ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆಮಲ್ಲನಾದ ಪೊಲೀಸಪ್ಪ

Last Updated 17 ಜೂನ್ 2018, 11:10 IST
ಅಕ್ಷರ ಗಾತ್ರ

ವಿಭಿನ್ನ ಶೈಲಿಯ ಮಾತುಗಳು, ಕಚಗುಳಿ ಇಡುವ ಹಾಸ್ಯಪ್ರಜ್ಞೆಯ ಮೂಲಕ ನಾಡಿನ ಹೆಸರಾಂತನಗೆ ಮಲ್ಲರ ಸಾಲಿನಲ್ಲಿ ಗುರುತಿಸಿ ಕೊಂಡವರು ಹಾನಗಲ್‌ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಅಶೋಕ ಕೊಂಡ್ಲಿ. ವೃತ್ತಿಯಲ್ಲಿ ಪೊಲೀಸರಾದರೂ, ಹಾಸ್ಯ ಪ್ರವೃತ್ತಿಗೆ ಹೆಸರಾದವರು. ಕವಿತೆ, ಜಾನಪದ ಗೀತೆ, ಬೀದಿ ನಾಟಕಗಳು, ಸಾಹಿತ್ಯದ ಗೀಳು ಹೊಂದಿರುವ ಅವರು, ಹಾಸ್ಯ ಕಲಾವಿದರಾಗಿ ಖ್ಯಾತಿ ಪಡೆದಿದ್ದಾರೆ.

ವಿವಿಧ ಟಿವಿ ಚಾನೆಲ್‌ಗಳಲ್ಲಿ ನಗೆ ಹಬ್ಬದ ಕಾರ್ಯಕ್ರಮಗಳನ್ನು ನೀಡಿರುವ ಅಶೋಕ ಕೊಂಡ್ಲಿ ಉತ್ಸವ, ಜಾತ್ರೆಗಳಲ್ಲಿ ಹಾಸ್ಯದ ಹೊನಲು ಹರಿಸುತ್ತಾರೆ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮಾತನಾಡುವ ಇವರು, ಬೀದಿ ನಾಟಕ, ಜಾನಪದ ಗೀತೆಗಳಲ್ಲಿ ನಿಸ್ಸೀಮರು.

ಪೊಲೀಸ್‌ ಇಲಾಖೆಯ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ, ಶಾಲಾ–ಕಾಲೇಜುಗಳಲ್ಲಿ ಪೊಲೀಸ್‌ ವ್ಯವಸ್ಥೆ ಬಗ್ಗೆ ಮಾಹಿತಿಯನ್ನು ಹಾಸ್ಯ ಲೇಪಿತವಾಗಿ ಮನತಟ್ಟುವಂತೆ ಹೇಳುವ ಶೈಲಿ ಅಶೊಕ ಕೊಂಡ್ಲಿ ಅವರಿಗೆ ರೂಢಿಗತವಾಗಿದೆ.

ಹೀಗಾಗಿ ಇವರು ಕರ್ತವ್ಯಕ್ಕೆ ನಿಂತ ಸ್ಥಳದಲ್ಲಿ ಜನರು ಜಮಾಯಿಸುತ್ತಾರೆ. ಜನರ ಜೊತೆ ಮನಮಿಡಿಯುವ ಘಟನೆಗಳನ್ನು ಕವಿತೆ ಕಟ್ಟಿ ಹಾಡುತ್ತಾರೆ, ಹಾಸ್ಯದ ಪ್ರಸಂಗಗಳನ್ನು ತಮ್ಮದೇ ಶೈಲಿಯಲ್ಲಿ ಸಾದರಪಡಿಸಿ ನಗಿಸುತ್ತಾರೆ,

ಮೈಸೂರ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಅಶೋಕ ಕೊಂಡ್ಲಿ 3 ಕವನ ಸಂಕಲ, ಹಾಸ್ಯದ ಧ್ವನಿ ಸುರಳಿ ಹೊರ ತಂದಿದ್ದಾರೆ. ‘ಜಾನಪದ ಕಲಾ ಪ್ರವೀಣ’, ‘ಜನಸೇವ ರತ್ನ’ ಮತ್ತಿತರ ಪ್ರಶಸ್ತಿಗಳು ಇವರ ಮುಡಿಗೇರಿವೆ. ‘ಗಂಭೀರವಾಗಿ ಹೇಳುವ ವಿಷಯ ಜನರ ಮನಸ್ಸಿನಲ್ಲಿ ಬಹುಕಾಲ ನಿಲ್ಲುವುದಿಲ್ಲ, ಹೀಗಾಗಿ ಹಾಸ್ಯದ ಮೂಲಕ ಸಂದೇಶ ನೀಡುವುದನ್ನು ರೂಢಿಸಿ ಕೊಂಡಿದ್ದೇನೆ. ನಗು ಆರೋಗ್ಯಕ್ಕೆ ಉತ್ತಮ. ನಮ್ಮ ನೋವು ಮರೆಯಲು ಹಾಸ್ಯ ಪ್ರಜ್ಞೆ ಸಹಕಾರಿ’ ಎನ್ನುತ್ತಾರೆ ಅಶೋಕ ಕೊಂಡ್ಲಿ

ಉದಯ ಟಿವಿಯ ‘ನಗೆ ಸಖತ್‌ ಸವಾಲ್‌’, ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’, ಚಂದನ ಟಿವಿಯ ‘ಬೆಳಗು’ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಡಿಗೆ ಪರಿಚಿತರಾಗಿದ್ದಾರೆ. 200 ಕ್ಕೂ ಅಧಿಕ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಹಾಸ್ಯೋತ್ಸವ ಸೇರಿದಂತೆ ಶಾಲೆ, ಕಾಲೇಜು, ಜಾತ್ರಾ ಮಹೋತ್ಸವ, ಸಾಕ್ಷರತಾ, ಕಾನೂನು ಅರಿವು ಕಾರ್ಯಕ್ರಮಗಳಲ್ಲಿ ಹಾಸ್ಯ ಸಂಜೆ ನಡೆಸಿಕೊಟ್ಟಿದ್ದಾರೆ.
ಹಾಸ್ಯನಟ ಡಿಂಗ್ರಿ ನಾಗರಾಜ, ಕಿರುತೆರೆ ಕಲಾವಿದೆ ಅನುಶ್ರೀ, ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನಸಿಂಗ್‌ ರಾಥೋಡ, ಹಾವೇರಿಯ ಸಾಹಿತಿ ಸತೀಶ ಕುಲಕರ್ಣಿ, ರಂಗಭೂಮಿ ಕಲಾವಿದ ಕೆ.ಆರ್‌.ಹಿರೇಮಠ ಇವರ ಸಾಧನೆ ಮೆಚ್ಚಿ ಪ್ರೋತ್ಸಾಹಿಸಿದ್ದಾರೆ.

ಮಾರುತಿ ಪೇಟಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT