ಚಾಮರಾಜನಗರ: ಬಂದ್‌ಗೆ ಉತ್ತಮ ಪ್ರತಿಕ್ರಿಯೆ

7
ಕಾಂಗ್ರೆಸ್, ಜೆಡಿಎಸ್‌, ಎಸ್‌ಡಿಪಿಐ ಕಾರ್ಯಕರ್ತರಿಂದ ಮೆರವಣಿಗೆ, ಮಧ್ಯಾಹ್ನ ಮೇಲೆ ಸಹಜ ಸ್ಥಿತಿಗೆ

ಚಾಮರಾಜನಗರ: ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Published:
Updated:
Deccan Herald

ಚಾಮರಾಜನಗರ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಖಂಡಿಸಿ ಸೋಮವಾರ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಟ್ಟಣದಲ್ಲಿ ವಾಣಿಜ್ಯ ಚಟುವಟಿಕೆಗಳೆಲ್ಲ ಕಡಿಮೆ ಇತ್ತು. ಆನಂತರ ಅಂಗಡಿಗಳೆಲ್ಲ ತೆರೆದು ವಹಿವಾಟು ಎಂದಿನಂತೆ ನಡೆಯಿತು. ಇಡೀ ದಿನ ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ಧಕ್ಕೆಯಾಗಲಿಲ್ಲ. ಆಟೊಗಳು, ಗೂಡ್ಸ್‌ ಆಟೊ, ಲಾರಿಗಳ ಸಂಚಾರ ಎಂದಿನಂತೆ ಇತ್ತು.

ಸರ್ಕಾರಿ ಬಸ್‌ಗಳು, ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಹೀಗಾಗಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಆಸ್ಪತ್ರೆ, ಕ್ಲಿನಿಕ್‌ಗಳು, ಔಷಧ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದವು. ಮುಖ್ಯರಸ್ತೆಗಳ ಬಹುತೇಕ ಅಂಗಡಿಗಳು ಮುಚ್ಚಿದ್ದರೆ, ಬಡಾವಣೆಗಳ ವ್ಯಾಪ್ತಿಯಲ್ಲಿರುವ ಅಂಗಡಿಗಳಲ್ಲಿ ವ್ಯಾಪಾರ ಎಂದಿನಂತೆ ಇತ್ತು. ಕೆಲವು ಹೋಟೆಲ್‌ಗಳು ಬೆಳಿಗ್ಗೆಯಿಂದಲೇ ತೆರೆದಿದ್ದವು. 

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಚಿತ್ರಮಂದಿರಗಳಲ್ಲಿ ಪ್ರದರ್ಶನ ಇರಲಿಲ್ಲ. ಸಾರ್ವಜನಿಕರು‌ ಇಲ್ಲದ ಕಾರಣ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಯಲಿಲ್ಲ. ಜನರ ಓಡಾಟವಿಲ್ಲದೇ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದವು. ಬಂದ್‌ ಪರಿಣಾಮವಾಗಿ ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು.

12ರ ನಂತರ ಸಹಜ ಸ್ಥಿತಿಗೆ: ಬೆಳಿಗ್ಗೆ 10.30ರಿಂದ 11 ಗಂಟೆ ಹೊತ್ತಿಗೆ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ಅದು ಮುಗಿದ ಬಳಿಕ ಮಾಲೀಕರು ಒಬ್ಬೊಬ್ಬರಾಗಿ ಅಂಗಡಿಗಳನ್ನು ತೆರೆಯಲು ಆರಂಭಿಸಿದರು. ಮಧ್ಯಾಹ್ನದ ನಂತರ ಕೆಲವು ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದವು.

ಕಾಂಗ್ರೆಸ್‌ನಿಂದ ಪ್ರತಿಭಟನೆ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. 

ಸಂಸದ ಆರ್.ಧ್ರುವನಾರಾಯಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ನೇತೃತ್ವದಲ್ಲಿ ಪಕ್ಷದ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟಿತು. ದಾರಿ ಮಧ್ಯೆ ಎಸ್‌ಡಿಪಿಐ, ಜೆಡಿಎಸ್‌ ಕಾರ್ಯಕರ್ತರು ಮೆರವಣಿಗೆಗೆ ಸೇರಿಕೊಂಡರು. ಚಾಮರಾಜೇಶ್ವರ ದೇವಸ್ಥಾನ, ದೊಡ್ಡ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತದ ಮಾರ್ಗವಾಗಿ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಆರ್.ಧ್ರುವನಾರಾಯಣ ಮಾತನಾಡಿ, ‘ಕೇಂದ್ರದ ಎನ್‌ಡಿಎ ಸರ್ಕಾರ ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಬೆಲೆ ಇಳಿಕೆಗೆ ಅಗತ್ಯ ಕ್ರಮವಹಿಸಬೇಕು’ ಎಂದರು.

‘ಪೆಟ್ರೋಲ್‌, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಮುಂದಾಗಬೇಕು. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ‘ದೇಶದ ಜನರು ಹೆಚ್ಚಿನ ಬೆಲೆ ನೀಡಿ ಪೆಟ್ರೋಲ್, ಡೀಸೆಲ್‌ ಖರೀದಿಸುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿದೇಶಿ ರಾಷ್ಟ್ರಗಳಿಗೆ ಕಡಿಮೆ ದರಕ್ಕೆ ತೈಲವನ್ನು ಮಾರಾಟ ಮಾಡುತ್ತಿದೆ’ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಮಹಮದ್‌ ಅಸ್ಗರ್‌ ಮುನ್ನಾ, ಕೆರೆಹಳ್ಳಿ ನವೀನ್‌, ಸೈಯದ್‌ ರಫೀ, ಬಿ.ಕೆ. ರವಿಕುಮಾರ್, ಎಸ್‌ಡಿಪಿಐನ ಸಮೀವುಲ್ಲಾ ಖಾನ್, ಅಬ್ರಾರ್‌ ಅಹಮದ್‌ ಇದ್ದರು.

ಎತ್ತಿನಗಾಡಿಯಲ್ಲಿ ಬೈಕ್‌, ಸಿಲಿಂಡರ್‌ ಮೆರವಣಿಗೆ

ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೊಂದೆಡೆ ಪ್ರತಿಭಟನಾನಿರತರು ಎತ್ತಿನಗಾಡಿಗಳಲ್ಲಿ ದ್ವಿಚಕ್ರ ವಾಹನ ಹಾಗೂ ಸಿಲಿಂಡರ್‌ಗಳನ್ನು ಇಟ್ಟು ಮೆರವಣಿಗೆ ನಡೆಸಿದರು.

ಹೂಗುಚ್ಛ ನೀಡಿದ ಬಿಜೆಪಿ ಮುಖಂಡರು: ಬಂದ್‌ಗೆ ಬೆಂಬಲ ವ್ಯಕ್ತಪಡಿಸದೆ ಅಂಗಡಿ ತೆರೆದಿದ್ದ ಮಾಲೀಕರಿಗೆ ಬಿಜೆಪಿ ಮುಖಂಡರು ಹೂಗುಚ್ಛ ನೀಡಿ ಅಭಿನಂದಿಸುತ್ತಿದ್ದ ದೃಶ್ಯವೂ ಕಂಡುಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !