ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಗ್ರಂಥಾಲಯಕ್ಕೆ ಗ್ರಂಥಪಾಲಕರ ನೇಮಿಸಲಿ

ಡಿಜಿಟಲ್‌ ಗ್ರಂಥಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಎನ್.ಮಹೇಶ್‌ ಆಗ್ರಹ
Last Updated 3 ಅಕ್ಟೋಬರ್ 2018, 10:13 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಗ್ರಂಥಾಲಯ ಗಳನ್ನು ಹೈಟೆಕ್‌ ಗ್ರಂಥಾಲಯಗಳನ್ನಾಗಿ ಪರಿವರ್ತಿಸಬೇಕು. ಅಲ್ಲಿಗೆ ಉತ್ತಮ ಗ್ರಂಥಪಾಲಕರನ್ನು ನೇಮಕ ಮಾಡಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್‌ ಹೇಳಿದರು.

ನಗರದ ಗ್ರಂಥಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೇಂದ್ರ ಗಂಥಾಲಯ ಮತ್ತು ಕೇರಳದ ಸಾಯಿ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಡಿಜಿಟಲ್‌ ಗ್ರಂಥಗಳ ಬಿಡುಗಡೆ’ ಸಮಾರಂಭದಲ್ಲಿ ಮಾತನಾಡಿದರು.

‘ಬಹುತೇಕ ಗ್ರಂಥಪಾಲಕರನ್ನು ಕಾಯಂಗೊಳಿಸಿಲ್ಲ. ಈ ಬಗ್ಗೆ ಅನೇಕರು ಆಗ್ರಹಿಸುತ್ತಿದ್ದಾರೆ. ಆದರೆ, ಇದಕ್ಕೆ ₹48 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ’ ಎಂದರು.

ದೇಶದಲ್ಲೇ ಅತಿ ಹೆಚ್ಚು ಗ್ರಂಥಾಲಯಗಳನ್ನು ಹೊಂದಿದ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಒಟ್ಟು 6,773 ಗ್ರಂಥಾಲಯಗಳಿವೆ. ಆದರೆ, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಕೇವಲ 72 ಗ್ರಂಥಾಲಯಗಳಿವೆ ಎಂದರು.

ಕೇರಳದ ಸಾಯಿ ಸಂಜೀವಿನಿ ಚಾರಿಟಬಲ್ ಟ್ರಸ್ಟ್‌ನವರು 1ರಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಡಿಜಿಟಲ್ ಗ್ರಂಥಗಳನ್ನು ಒದಗಿಸಿದ್ದಾರೆ. ಹಳೆಯ ಪ್ರಶ್ನೆಪತ್ರಿಕೆಗಳೂ ಸಿಗುತ್ತವೆ. ಎರಡು ಕಂಪ್ಯೂಟರ್‌ಗಳನ್ನೂ ಒದಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾ ರಾಜಣ್ಣ, ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮರುಗದ ಮಣಿ, ಸದಸ್ಯ ನಾಗರಾಜು ಕಮಲ್, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಶೂದ್ರ ಶ್ರೀನಿವಾಸ್, ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಹರಿನಾರಾಯಣ್, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ, ತಾಲ್ಲೂಕು ಗ್ರಂಥಾಲಯ ಅಧಿಕಾರಿ ಶಿವಕುಮಾರ್, ನಗರಸಭೆ ಪೌರಾಯುಕ್ತ ಸುರೇಶ್, ಡಿವೈಎಸ್‍ಪಿ ಪುಟ್ಟಮಾದಯ್ಯ, ಡಿಡಿಪಿಐ ಮಂಜುಳ ಹಾಜರಿದ್ದರು.

**

₹1 ಕೋಟಿ ಗ್ರಂಥಾಲಯ ಸೆಸ್‌ ಬಾಕಿ:

ಚಾಮರಾಜನಗರ ಜಿಲ್ಲೆಯಲ್ಲಿ ₹1 ಕೋಟಿ ಗ್ರಂಥಾಲಯ ಸೆಸ್‌ ಬಾಕಿ ಇದೆ ಎಂದು ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಎಸ್.ಹೊಸಮನಿ ಹೇಳಿದರು.

ಬಿಬಿಎಂಪಿ ₹433 ಕೋಟಿ ಗ್ರಂಥಾಲಯ ಶುಲ್ಕ ಬಾಕಿ ಇರಿಸಿಕೊಂಡಿದೆ. ಈ ಸೆಸ್‌ ಬಂದರೆ ಗ್ರಂಥಾಲಯಗಳನ್ನು ಸುಧಾರಿಸಲು ಸಾಧ್ಯವಾಗಲಿದೆ. ತಾಲ್ಲೂಕು ಮಟ್ಟದಲ್ಲಿ 176, ಗ್ರಾಮಾಂತರ ಪ್ರದೇಶದಲ್ಲಿ 433 ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಜಿಲ್ಲೆಯಲ್ಲಿ ಬಾಕಿ ಇರುವ ₹1 ಕೋಟಿ ಗ್ರಂಥಾಲಯ ಸೆಸ್‌ ಅನ್ನು ನಗರಸಭೆ ಹಾಗೂ ಪುರಸಭೆಗಳು ಪಾವತಿಸುವಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT