14ಕ್ಕೆ ಮೈಸೂರಿಗೆ ಕಿಸಾನ್‌ ಅಧಿಕಾರ ಯಾತ್ರೆ

7

14ಕ್ಕೆ ಮೈಸೂರಿಗೆ ಕಿಸಾನ್‌ ಅಧಿಕಾರ ಯಾತ್ರೆ

Published:
Updated:
Deccan Herald

ಚಾಮರಾಜನಗರ: ರೈತರ ಸಂಪೂರ್ಣ ಸಾಲ ಮನ್ನಾ, ಡಾ. ಎಂ.ಎಸ್‌. ಸ್ವಾಮಿನಾಥನ್‌ ವರದಿಯ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಯ ಕಿಸಾನ್‌ ಮಹಾಸಂಘವು ಜುಲೈ 26ರಂದು ಕಾಶ್ಮೀರದಲ್ಲಿ ಆರಂಭಿಸಿದ್ದ ಕಿಸಾನ್‌ ಅಧಿಕಾರ ಯಾತ್ರೆ ಇದೇ 14ಕ್ಕೆ ಮೈಸೂರು ತಲುಪಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ‘ದೇಶದ 122 ರೈತ ಸಂಘ‌ಗಳ ಒಕ್ಕೂಟವಾಗಿರುವ ರಾಷ್ಟ್ರೀಯ ಕಿಸಾನ್‌ ಮಹಾಸಂಘವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆಯೋಜಿಸಿರುವ ಈ ಯಾತ್ರೆ 13ರಂದು ಹುಬ್ಬಳ್ಳಿ ಪ್ರವೇಶಿಸಲಿದೆ. 14ರಂದು ಮೈಸೂರು ತಲುಪಲಿದೆ. ಊಟಿ ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು’ ಎಂದರು. 

‘ಐದು ಸಾವಿರಕ್ಕೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿಂದ ನಂತರ ಯಾತ್ರೆಯು ಕೇರಳ, ತಮಿಳುನಾಡಿನಲ್ಲಿ ಸಾಗಿ 20ರಂದು ಕನ್ಯಾಕುಮಾರಿ ತಲುಪಲಿದೆ’ ಎಂದು ಮಾಹಿತಿ ನೀಡಿದರು.

‘ಹಿಂದಿನ ಯುಪಿಎ ಸರ್ಕಾರ ಉದ್ಯಮಿಗಳ ₹36 ಲಕ್ಷ ಕೋಟಿ ವಸೂಲಾಗಾದ ಸಾಲ ಮನ್ನಾ ಮಾಡಿತ್ತು. ಈಗಿನ ಎನ್‌ಡಿಎ ಸರ್ಕಾರ ₹2.60 ಲಕ್ಷಕೋಟಿ ಮಾಡಿದೆ. ಆದರೆ ದೇಶದ ರೈತರ ₹ 6 ಲಕ್ಷ ಕೋಟಿ ಮನ್ನಾ ಮಾಡಬೇಕು ಎಂದರೆ ಕೃಷಿ ಸಚಿವರು ವ್ಯಂಗ್ಯವಾಗಿ ಮಾತನಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಲಮನ್ನಾಗೆ ಆಗ್ರಹ
ಸಾಲಮನ್ನಾ ಘೋಷಣೆ ಮಾಡಿಯೂ ಹಣ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಹರಿಯಾಯ್ದ ಅವರು, ‘ಇನ್ನೂ ಸಾಲಮನ್ನಾ ಆಗದಿರುವುದರಿಂದ ರೈತರು ಮತ್ತೆ ಖಾಸಗಿಯವರಿಂದ ಸಾಲ ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ’ ಶಾಂತಕುಮಾರ್‌ ಹೇಳಿದರು. ಸರ್ಕಾರ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

‘ಸರ್ಕಾರ ಘೋಷಿಸಿದ ನಂತರವೂ ಸಾಲ ಮರುಪಾವತಿಸುವಂತೆ ಬ್ಯಾಂಕುಗಳು ರೈತರ ಮೇಲೆ ಒತ್ತಡ ಹಾಕುತ್ತಿವೆ. ಬೆಳೆ ವಿಮೆ ಹಾಗೂ ಸರ್ಕಾರದ ಇತರೆ ಸೌಲಭ್ಯಗಳಲ್ಲಿ ಬಂದ ಹಣವನ್ನು ಸಾಲದ ಖಾತೆಗೆ ಜಮೆ ಮಾಡುತ್ತಿವೆ’ ಎಂದು ಅವರು ಆರೋಪಿಸಿದರು.

ಬ್ಯಾಂಕ್‌ ಅಧಿಕಾರಿಗಳು ಸಾಲ ವಸೂಲಾತಿಗಾಗಿ ರೈತರ ಮನೆಗೆ ಬಂದರೆ, ಅವರನ್ನು ಕೂಡಿ ಹಾಕುವ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !