ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಂದ್‌ ನೀರಸ; ತಟ್ಟದ ಬಿಸಿ

ಸಾಲಮನ್ನಾ ಮಾಡದ ಜೆಡಿಎಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
Last Updated 29 ಮೇ 2018, 10:01 IST
ಅಕ್ಷರ ಗಾತ್ರ

ಉಡುಪಿ: ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ಬೆಂಬಲಿತ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿ
ಕ್ರಿಯೆ ವ್ಯಕ್ತವಾಯಿತು. ವ್ಯಾಪಾರ ವಹಿವಾಟಿನ ಮೇಲೆ ಬಂದ್ ಬಿಸಿ ತಟ್ಟಲಿಲ್ಲ. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಬೆಳಿಗ್ಗಿನಿಂದಲೇ ಸಾರಿಗೆ ಸಂಚಾರವೂ ಇತ್ತು.

ಖಾಸಗಿ ಬಸ್‌ ಸೇವೆಗೆ ಅಡ್ಡಿ ಇಲ್ಲ: ಜಿಲ್ಲೆಯ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಖಾಸಗಿ ಬಸ್ ಸೇವೆಗೆ ಬಂದ್‌ನಿಂದಾಗಿ ತೊಂದರೆಯಾಗಲಿಲ್ಲ. ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬಸ್‌ಗಳು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೃಶ್ಯ ಕಂಡಬಂತು. ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿತ್ತು.

ಕೆಎಸ್‌ಆರ್‌ಟಿಸಿ ಸೇವೆ: ಸರ್ಕಾರಿ ಬಸ್‌ಗಳು ವೇಳಾಪಟ್ಟಿಯಂತೆ ಸಂಚರಿಸಿದವು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗಿನಿಂದಲೇ ಪ್ರಯಾಣಿಕರನ್ನು ಕರೆದೊಯ್ಯಲು ಬಸ್‌ಗಳು ಸಿದ್ಧವಾಗಿ ನಿಂತಿದ್ದವು. ಬಂದ್‌ಗೆ ಬಿಜೆಪಿ ಹೊರತುಪಡಿಸಿ ಯಾವುದೇ ಸಂಘಟನೆಗಳು ಬೆಂಬಲ ನೀಡದಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಲಿಲ್ಲ.

ಬಿಜೆಪಿ ಪ್ರತಿಭಟನೆ: ಈ ಮಧ್ಯೆ ಬೆಳಿಗ್ಗೆ 11ಕ್ಕೆ ನಗರದ ಜೋಡುಕಟ್ಟೆಯಿಂದ ಸರ್ವೀಸ್‌ ಬಸ್‌ ನಿಲ್ದಾಣದವರೆಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಮಾತನಾಡಿ, ‘ಅಧಿಕಾರ ಹಿಡಿಯುವ ಮುನ್ನ ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಇದೀಗ ಮಾತು ಬದಲಿಸುವ ಮೂಲಕ ಮತ್ತೊಮ್ಮೆ ವಚನಭ್ರಷ್ಟರಾಗಿದ್ದಾರೆ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಪರವಾಗಿ ಮತದಾರ ತೀರ್ಪು ನೀಡಿದ್ದರೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದು ಖಂಡನೀಯ. ಚುನಾವಣೆಗೂ ಮುನ್ನ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದವರು, ಈಗ ಒಂದಾಗಿರುವುದು ಹಾಸ್ಯಾಸ್ಪದ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲಗಳನ್ನೂ ಮನ್ನಾ ಮಾಡುವುದಾಗಿ ಬಿಜೆಪಿ ಘೋಷಿಸಿತ್ತು. ಅದರಂತೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸಿದ ದಿನವೇ ಸಾಲಮನ್ನಾ ಮಾಡಲು ನಿರ್ಧರಿಸಿದ್ದರು. ಒಂದೆರಡು ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳುವಷ್ಟರಲ್ಲಿ ಅಧಿಕಾರ ಕೈತಪ್ಪಿತು ಎಂದು ಮಟ್ಟಾರು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲೆಯಲ್ಲಿ ಬಲವಂತದ ಬಂದ್‌ ಮಾಡಿಸಿಲ್ಲ. ಬಿಜೆಪಿ ಮುಖಂಡರಿಗೆ ಸೇರಿದ ವ್ಯಾಪಾರ ವಹಿವಾಟನ್ನು ಮಾತ್ರ ಬಂದ್‌ ಮಾಡಲಾಗಿದೆ ಎಂದರು.

ಶಾಸಕ ಕೆ.ರಘುಪತಿ ಭಟ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌, ಮುಖಂಡರಾದ ರಾಘವೇಂ ದ್ರ ಕಿಣಿ, ಉದಯಕುಮಾರ್‌ ಶೆಟ್ಟಿ, ಪ್ರಭಾಕರ್ ಪೂಜಾರಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ವಿ.ಮಂಜುಳಾ ಇದ್ದರು.

ಖಾಸಗಿ ನಗರ ಸಾರಿಗೆ ಪ್ರಮಾಣ ಇಳಿಕೆ

ಖಾಸಗಿ ನಗರ ಸಾರಿಗೆ ಬಸ್‌ಗಳ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾದಂತೆ ಕಂಡುಬಂತು. ಬಸ್‌ ನಿಲ್ದಾಣದಲ್ಲಿ ಬೆರಳೆಣಿಕೆಯ ಬಸ್‌ಗಳು ಇದ್ದದ್ದು ಕಂಡುಬಂತು. ಪ್ರತಿನಿತ್ಯ ಇರುವಷ್ಟು ಬಸ್‌ಗಳು ಇಂದು ಇಲ್ಲ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟರು. ನಗರ ಸಾರಿಗೆ ಬಸ್‌ಗಳು ಹಾಗೂ ಆಟೊಗಳ ಸಂಚಾರ ಇದ್ದಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಲಿಲ್ಲ.

ಬಂದ್ ವಿಫಲ ಮಾಡಿದ ಜನತೆಗೆ ಸಿಪಿಎಂ ಅಭಿನಂದನೆ

ಉಡುಪಿ: ಬಿಜೆಪಿ ನೀಡಿದ್ದ ಬಂದ್ ಕರೆಯನ್ನು ತಿರಸ್ಕರಿಸಿದ ಜನತೆಯನ್ನು ಸಿಪಿಎಂ ಅಭಿನಂದಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಅದಕ್ಕೂ ಮೊದಲೇ ಸಾಲಮನ್ನಾದ ಬೇಡಿಕೆ ಇಟ್ಟು ಬಂದ್‌ಗೆ ಕರೆ ನೀಡಿದ್ದು ಸರಿಯಲ್ಲ.

ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡುವುದು ಅಗತ್ಯ. ಆದರೆ ಅದಕ್ಕೆ ಇನ್ನೂ ಕಾಲಾವಕಾಶ ನೀಡಬೇಕು. ದೊಡ್ಡ ಉದ್ದಿಮೆದಾರರ ₹3 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಆದರೆ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿಲ್ಲ. ಮನ್ನಾ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಬೇಕು. ಕಪ್ಪು ಹಣವನ್ನು ತಂದು ದೇಶದ ನಾಗರಿಕರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುವಂತೆ ಕೇಳಬೇಕು ಎಂದು ಪಕ್ಷದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

**
‘ನಾನು ಮತದಾರರ ಮುಲಾಜಿನಲ್ಲಿಲ್ಲ; ಕಾಂಗ್ರೆಸ್‌ ಮುಲಾಜಿನಲ್ಲಿದ್ದೇನೆ’ ಎಂದು ಹೇಳಿರುವ ಕುಮಾರಸ್ವಾಮಿ ಅವರಿಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು
ಮಟ್ಟಾರು ರತ್ನಾಕರ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT