ಆ.13ಕ್ಕೆ ಕೇಂದ್ರೀಯ ವಿದ್ಯಾಲಯ ಉದ್ಘಾಟನೆ

7
ಮಾದಾಪುರ ಗ್ರಾಮದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ

ಆ.13ಕ್ಕೆ ಕೇಂದ್ರೀಯ ವಿದ್ಯಾಲಯ ಉದ್ಘಾಟನೆ

Published:
Updated:
Deccan Herald

ಚಾಮರಾಜನಗರ: ತಾಲ್ಲೂಕಿನ ಮಾದಾಪುರ ಗ್ರಾಮದ ಬಳಿ ₹16 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೇಂದ್ರೀಯ ವಿದ್ಯಾಲಯ ಆಗಸ್ಟ್‌ 13ರಂದು ಮಧ್ಯಾಹ್ನ 12ಕ್ಕೆ ಉದ್ಘಾಟನೆಗೊಳ್ಳಲಿದೆ.

ವಿದ್ಯಾಲಯವನ್ನು ಕೇಂದ್ರ ಸಚಿವ ಅನಂತಕುಮಾರ್‌ ಉದ್ಘಾಟಿಸಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಿಕ್ಷಣ ಸಚಿವ ಎನ್.ಮಹೇಶ್‌, ಶಾಸಕರಾದ ಆರ್.ನರೇಂದ್ರ, ಸಿ.ಎಸ್.ನಿರಂಜನಕುಮಾರ್‌ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಆರ್.ಧ್ರುವನಾರಾಯಣ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಗೆ 2013ರಲ್ಲಿ ಕೇಂದ್ರೀಯ ವಿದ್ಯಾಲಯ ಮಂಜೂರಾಗಿತ್ತು. 2014ರಲ್ಲಿ ಪಟ್ಟಣದ ರೇಷ್ಮೆ ಇಲಾಖೆಯ ಕಟ್ಟಡದಲ್ಲಿ ಶಾಲೆಯನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿತ್ತು. ಈಗ ಮಾದಾಪುರ ಗ್ರಾಮದಲ್ಲಿ 7 ಎಕರೆ 5 ಗುಂಟೆ ವಿಸ್ತೀರ್ಣದಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರಾಂಶುಪಾಲರು ಹಾಗೂ ಶಿಕ್ಷಕರ 9 ವಸತಿ ಗೃಹಗಳನ್ನೂ ನಿರ್ಮಿಸಲಾಗಿದೆ. ಸುಸಜ್ಜಿತ ಆಟದ ಮೈದಾನವಿದೆ ಎಂದರು.

ಈ ಹಿಂದೆ 1ನೇ ತರಗತಿಗೆ 40 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಇತ್ತು. ಮುಂದಿನ ಶೈಕ್ಷಣಿಕ ವರ್ಷದಿಂದ 80 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ನೀಡಲಾಗುತ್ತದೆ. ಶಾಲಾ ಕಟ್ಟಡ ಉದ್ಘಾಟನೆಗೊಂಡ ಎರಡು ದಿನಗಳಲ್ಲಿ ತರಗತಿಗಳು ಆರಂಭವಾಗಲಿದೆ ಎಂದು ತಿಳಿಸಿದರು.

ದೇಶದಲ್ಲಿ 1,159 ಕೇಂದ್ರೀಯ ವಿದ್ಯಾಲಯಗಳಿವೆ. ರಾಜ್ಯದಲ್ಲಿ 46 ವಿದ್ಯಾಲಯಗಳಿವೆ. ಬೆಂಗಳೂರಿನಲ್ಲಿ 13, ಬೆಳಗಾವಿ ಜಿಲ್ಲೆಯಲ್ಲಿ 4, ಬಳ್ಳಾರಿ ಜಿಲ್ಲೆಯಲ್ಲಿ 2 ವಿದ್ಯಾಲಯಗಳಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಡಿ.ಕೆ.ಮಿಶ್ರಾ, ಕೆಪಿಸಿಸಿ ಸದಸ್ಯ ಅಕ್ಬರ್‌ ಅಲಿ, ಎಚ್‌ಎಸ್‌ಸಿಎಲ್‌ ಕಂಪನಿ ಎಂಜಿನಿಯರ್‌ ಅನುಪಮಾ, ಗುತ್ತಿಗೆದಾರ ಸಾಯಿ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಪತ್ರಿಕಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !