ಮಂಗಳವಾರ, ಮಾರ್ಚ್ 2, 2021
23 °C
ಚಾಮರಾಜನಗರದಲ್ಲಿ ಬಿಜೆಪಿಯೇ ಅತ್ಯಂತ ದೊಡ್ಡ ಪಕ್ಷ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು

ಚಾಮರಾಜನಗರ, ಕೊಳ್ಳೇಗಾಲ: ಎರಡೂ ನಗರಸಭೆ ಅತಂತ್ರ, ಮೈತ್ರಿ ಖಾತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ/ಕೊಳ್ಳೇಗಾಲ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲದ ಎರಡೂ ನಗರಸಭೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರ ಎರಡೂ ಕಡೆ ಯಾವ ಪಕ್ಷಕ್ಕೂ ಸ್ಪಷ್ಟ ಜನಾದೇಶ ನೀಡಿಲ್ಲ.

ಚಾಮರಾಜನಗರದ 31 ವಾರ್ಡ್‌ಗಳ ಪೈಕಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.  31 ಸದಸ್ಯ ಬಲದ ಕೊಳ್ಳೇಗಾಲದ ನಗರಸಭೆಯಲ್ಲಿ ಕಳೆದ ಬಾರಿ 21 ಸ್ಥಾನಗಳನ್ನು ಗೆದ್ದು ಸ್ಪ‍ಷ್ಟಬಹುಮತ ಪಡೆದಿದ್ದ ಕಾಂಗ್ರೆಸ್‌ ಈ ಬಾರಿ ಹೀನಾಯವಾಗಿ ಸೋತಿದೆ. ಆದರೆ, 11 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷ ಎಂಬುದಕ್ಕೆ ಸಮಾಧಾನ ಪಟ್ಟುಕೊಂಡಿದೆ.

ಚಾಮರಾಜನಗರದಲ್ಲೂ ಕಾಂಗ್ರೆಸ್‌ ಸ್ಥಿತಿ ಆರಕ್ಕೆ ಏರಿಲ್ಲ, ಮೂರಕ್ಕೆ ಇಳಿದಿಲ್ಲ ಎನ್ನುವಂತೆ ಇದೆ. ಕಳೆದ ಬಾರಿ ಎಂಟು ವಾರ್ಡ್‌ಗಳಲ್ಲಿ ಅದು ಗೆದ್ದಿತ್ತು. ಈ ಬಾರಿಯೂ ಅಷ್ಟೇ ವಾರ್ಡ್‌ ಅನ್ನು ಕೈ ವಶ ಮಾಡಿಕೊಳ್ಳುವಲ್ಲಿ ಶಕ್ತವಾಗಿದೆ. ಉಳಿದಂತೆ ಎಸ್‌ಡಿಪಿಐನ ಆರು, ಬಿಎಸ್‌ಪಿಯ ಒಬ್ಬರು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ನಗರಸಭೆಗೆ ಆಯ್ಕೆಯಾಗಿದ್ದಾರೆ.

ಇಲ್ಲಿ ಸರಳ ಬಹುಮತಕ್ಕೆ 16 ಸ್ಥಾನಗಳು ಬೇಕು. ಆದರೆ, ಯಾವ ಪಕ್ಷವೂ ಅಷ್ಟು ವಾರ್ಡ್‌ಗಳಲ್ಲಿ ಗೆದ್ದಿಲ್ಲ. 15 ವಾರ್ಡ್‌ಗಳಲ್ಲಿ ಕಮಲ ಪಾಳಯ ಜಯಭೇರಿ ಬಾರಿಸಿದರೂ, ‌ ಅದಕ್ಕೆ ಸುಲಭವಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಸರಳ ಬಹುಮತಕ್ಕೆ 16 ಸ್ಥಾನಗಳು ಸಾಕಾದರೂ ಇಲ್ಲಿಯ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡುವ ಸಂದರ್ಭದಲ್ಲಿ ಮತದಾನ ಮಾಡುವ ಹಕ್ಕು ಶಾಸಕ ಹಾಗೂ ಸಂಸದರಿಗೆ ಇದೆ. ಹಾಗಾಗಿ, ಅಧಿಕಾರದ ಚುಕ್ಕಾಣಿ ಹಿಡಿಯಲು  ಯಾವುದೇ ಪಕ್ಷಕ್ಕೆ 17 ಸದಸ್ಯರ ಬೆಂಗಲ ಬೇಕು. ಇಲ್ಲಿನ ಶಾಸಕರು ಮತ್ತು ಸಂಸದರು ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವುದರಿಂದ ಕಾಂಗ್ರೆಸ್‌ಗೆ ಹೆಚ್ಚುವರಿ ಎರಡು ಮತಗಳು ಸಿಗಲಿವೆ.

ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಇನ್ನೂ ಇಬ್ಬರು ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದುದಕ್ಕೆ ಮುನಿಸಿಕೊಂಡು ಪಕ್ಷೇತರರಾಗಿ 17ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಸಿ.ಎ. ಬಸವಣ್ಣ ಹಾಗೂ 27ನೇ ವಾರ್ಡ್‌ನಿಂದ ಬಿಎಸ್‌ಪಿಯಿಂದ ಗೆದ್ದಿರುವ ವಿ. ಪ್ರಕಾಶ್‌ ಅವರು ಬೆಂಬಲ ನೀಡಿದರೆ ಅಥವಾ ಎಸ್‌ಡಿಪಿಐ ಬೆಂಬಲ ಕೊಟ್ಟರೆ ಬಿಜೆಪಿಗೆ ಅಧಿಕಾರ ಸಿಗಲಿದೆ. ಎಸ್‌ಡಿಪಿಐ ಮತ್ತು ಬಿಜೆಪಿ ಮೈತ್ರಿ ಸಾಧ್ಯತೆ ಕ್ಷೀಣವಾಗಿರುವುದರಿಂದ ಈಗ ಎಲ್ಲರ ಗಮನ ಬಸವಣ್ಣ ಹಾಗೂ ವಿ. ಪ್ರಕಾಶ್‌ ಅವರತ್ತ ನೆಟ್ಟಿದೆ.

ನಗರಸಭೆಯಲ್ಲಿ ಆಡಳಿತ ನಡೆಸುವ ವಿಶ್ವಾಸದಲ್ಲಿ ಬಿಜೆಪಿ ಇದೆ. ‘ಚಾಮರಾಜನಗರದ ಜನರು ಕಾಂಗ್ರೆಸ್‌ ಹಾಗೂ ಮೈತ್ರಿ ಪಕ್ಷಗಳ ದುರಾಡಳಿತವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಮಗೆ ಜನಾದೇಶ ನೀಡಿದ್ದಾರೆ. ಹಾಗಾಗಿ ‌ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಎಂಟು ಸ್ಥಾನಗಳಿಗೆ ತೃಪ್ತಿಪಟ್ಟಿರುವ ಕಾಂಗ್ರೆಸ್‌ ಮತ್ತೆ ಎಸ್‌ಡಿಪಿಐ ಹಾಗೂ ಇತರರ ಬೆಂಬಲದಿಂದ ಅಧಿಕಾರಕ್ಕೆ ಏರಲು ಪ್ರಯತ್ನಿಸುತ್ತಿದೆ. 

‘ನಗರಸಭೆಯ ಚುಕ್ಕಾಣಿ ಹಿಡಿಯಲು ನಮಗೆ ಈಗಲೂ ಅವಕಾಶ ಇದೆ. ಅದಕ್ಕೆ ಬೇಕಾದಷ್ಟು ಮತಗಳು ನಮ್ಮ ಬಳಿ ಇವೆ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಅದೇ ರೀತಿ ಇಲ್ಲೂ ಜಾತ್ಯತೀತ ಶಕ್ತಿಗಳು ಒಟ್ಟು ಸೇರಿ ಆಡಳಿತ ನಡೆಸುತ್ತೇವೆ. ಬಿಎಸ್‌ಪಿ ಸದಸ್ಯ ಪ್ರಕಾಶ್‌ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ನಮಗೇ ಬೆಂಬಲ ನೀಡಲಿದ್ದಾರೆ’ ಎಂದು ಸಂಸದ ಆರ್‌. ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

‘ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್‌ ಅಹಮದ್‌ ಜೊತೆ ಮಾತನಾಡಿದ್ದೇವೆ. ಬಸವಣ್ಣ ಅವರೊಂದಿಗೂ ಸಂಪರ್ಕದಲ್ಲಿದ್ದೇವೆ. ಕಾಂಗ್ರೆಸ್‌ಗೇ ಬೆಂಬಲ ನೀಡುವುದಾಗಿ ಹೇಳಿದ್ದಾರೆ’ ಎಂದು ಅವರು ತಿಳಿಸಿದರು.

ಕೊಳ್ಳೇಗಾಲದಲ್ಲೂ ಸಮ್ಮಿಶ್ರ ಆಡಳಿತ

ಕೊಳ್ಳೇಗಾಲ ನಗರಸಭೆಯೂ ಅತಂತ್ರವಾಗಿರುವುದರಿಂದ ಇಲ್ಲಿಯೂ ಮೈತ್ರಿ ಆಡಳಿತವೇ ಬರುವುದು ಖಚಿತ. 31 ವಾರ್ಡ್‌ಗಳ ಪೈಕಿ 30 ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆದಿದೆ. 9ನೇ ವಾರ್ಡ್‌ನ ಬಿಎಸ್‌ಪಿ ಅಭ್ಯರ್ಥಿ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಅಲ್ಲಿ ಚುನಾವಣೆ ಮುಂದೂಡಲಾಗಿದೆ. 

30 ವಾರ್ಡ್‌ಗಳ ಪೈಕಿ 6ನೇ ವಾರ್ಡ್‌‌ನಲ್ಲಿ ಬಿಎಸ್‌ಪಿ ಅಭ್ಯರ್ಥಿ ಗಂಗಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಆಗಸ್ಟ್‌ 31ರಂದು ಉಳಿದ 29 ವಾರ್ಡ್‌ಗಳಿಗೆ ಮತದಾನ ನಡೆದಿತ್ತು. 

ಕಾಂಗ್ರೆಸ್‌ 11 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸ ಹೊಂದಿದ್ದ ಬಿಎಸ್‌ಪಿ 8 (ಅವಿರೋಧ ಆಯ್ಕೆ ಸೇರಿಸಿದರೆ 9), ಬಿಜೆಪಿ 6, ಪಕ್ಷೇತರರು 4 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಪಕ್ಷೇತರರ ಪೈಕಿ ಮೊದಲನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಕವಿತಾ ಅವರಿಗೆ ಕಾಂಗ್ರೆಸ್‌ ಬೆಂಬಲ ವ್ಯಕ್ತಪಡಿಸಿರುವುದರಿಂದ ಕಾಂಗ್ರೆಸ್‌ ಬಲ 12ಕ್ಕೆ ಏರಿದಂತಾಗಿದೆ.

ಇಲ್ಲೂ ಸರಳ ಬಹುಮತಕ್ಕೆ 16 ಸ್ಥಾನಗಳು ಸಾಕು. ಆದರೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಗೆ ಶಾಸಕ ಹಾಗೂ ಸಂಸದರಿಗೂ ಮತ ಹಾಕಲು ಅವಕಾಶ ಇರುವುದರಿಂದ 17 ಸದಸ್ಯರ ಬೆಂಬಲ ಹೊಂದಿರುವುದು ಅನಿವಾರ್ಯ. 

ಸದ್ಯ 30 ವಾರ್ಡ್‌ಗಳಿಗೆ ಚುನಾವಣೆ ಆಗಿರುವುದರಿಂದ‌, ಅಧಿಕಾರ ಹಿಡಿಯಲು 16 ಸದಸ್ಯರ ಬೆಂಬಲ ಇದ್ದರೆ ಸಾಕು.

ಕೊಳ್ಳೇಗಾಲದಲ್ಲೂ ಕಾಂಗ್ರೆಸ್‌ ಪಕ್ಷೇತರರ‌ ಹಾಗೂ ಎಸ್‌ಡಿಪಿಐನ ಬೆಂಬಲ ಪಡೆದು ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿಯುವ ಯೋಚನೆಯಲ್ಲಿದೆ. 

ಬಿಎಸ್‌ಪಿ, ಬಿಜೆಪಿ ಮತ್ತು ಪಕ್ಷೇತರರು ಒಂದು ಗೂಡಿದರೆ ಆಡಳಿತ ನಡೆಸಬಹುದು. ಆದರೆ, ಬಿಜೆಪಿ–ಬಿಎಸ್‌ಪಿ ನಡುವೆ ಮೈತ್ರಿ ಸಾಧ್ಯವೇ ಎಂಬುದು ಪ್ರಶ್ನೆ.

ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಅರಳಿದ ಕಮಲ

ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಚಾಮರಾಜನಗರದಲ್ಲಿ ಬಿಜೆಪಿಯು ಆ ಪಕ್ಷಕ್ಕೆ ಬಲವಾದ ಏಟನ್ನೇ ನೀಡಿದೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ತಂತ್ರಗಾರಿಕೆ ಏನೂ ಕೆಲಸ ಮಾಡಿಲ್ಲ.

16–17ರಷ್ಟು ಸ್ಥಾನಗಳು ಬರಬಹುದು ಎಂಬ ದೃಢ ವಿಶ್ವಾಸದಲ್ಲಿ ಕಾಂಗ್ರೆಸ್‌ ಮುಖಂಡರು ಇದ್ದರು. ಆದರೆ ಫಲಿತಾಂಶ ಎಲ್ಲವನ್ನೂ ತಲೆಕೆಳಗು ಮಾಡಿದೆ.

ಕಳೆದ ಬಾರಿ ಬಿಜೆಪಿ, ಕೆಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ ಎಂದು ಚೂರು ಚೂರಾಗಿ ಹೋಗಿದ್ದ ಕಮಲ ಪಕ್ಷ ಈ ಬಾರಿ ಒಗ್ಗೂಡಿದ್ದು, ಉತ್ತಮ ಸಾಧನೆ ಮಾಡಲು ಕಾರಣವಾಗಿದೆ. ಕಳೆದ ಬಾರಿ ಈ ಮೂರು ಪಕ್ಷಗಳು ಒಟ್ಟು 12 ವಾರ್ಡ್‌ಗಳಲ್ಲಿ ಗೆದ್ದಿದ್ದವು. ಈ ಬಾರಿ ಇನ್ನೂ ಮೂರು ಸ್ಥಾನಗಳು ಹೆಚ್ಚಾಗಿ ಸೇರ್ಪ‍ಡೆಗೊಂಡಿವೆ.

30ನೇ ವಾರ್ಡ್‌ನ ಅಭ್ಯರ್ಥಿ ಮಹದೇವಯ್ಯ ಅವರನ್ನು ಬಿಟ್ಟರೆ, ಬೇರೆ ಯಾವ ಹಾಲಿ ಸದಸ್ಯರಿಗೂ ಅದು ಟಿಕೆಟ್‌ ನೀಡಿರಲಿಲ್ಲ. ಹಾಗಾಗಿ, ನಾಲ್ಕು ವಾರ್ಡ್‌ಗಳಲ್ಲೂ ಬಂಡಾಯದ ಭೀತಿ ಎದುರಾಗಿತ್ತು. ಅವೆಲ್ಲವನ್ನೂ ಹಿಮ್ಮೆಟ್ಟಿಸಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅದಕ್ಕೆ ಸಾಧ್ಯವಾಗಿದೆ.

ಮುಖಂಡರು ಏನನ್ನುತ್ತಾರೆ?

‘ಅಧಿಕಾರ ಹಿಡಿಯುವುದು ಖಚಿತ’

ಫಲಿತಾಂಶ ಸಂತಸ ತಂದಿದೆ. ಪಕ್ಷದ ಕಾರ್ಯಕರ್ತರ ಒಗ್ಗಟ್ಟು ಮತ್ತು  ಮುಖಂಡರ ಸಾಂಘಿಕ ಪ್ರಯತ್ನದಿಂದ 15 ಸ್ಥಾನಗಳನ್ನು ಗೆದ್ದಿದ್ದೇವೆ. ಕಾಂಗ್ರೆಸ್‌ ನೇತೃತ್ವದ ಐದು ವರ್ಷಗಳ ದುರಾಡಳಿತ, ಲಂಚಗುಳಿತನ, ಭ್ರಷ್ಟಾಚಾರ, ಮೂಲ ಸೌಕರ್ಯ ಕಲ್ಪಿಸುವುದರಲ್ಲಿ ಆಡಳಿತದ ವೈಫಲ್ಯದಿಂದ ಬೇಸತ್ತು‌ ಚಾಮರಾಜನಗರದ ಮತದಾರರು ಕಾಂಗ್ರೆಸ್‌ ಅನ್ನು ತಿರಸ್ಕರಿಸಿದ್ದಾರೆ. ನಗರಸಭೆಯ ಅಧಿಕಾರ ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತೇವೆ. ಕೊಳ್ಳೇಗಾಲದಲ್ಲಿ ಸ್ಥಳೀಯವಾಗಿದ್ದ ಗೊಂದಲದಿಂದಾಗಿ ನಿರೀಕ್ಷಿಸಿದಷ್ಟು ಸ್ಥಾನಗಳು ಬಂದಿಲ್ಲ.

–ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

‘ಎರಡೂ ಕಡೆ ನಮ್ಮದೇ ಆಡಳಿತ’

ಕೊಳ್ಳೇಗಾಲ ಮತ್ತು ಚಾಮರಾಜನಗರಗಳಲ್ಲಿ 16ರಿಂದ 17 ಸ್ಥಾನಗಳು ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅಷ್ಟು ಬಂದಿಲ್ಲ. ಆದರೂ, ಎರಡೂ ಕಡೆ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಅವಕಾಶ ಇದೆ. ಜಾತ್ಯತೀತ ಶಕ್ತಿಗಳೆಲ್ಲ ಒಟ್ಟುಗೂಡಿ ಆಡಳಿತ ನಡೆಸುತ್ತೇವೆ. ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಬಹುದು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಬಿಎಸ್‌ಪಿಯೂ ಪಾಲುದಾರ ಪಕ್ಷವಾಗಿರುವುದರಿಂದ ನಮಗೆ ಬೆಂಬಲ ಕೊಡಬಹುದು.

–ಪಿ. ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

‘ಆಡಳಿತ ನಡೆಸಲು ಅನುಕೂಲ ವಾತಾವರಣ’ 

ಚಾಮರಾಜನಗರದಲ್ಲಿ ಹಿಂದೆ 8 ಸ್ಥಾನ ಇತ್ತು. ಈಗಲೂ ಅಷ್ಟನ್ನೇ ಗೆದ್ದಿದ್ದೇವೆ. ನಿರೀಕ್ಷೆಯಷ್ಟು ಸ್ಥಾನಗಳು ಬರದಿರುವುದು ನಿಜ. ಆದರೆ, ಅಧಿಕಾರ ಪಡೆಯಲು ಬೇಕಾದಂತಹ ಅನುಕೂಲ ಇದೆ. ಜಾತ್ಯತೀತ ಶಕ್ತಿಗಳು ಒಗ್ಗೂಡುತ್ತೇವೆ. ಕೊಳ್ಳೇಗಾಲದಲ್ಲಿ 12 ಸ್ಥಾನ ಗೆದ್ದಿದ್ದೇವೆ. ಅಲ್ಲಿ ಕಡಿಮೆ ಸ್ಥಾನ ಬರಲು ಹಲವು ಕಾರಣಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿತ್ತು. ಸ್ಥಳೀಯ ಶಾಸಕರು ಮಂತ್ರಿಯಾಗಿದ್ದಾರೆ. ಹಾಗಾಗಿ, ಅವರ ಪ್ರಭಾವದಿಂದ ಬಿಎಸ್‌ಪಿ ಸ್ವಲ್ಪ ಹೆಚ್ಚು ಸ್ಥಾನಗಳಿಸಿದೆ. ಈ ಫಲಿತಾಂಶವು ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 

–ಆರ್‌. ಧ್ರುವನಾರಾಯಣ, ಸಂಸದ

‘ಈಗಲೂ ನಮಗೇ ಬಹುಮತ’ 

ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದಿರುವುದು ಹೌದು. ಇಂತಹ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳ ಕಾರಣಕ್ಕೆ ಫಲಿತಾಂಶ ಭಿನ್ನವಾಗಿ ಬರುತ್ತವೆ. ಈಗಲೂ ನಮಗೇ ಬಹುಮತ ಇದೆ. ಕಾಂಗ್ರೆಸ್‌ ಬೇರೆ ಅಲ್ಲ, ಎಸ್‌ಡಿಪಿಐ ಬೇರೆ ಅಲ್ಲ. ಅವರು ನಮ್ಮನ್ನೇ ಬೆಂಬಲಿಸುತ್ತಾರೆ. ಕೊಳ್ಳೇಗಾಲದಲ್ಲೂ ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ

–ಸಿ.ಪುಟ್ಟರಂಗ ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು