ಭಾನುವಾರ, ಮಾರ್ಚ್ 29, 2020
19 °C

ಕೇರಳ ಮಳೆ: ಕೂಲಿ ಕಾರ್ಮಿಕರಿಗೆ ತೊಂದರೆ

ಪ್ರಜಾ‌ವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ನೆರೆಯ ಕೇರಳದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ಅಲ್ಲಿಗೆ ಪ್ರತಿ ದಿನ ಹೋಗುತ್ತಿದ್ದ ತಾಲ್ಲೂಕಿನ ನೂರಾರು ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.

ಭೀಮನಬೀಡು, ಕಣ್ಣೇಗಾಲ, ಮದ್ದೂರು, ಬನ್ನಿತಳಪುರ, ಮದ್ದಯ್ಯನಹುಂಡಿ, ಚೆನ್ನಮಲ್ಲಿಪುರ, ಹೊಂಗಳ್ಳಿ ನಿವಾಸಿಗಳು ಮತ್ತು ಕಾಡಂಚಿನ ಪ್ರದೇಶದ ಹತ್ತಕ್ಕೂ ಹೆಚ್ಚಿನ ಹಾಡಿಗಳ ಆದಿವಾಸಿಗಳು ಕೇರಳದಲ್ಲಿರುವ ಹೋಟೆಲ್‌ಗಳಿಗೆ, ಕಾಫಿ ತೋಟಗಳಿಗೆ ಮತ್ತು ಇನ್ನಿತರ ಕೆಲಸಗಳಿಗೆ ಹೋಗುತ್ತಿದ್ದರು. ಆದರೆ, ಮಳೆ ಸೃಷ್ಟಿಸಿರುವ ಅನಾಹುತಗಳಿಂದಾಗಿ ಈಗ ಹಲವು ದಿನಗಳಿಂದ ಅನೇಕರು ಅಲ್ಲಿ ಕೂಲಿಗಳು ಕೆಲಸ ಸಿಗದೆ ಪರದಾಡುತ್ತಿದ್ದಾರೆ.

ಕೇರಳದ ವಯನಾಡು ಜಿಲ್ಲೆಯು ತಾಲ್ಲೂಕಿಗೆ ಹತ್ತಿರದಲ್ಲಿರುವುದರಿಂದ ಮತ್ತು ಅಲ್ಲಿ ಹೆಚ್ಚಿನ ಕೂಲಿ ದೊರೆಯುವುದರಿಂದ ಈ ಗ್ರಾಮಗಳಿಂದ ಅನೇಕರು ಬೆಳಗ್ಗೆ ಆರು ಗಂಟೆಗೆ ಹೋಗಿ ರಾತ್ರಿ 9 ಹೊತ್ತಿಗೆ ಮರಳುತ್ತಿದ್ದರು. ಬತ್ತೇರಿ, ಮೀನಾಂಗಡಿ, ಮುಟ್ಟಿಲ್, ಕಲ್ಪೇಟ್ಟಾ, ಪಲಮರಮ್ ಮುಂತಾದ ಸ್ಥಳಗಳಿಗೆ ತಾಲ್ಲೂಕಿನಿಂದ ನೂರಾರು ಮಂದಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

‘ಮಳೆ ಆರಂಭವಾದಗಿನಿಂದ ಕೇರಳಕ್ಕೆ ಹೋಗುತ್ತಿಲ್ಲ. ಹೋದರೂ ಅಲ್ಲಿ ಕೆಲಸ ಸಿಗುತ್ತಿಲ್ಲ. ಇದರಿಂದ ನಮಗೆ ಸಂಪಾದನೆ ಇಲ್ಲವಾಗಿದೆ. ಇಲ್ಲಿ ಕೂಲಿ ಕಡಿಮೆ ಎಂಬ ಕಾರ‌ಣಕ್ಕೆ ಕಷ್ಟವಾದರೂ ಕೇರಳಕ್ಕೆ ಹೋಗಿ ದುಡಿದು ಹಣ ಸಂಪಾದನೆ ಮಾಡುತ್ತಿದ್ದೆವು. ಪ್ರವಾಹ ಕಡಿಮೆಯಾಗಿ ಅಲ್ಲಿ ಕೆಲಸ ಸಿಗುವರೆಗೆ ಕಡಿಮೆ ಸಂಬಳವಾದರೂ ಇಲ್ಲೇ ಕೆಲಸ ಮಾಡುತ್ತೇನೆ’ ಎಂದು ಬಸವಪುರದ ಮಹದೇವಶೆಟ್ಟಿ ಅವರು ತಿಳಿಸಿದರು.

‘ದಿನನಿತ್ಯ ಮತ್ತು ಕೆಲವರು ವಾರಾಂತ್ಯಗಳಲ್ಲಿ ತರಕಾರಿ, ಸೊಪ್ಪು ಮತ್ತು ಹೂಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿ, ಸಂಪಾದನೆ ಮಾಡುತ್ತಿದ್ದೆವು. ಈಗ ಅದಕ್ಕೂ ದಾರಿ ಇಲ್ಲವಾಗಿದೆ. ಹೋದರೆ ಎಲ್ಲಿ ಬರುವುದಕ್ಕೆ ಆಗುವುದಿಲ್ಲವೋ ಎಂಬ ಭಯ ಕಾಡುತ್ತದೆ. ಇದರಿಂದ ಜೀವನೋಪಾಯಕ್ಕೆ ತೊಂದರೆಯಾಗಿದೆ’ ಎಂದು ತಾಲ್ಲೂಕಿನಿಂದ ಬತ್ತೇರಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದ ಗೌರಮ್ಮ ಅವರು ಅವಲತ್ತುಕೊಂಡರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು