ಮನುಕುಲದ ಒಳಿತಿಗೆ ವಿಜ್ಞಾನ ಪೂರಕವಾಗಲಿ

7
ಸುವರ್ಣ ಮಹೋತ್ಸವದಲ್ಲಿ ವಿಶ್ರಾಂತ ಕುಲಪತಿ ಡಾ.ಇ.ಟಿ.ಪುಟ್ಟಯ್ಯ ಸಲಹೆ

ಮನುಕುಲದ ಒಳಿತಿಗೆ ವಿಜ್ಞಾನ ಪೂರಕವಾಗಲಿ

Published:
Updated:
Deccan Herald

ಚಾಮರಾಜನಗರ: ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯ ಪರಿಸರದ ಮೇಲೆ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಬೇಕು. ಮನುಕುಲದ ಒಳಿತಿಗಾಗಿ ವಿಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಶ್ರಾಂತ ಕುಲಪತಿ ಡಾ.ಇ.ಟಿ.ಪುಟ್ಟಯ್ಯ ಹೇಳಿದರು.

ಪಟ್ಟಣದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಹಾಗೂ ಅಂತರಕಾಲೇಜು ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅವರು ಮಾತನಾಡಿದರು.

ರಾಷ್ಟ್ರದ ಅಭಿವೃದ್ಧಿಯಲ್ಲಿ ವಿಜ್ಞಾನದ ಆವಿಷ್ಕಾರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ವಿಜ್ಞಾನ ಕ್ಷೇತ್ರಗಳಲ್ಲಿ ಆಗುತ್ತಿರುವ ಆವಿಷ್ಕಾರಗಳಿಂದ ಪರಿಸರಕ್ಕೆ ಒಳಿತು ಹಾಗೂ ಕೆಡಕುಗಳೂ ಇವೆ. ಹೀಗಾಗಿ, ಪರಿಸರದ ಒಳಿತಿಗೆ ಬಳಸಿಕೊಳ್ಳಬೇಕು ಎಂದರು.

ಶಿವಮೊಗ್ಗದ ಕಲುಷಿತ ನೀರು ತುಂಗೆಯ ಒಡಲಿಗೆ ಸೇರುತ್ತಿದೆ. ಗಂಗಾ ನದಿಯ ಒಡಲಿಗೆ ಕೈಗಾರಿಕಾ ತ್ಯಾಜ್ಯ ನೀರು ಹರಿಯುತ್ತಿದೆ. ಮಾಲಿನ್ಯಕಾರಕ ವಸ್ತುಗಳು ನದಿಗಳಿಗೆ ಸೇರುತ್ತಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಜೀವರಾಶಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಇರುವಂತೆ ಮುಂದಿನ ದಿನಗಳಲ್ಲಿ ಆಮ್ಲಜನಕದ ಘಟಕಗಳನ್ನೂ ಅಲ್ಲಲ್ಲಿ ನಿರ್ಮಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಎ.ಜಿ.ಶಿವಕುಮಾರ್ ಮಾತನಾಡಿ, ‘ಬೆಳೆಯುತ್ತಿರುವ ವಿಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು. ಆಧ್ಯಾತ್ಮಿಕ ಚಿಂತನೆ ಇಲ್ಲದಿದ್ದರೆ ಜಗತ್ತು ನಾಶವಾಗುತ್ತದೆ. ಹೀಗಾಗಿ, ಅಧ್ಯಾತ್ಮ ಹಾಗೂ ವಿಜ್ಞಾನ ಜೊತೆಯಾಗಿ ಸಾಗಿದರೆ ಜಗತ್ತು ಬೆಳಗುತ್ತದೆ’ ಎಂದು ಹೇಳಿದರು.

ಅಂತರಕಾಲೇಜು ವಿಜ್ಞಾನ ವಸ್ತುಪ್ರದರ್ಶನದಲ್ಲಿ ಚಾಮರಾಜನಗರ, ಮೈಸೂರು, ನಂಜನಗೂಡು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಂದ ಸುಮಾರು 85ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜೆಎಸ್ಎಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಸುವರ್ಣ ಮಹೋತ್ಸವದ ಸಂಚಾಲಕ ಪ್ರೊ.ಕೆ.ವೀರಣ್ಣ, ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಮಹಾಲಿಂಗಪ್ಪ, ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಬಿ.ರೇವಣಾಂಬ, ಐಕ್ಯೂಎಸಿ ಸಂಚಾಲಕಿ ಎನ್.ಗಾಯತ್ರಿದೇವಿ ಹಾಜರಿದ್ದರು.

‘ವಿಜ್ಞಾನದ ಮೂಲ ಭಾರತ’:

‘ಮಂಗನಿಂದ ಮಾನವ ವಿಕಾಸವಾಗಿರುವ ಕುರಿತು ನಮಗೆ ಮೊದಲೇ ತಿಳಿದಿತ್ತು. ಹೀಗಾಗಿ, ವಿಜ್ಞಾನದ ಮೂಲ ಭಾರತ. ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತಿದ್ದರು. ಹೀಗಾಗಿ, ಸಾಹಿತ್ಯದಲ್ಲೂ ಪಾರಂಪರಿಕ ವಿಜ್ಞಾನ ಬೆಸೆದುಕೊಂಡಿದೆ’ ಎಂದು ವಿಶ್ರಾಂತ ಕುಲಪತಿ ಡಾ.ಇ.ಟಿ.ಪುಟ್ಟಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !