ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬೆಟ್ಟದಷ್ಟು ಸಮಸ್ಯೆಗಳು

ಕುಡಿಯುವ ನೀರು, ರಸ್ತೆ ಸೌಲಭ್ಯಕ್ಕೆ ಆಗ್ರಹ, ಅಕ್ರಮ ಗಣಿಗಾರಿಕೆ, ಅಕ್ರಮ ರೆಸಾರ್ಟ್, ಹೋಂ ಸ್ಟೇಗಳಿಗೆ ಕಡಿವಾಣ ಅಗತ್ಯ
Last Updated 16 ಜುಲೈ 2018, 16:06 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸತತ ಸೋಲಿನ ನಂತರಗೆಲುವಿನ ಸಿಹಿಕಂಡಿರುವ ಗುಂಡ್ಲುಪೇಟೆಯ ಯುವ ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಅವರ ಮುಂದೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಟ್ಟದಷ್ಟು ಸವಾಲುಗಳಿವೆ.

ಗುಂಡ್ಲುಪೇಟೆ ತಾಲ್ಲೂಕು, ಕೇರಳ ಮತ್ತು ತಮಿಳುನಾಡು ಗಡಿಗಳಿಗೆ ಹೊಂದಿಕೊಂಡಿರುವುದರಿಂದ ಇಲ್ಲಿ ಆಕ್ರಮ ಚಟುವಟಿಕೆಗಳು ಹೆಚ್ಚು ನಡೆಯುತ್ತವೆ.ಅಕ್ರಮ ಗಣಿಗಾರಿಕೆ, ಅಕ್ರಮ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಹಾವಳಿಯೂ ಹೆಚ್ಚಾಗಿದೆ.ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗುಂಡಿ ಬಿದ್ದ ರಸ್ತೆಗಳಿಗೆ ಏನೂ ಕೊರತೆ ಇಲ್ಲ. ಕೃಷಿಗೆ ಆಧಾರವಾಗಿರುವ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪೂರ್ಣವಾಗಿಲ್ಲ. ನೂತನ ಶಾಸಕರು ಈ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಕೆರೆ ತುಂಬಬೇಕು:ತಾಲ್ಲೂಕು ಪೂರ್ಣ ಪ್ರಮಾಣದಲ್ಲಿ ಮಳೆಯಾಶ್ರಿತವಾಗಿದೆ. ಇಲ್ಲಿನ ರೈತರು ಮಳೆಗಾಲದಲ್ಲಿ ಹೆಚ್ಚಿನ ಬೆಳೆಯನ್ನು ಬೆಳೆಯುತ್ತಾರೆ. ಯಾವುದೇ ನದಿ ಮೂಲಗಳು ಇಲ್ಲಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಬಿನಿ ನದಿ ಮೂಲದಿಂದ ₹ 67 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಬೆಳಚಲವಾಡಿ ಕೆರೆ, ತೊಂಡವಾಡಿ ಕೆರೆ, ಚಿಕ್ಕಾಟಿ ಮತ್ತು ಕಮರಹಳ್ಳಿ ಕೆರೆ, ರಾಘವಾಪುರ ಕೆರೆ, ಹೆಗ್ಗಡಹಳಳಿ, ಹಳ್ಳದ ಮಾದಹಳ್ಳಿ, ಗರಗನಹಳ್ಳಿ, ಅಗತಗೌಡನಹಳ್ಳಿ ಕೆರೆಗಳಿಗೆ ಮೊದಲ ಹಂತದಲ್ಲಿಮತ್ತುನಂತರ ತಾಲ್ಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಿದ್ಧ ಪಡಿಸಲಾಗಿತ್ತು.

ಕಳೆದ ಚುನಾವಣೆ ಹೊಸ್ತಿಲಲ್ಲಿ ಬೆಳಚಲವಾಡಿ ಕೆರೆಗೆ ನೀರು ಬೀಡುವ ಮೂಲಕ ಕೆರೆ ತುಂಬಿಸುವ ಕೆಲಸಕ್ಕೆ ಅಂದಿನ ಸಚಿವೆ ಎಂ.ಸಿ.ಮೋಹನಕುಮಾರಿ ಚಾಲನೆ ನೀಡಿದ್ದರು. ಆದರೆ, ಆ ಬಳಿಕ ಯಾವುದೇ ಕೆರೆಗೆ ನೀರು ಹರಿದಿಲ್ಲ.ಈ ಕೆಲಸಕ್ಕೆ ಶೀಘ್ರವಾಗಿ ಚಾಲನೆ ನೀಡಬೇಕು ಎಂಬುದು ಜನರ ಒತ್ತಾಯ. ಇತ್ತೀಚೆಗೆ ಹೆಚ್ಚು ಮಳೆ ಆಗುತ್ತಿರುವುದರಿಂದ ನೀರು ಲಭ್ಯವಿದೆ.ಶೀಘ್ರವಾಗಿ ಕರೆಗಳಿಗೆ ನೀರು ತುಂಬಿಸಬೇಕು ಎಂಬುದು ಅವರ ಆಗ್ರಹ. ಕೆರೆಗಳಿಗೆ ನೀರು ಬಂದರೆ ಜಾನುವಾರು ಮತ್ತು ಕೃಷಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅಂತರ್ಜಲವೂ ಹೆಚ್ಚುತ್ತದೆ.

ರಸ್ತೆ ಸಮಸ್ಯೆ: ತಾಲ್ಲೂಕು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಹೊಂಡಮಯ ರಸ್ತೆಗಳೂ ಒಂದು. ಅನೇಕ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಕೆಲ ರಸ್ತೆಗಳಿಗೆ ಭೂಮಿಪೂಜೆಯಾಗಿದ್ದರೂ ಇನ್ನೂ ಕಾಮಗಾರಿ ಶುರುವಾಗಿಲ್ಲ. ಮಂಗಲ ವ್ಯಾಪ್ತಿಯಲ್ಲಿರುವ ಜಕ್ಕಹಳ್ಳಿಯಿಂದ ಕಣಿಯನಪುರವರೆಗಿನ ರಸ್ತೆಗೆ ಭೂಮಿಪೂಜೆಯಾಗಿದ್ದರೂ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಇದರಿಂದ ಇಲ್ಲಿನ ಜನರಿಗೆ ದಿನನಿತ್ಯ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಗುಂಡ್ಲುಪೇಟೆ ಪಟ್ಟಣದಿಂದ ಬರಗಿ, ದೇಶಿಪುರವರೆಗೆ ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿ ಕಾರ್ಯಕ್ಕೆ ಶೀಘ್ರವಾಗಿ ಚಾಲನೆ ನೀಡಿಜನರಿಗೆ ಉಪಯೋಗವಾಗುವಂತೆ ಮಾಡಬೇಕಿದೆ.

ಜಾನುವಾರುಗಳ ಸಾಗಾಟ ಹೆಚ್ಚು: ಗುಂಡ್ಲುಪೇಟೆ ತಾಲ್ಲೂಕು ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕೊಂಡಿಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳ ಸಾಗಾಟ ನಡೆಯುತ್ತದೆ.ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಇದರ ಬಗ್ಗೆ ಅರಿವಿದ್ದರೂ, ಆಮಿಷಕ್ಕೆ ಒಳಗಾಗಿ ಕಂಡು ಕಾಣದಂತೆ ಇದ್ದಾರೆ. ಇದರ ಬಗ್ಗೆ ಶಾಸಕರು ಗಮನ ನೀಡಬೇಕು ಎಂಬುದು ಜನರ ಅಭಿಪ್ರಾಯ.

ಕಾಡು ಪ್ರಾಣಿಗಳ ಹಾವಳಿ: ತಾಲ್ಲೂಕಿನಲ್ಲಿರುವ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಬೆಳೆಗಳು ರೈತರಿಗೆ ಕೈಗೆ ಸಿಗುತ್ತಿಲ್ಲ. ಒಂದು ಬಾರಿ ಕಾಡು ಹಂದಿ, ಆನೆ, ಜಿಂಕೆಗಳ ಗುಂಪು ಜಮೀನುಗಳಿಗೆ ದಾಳಿ ಇಟ್ಟರೆ ಪೂರ್ಣ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಆನೆ ದಾಳಿಯಿಂದ ಬೆಳೆ ನಾಶವಾದರೆ ಮಾತ್ರ ಪರಿಹಾರವನ್ನು ನೀಡುತ್ತಾರೆ. ಉಳಿದಂತೆ ಹಂದಿ, ಜಿಂಕೆ ಮತ್ತು ಸಾರಂಗಗಳಿಂದ ಬೆಳೆ ನಾಶವಾದರೆ ಯಾವುದೇ ಪರಿಹಾರ ನೀಡುತ್ತಿಲ್ಲ. ಆದ್ದರಿಂದ ಪ್ರಾಣಿಗಳು ನಾಡಿಗೆ ಬಾರದಂತೆ ಮಾಡಲು ಶಾಶ್ವತ ವ್ಯವಸ್ಥೆ ರೂಪಿಸಬೇಕಾದ ಅಗತ್ಯವಿದೆ.

ವಲಸಿಗರಿಂದ ಕೃಷಿ: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ವಲಸಿಗರೇ ಕೃಷಿ ಮಾಡುತ್ತಿದ್ದಾರೆ. ಭೂ ಮಾಲೀಕರಿಂದ ಜಮೀನುಗಳನ್ನು ಬಾಡಿಗೆ ಅಥವಾ ಭೋಗ್ಯಕ್ಕೆ ಮಾಡಿಕೊಂಡು ಶುಂಠಿ, ಹಾಗಲ ಕಾಯಿಯಂತಹ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸತತವಾಗಿ ಈ ಬೆಳೆಗಳನ್ನು ಬೆಳೆದರೆ ಭೂಮಿ ಸತ್ವವನ್ನು ಕಳೆದುಕೊಳ್ಳುತ್ತದೆ ಎಂದು ಪ್ರಗತಿಪರ ರೈತರೊಬ್ಬರ ಅಭಿಪ್ರಾಯ. ಆದ್ದರಿಂದ ಭೂ ಮಾಲೀಕರೇ ಅಥವಾ ಸ್ಥಳೀಯರು ಇಲ್ಲಿನ ಭೂಮಿಯಲ್ಲಿ ಕೃಷಿ ಮಾಡಬೇಕು. ವಲಸಿಗರ ಹಾವಳಿಯನ್ನು ತಪ್ಪಿಸಬೇಕು ಎಂಬ ಅಭಿಪ್ರಾಯ ರೈತ ವಲಯದಲ್ಲಿದೆ.

ಅಕ್ರಮ ಗಣಿಗಾರಿಕೆಯ ಭೂತವೂ ತಾಲ್ಲೂಕನ್ನು ಕಾಡುತ್ತಿದೆ.ವೇಶ್ಯಾವಾಟಿಕೆ,ಕೂಲಿಗಾಗಿ ಗುಳೆ ಹೋಗುವುದು.. ಇಂತಹ ಸಮಸ್ಯೆಗಳೂ ಇಲ್ಲಿವೆ. ಮೊದಲ ಬಾರಿಗೆ ಶಾಸಕರಾಗಿರುವ ನಿರಂಜನ್‌ಕುಮಾರ್‌ ಇದನ್ನೆಲ್ಲ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಕ್ರಮ ರೆಸಾರ್ಟ್, ಹೋಂ ಸ್ಟೇಗಳು

ತಾಲ್ಲೂಕು ಪೂರ್ಣ ಪ್ರಮಾಣದಲ್ಲಿ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ ತಾಲ್ಲೂಕಿನ ಪರಿಸರ ಸೂಕ್ಷ್ಮ ವಲಯಗಳಲ್ಲಿ ಅಕ್ರಮ ಕಟ್ಟಡ, ರೇಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಾಣ ಮಾಡಬಾರದು ಎಂಬ ನಿಯಮವಿದೆ. ಆದರೂ, ಮಂಗಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಚಿಕ್ಕಯಲಚೆಟ್ಟಿ, ಕಣಿಯನಪುರ, ಜಕ್ಕಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್ ಮತ್ತು ಹೋಂ ಸ್ಟೇಗಳು ನಿರ್ಮಾಣವಾಗಿ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತಿದೆ. ಈ ಅರಣ್ಯ ಭಾಗಗಳನ್ನೆಲ್ಲ ಕಾನೂನಿನ ವ್ಯಾಪ್ತಿಗೆ ತಂದು ಕಾಡು ಪ್ರಾಣಿಗಳಿಗೆ ಉಪಯೋಗವಾಗುವಂತೆ ಮಾಡುವ ಜವಾಬ್ದಾರಿಯೂ ಶಾಸಕರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT