿನ ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್‌ ಅತ್ತನೂರು, ಜೆಡಿಎಸ್‌ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ವಿರೂಪಾಕ್ಷಿ, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಬಲ್ಲಟಗಿ, ಲಕ್ಷ್ಮೀಪತಿ ಗಾಣದಾಳ, ಯೂಸುಫ್‌ ಖಾನ್‌, ಕೆ.ಎಂ.ಸೈಯದ್‌ ಕೊಪ್ಪಳ, ಪವನಕುಮಾರ ಎಂ.ಈರಣ್ಣ, ಜಂಬುನಾಥ ಯಾದವ್‌, ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಇದ್ದರು.

*
ಮಾನ್ವಿ ತಾಲ್ಲೂಕಿನ ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಕೊನೆ ಭಾಗಕ್ಕೆ ಕಾಲುವೆ ನೀರು ಸಮರ್ಪಕವಾಗಿ ಹರಿಸಲು ಕ್ರಮ ಕೈಗೊಳ್ಳಲಾಗುವುದು.
–ರಾಜಾ ವೆಂಕಟಪ್ಪ ನಾಯಕ,
ಮಾನ್ವಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ

*
ಬಿಜೆಪಿಯವರಿಗೆ ದರಿದ್ರ ಬಂದಿರುವ ಕಾರಣ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಂತಹವರನ್ನು ರಾಜ್ಯಕ್ಕೆ ಕರೆತಂದು ಪ್ರಚಾರ ಮಾಡುತ್ತಿದ್ದಾರೆ.
–ಎಚ್‌.ಡಿ.ಕುಮಾರಸ್ವಾಮಿ,
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

*
ಆರೋಪ–ಪ್ರತ್ಯಾರೋಪಗಳಿಂದ ಅಭಿವೃದ್ಧಿ ಅಸಾಧ್ಯ
ಲಿಂಗಸುಗೂರು:
‘ ಕಾಂಗ್ರೆಸ್‌, ಬಿಜೆಪಿ ಮುಖಂಡರು ಅಸಂವಿಧಾನಿಕ ಶಬ್ದಗಳನ್ನು ಬಳಸಿ ಟೀಕಿಸುತ್ತಿರುವುದು ನಾಚಿಕೆಗೇಡು ಸಂಗತಿ. ಆರೋಪ ಪ್ರತ್ಯಾರೋಪಗಳಿಂದ ದೇಶದ ಅಭಿವೃದ್ಧಿ ಅಸಾಧ್ಯ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸೋಮವಾರ ಶಾದಿಮಹಲ್‌ ಮೈದಾನದಲ್ಲಿ ಜೆಡಿಎಸ್‌ ಆಯೋಜಿಸಿದ್ದ ವಿಕಾಸಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ, ಸಾಲದ ಸಂಕಷ್ಟದಲ್ಲಿ ಸ್ವಾಭಿಮಾನದ ಬದುಕು ಕಟ್ಟಲು ಮಹಿಳೆಯರಿಗೆ ನೆರವು ನೀಡಲು ಮುಂದಾಗದ ರಾಷ್ಟ್ರೀಯ ಪಕ್ಷಗಳು ಜನಾಶೀರ್ವಾದ, ಪರಿವರ್ತನಾ ಯಾತ್ರೆ ಹೆಸರಿನಲ್ಲಿ ಸಮಾವೇಶ ನಡೆಸುತ್ತಿರುವುದಕ್ಕೆ ಜನತೆ ಪಾಠ ಕಲಿಸಬೇಕು’ ಎಂದು ಕರೆ ನೀಡಿದರು.

‘ಕೇಂದ್ರ ಸರ್ಕಾರ ರೈತರ ಯಾವುದೇ ಸಾಲ ಮನ್ನಾ ಮಾಡುವುದಿಲ್ಲ ಎಂದು ಕೈತೊಳೆದುಕೊಂಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲಮನ್ನಾ ಹೆಸರಿನಲ್ಲಿ ಕಣ್ಣಿಗೆ ಮಣ್ಣೆರಚುವ ಯತ್ನ ನಡೆಸಿದ್ದಾರೆ. ರಾಜ್ಯ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕನಿಷ್ಠ ಪ್ರಮಾಣದ ನೆರವು ನೀಡಲು ಮುಂದಾಗಲಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ತಮ್ಮ ಪಕ್ಷದಿಂದ ಜನಾಶೀರ್ವಾದ ಪಡೆದು ಅವಧಿಗೆ ಮುಂಚೆಯೇ ಪಕ್ಷಾಂತರ ಮಾಡಿರುವ ವಜ್ಜಲರಿಗೆ ನಾಲ್ಕು ವರ್ಷ ಗುತ್ತಿಗೆದಾರಿಕೆ ಮಾಡಲು ಕಳುಹಿಸಬೇಕು. ಹಣದ ಅಮಲಿನಲ್ಲಿ ಮತದಾರ ಪ್ರಭುಗಳ ಖರೀದಿ ಮುಂದಾಗಲಿರುವ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಮತದಾರರೆ ಪಾಠ ಕಲಿಸಬೇಕು. ಸರಳ ವ್ಯಕ್ತಿತ್ವದ ಸಿದ್ದು ಬಂಡಿ ಅವರನ್ನು ಆಶೀರ್ವದಿಸಿದರೆ ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು.
ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ, ವಿಧಾನ ಪರಿಷತ್‌ ಸದಸ್ಯ ಟಿ.ಎಸ್‌ ಶರವಣ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಲಿಂಗಸುಗೂರು ಕ್ಷೇತ್ರದಿಂದ ಸಿದ್ದು ಬಂಡಿ ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್‌ ಅಭ್ಯರ್ಥಿ ಸಿದ್ದು ಬಂಡಿ ಮಾತನಾಡಿ, ‘ಬಿಜೆಪಿ ತಮ್ಮನ್ನು ಪಕ್ಷದ ಸಂಘಟನೆಗೆ ಬಳಸಿಕೊಂಡು ಬೆನ್ನಿಗೆ ಚೂರಿ ಹಾಕಿದೆ. ಸಂಕಷ್ಟದಲ್ಲಿದ್ದ ತಮ್ಮನ್ನು ಕುಮಾರಸ್ವಾಮಿ ಬೆಂಬಲಿಸಿದ್ದು ಮುಂದಿನ ಚುನಾವಣೆಯಲ್ಲಿ ತಾವು ಬೆಂಬಲಿಸಿ ಆಶೀರ್ವದಿಸಿದರೆ ಎಲ್ಲ ಧರ್ಮ, ಜಾತಿ, ಸಮುದಾಯ ಆಶೋ ತ್ತರಗಳಿಗೆ ಸ್ಪಂದಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ’ ಭರವಸೆ ನೀಡಿದರು.

ಜಿ.ಪಂ ಉಪಾಧ್ಯಕ್ಷೆ ಗೀತಾ ವಜ್ಜಲ ಗೈರು
ಜೆಡಿಎಸ್‌ ಪಕ್ಷದಿಂದ ಆಯ್ಕೆಗೊಂಡು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಅಧಿಕಾರದಲ್ಲಿರುವ ಗೀತಾ ಕರಿಯಪ್ಪ ವಜ್ಜಲ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅಧಿಕಾರ ಅನುಭವಿಸುವ ಗೀತಾ ವಜ್ಜಲ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರು ಬಂದಾಗ ಸೌಜನ್ಯಕ್ಕೂ ಭೇಟಿ ಮಾಡದಿರುವುದು ಗುಸು ಗುಸು ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.

ಭವ್ಯ ಮೆರವಣಿಗೆ
ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಮಾನ್ವಿಯಿಂದ ಲಿಂಗಸುಗೂರು ಹೆಲಿಪ್ಯಾಡ್‌ಗೆ ಬಂದಿಳಿಯುತ್ತಿದ್ದಂತೆ ವಿಕಾಸ ಪರ್ವ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಕ್ರೇನ್‌ ಮೂಲಕ ಬೃಹದಾಕಾರದ ಹೂಮಾಲೆ ಹಾಕಿರುವುದು ನಾಗರಿಕರ ಉತ್ಸಾಹ ಇಮ್ಮಡಿಗೊಳಿಸಿತ್ತು. ಮೆರವಣಿಗೆ ಉದ್ದಕ್ಕೂ ಕುಮಾರಣ್ಣ, ಸಿದ್ದು ಬಂಡಿ, ಜೆಡಿಎಸ್‌ ಪಕ್ಷದ ಪರ ಘೋಷಣೆಗಳು ಕೇಳಿಬಂದವು.

ಲಿಂಗಸುಗೂರು ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಪ್ರಬಲ ಆಂಕಾಂಕ್ಷಿಯಾಗಿದ್ದ ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಆಲ್ಕೋಡ್‌ ಹನುಮಂತಪ್ಪ ಪಾಲ್ಗೊಂಡಿರಲಿಲ್ಲ. ಕ್ಷೇತ್ರ ದಲ್ಲಿ ತಾವೇ ಅಭ್ಯರ್ಥಿ ಎಂದೇ ಓಡಾಡಿಕೊಂಡಿದ್ದ ಅವರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT