ಕೊಳ್ಳೇಗಾಲ ನಗರಸಭೆ: ‘ಆನೆ’ ಮತ್ತಷ್ಟು ಸದೃಢ

7
3 ಸ್ಥಾನಗಳಿಂದ 9 ಸ್ಥಾನಕ್ಕೇರಿದ ಬಿಎಸ್‌ಪಿ ಬಲ

ಕೊಳ್ಳೇಗಾಲ ನಗರಸಭೆ: ‘ಆನೆ’ ಮತ್ತಷ್ಟು ಸದೃಢ

Published:
Updated:

ಕೊಳ್ಳೇಗಾಲ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಬಿಎಸ್‌ಪಿ, ನಗರಸಭೆ ಚುನಾವಣೆಯಲ್ಲಿ ತನ್ನ ಸಂಖ್ಯಾ ಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವುದರ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಸದೃಢಗೊಂಡಿದೆ.

31 ಸದಸ್ಯ ಬಲದ ಕೊಳ್ಳೇಗಾಲ ನಗರಸಭೆಯಲ್ಲಿ ಬಿಎಸ್‌ಪಿಯು ಕಳೆದ ಬಾರಿ ಮೂರು ಸ್ಥಾನಗಳನ್ನಷ್ಟೇ ಗೆದ್ದಿತ್ತು. ಈ ಬಾರಿ ಈ ಸಂಖ್ಯೆ 9ಕ್ಕೆ ಏರಿದೆ. ಇನ್ನೂ ಒಂದು ವಾರ್ಡ್‌ನಲ್ಲಿ ಚುನಾವಣೆ ನಡೆಯುವುದು ಬಾಕಿ ಇದೆ. 

ಬಿಎಸ್‌ಪಿಯ ರಾಜ್ಯ ಮಟ್ಟದ ಉನ್ನತ ನಾಯಕ ಮತ್ತು ಮೈತ್ರಿ ಸರ್ಕಾರದಲ್ಲಿ ‍ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಎನ್‌.ಮಹೇಶ್‌ ಅವರಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು. ನಗರಸಭೆಯಲ್ಲಿ ಕಾಂಗ್ರೆಸ್‌ ಆಡಳಿತವನ್ನು ಕೊನೆಗೊಳಿಸಿ, ಬಿಎಸ್‌ಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಲು ಅವರು ಶತಾಯ ಗತಾಯ ಪ್ರಯತ್ನಿಸಿದ್ದರು. ಅದಕ್ಕಾಗಿ ಕಾರ್ಯತಂತ್ರಗಳನ್ನೂ ಹೆಣೆದಿದ್ದರು. ಅದರಲ್ಲಿ ಅವರು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಆದರೆ, ಒಂದಷ್ಟು ಯಶಸ್ಸು ಅವರಿಗೆ ಸಿಕ್ಕಿರುವುದಂತೂ ನಿಜ.

ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗಳಿಸಿದರೂ, ಅದು ಅಧಿಕಾರಕ್ಕಾಗಿ ಬಿಎಸ್‌ಪಿಯನ್ನು ಅವಲಂಬಿಸಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಆಡಳಿತ ನಡೆಸುವಲ್ಲಿ ‘ಆನೆ’ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ. 

ಅಧಿಕಾರ ಗಳಿಸುವುದಕ್ಕಿಂತಲೂ ಹೆಚ್ಚಾಗಿ, ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ತನ್ನ ಬಲವನ್ನು ವಿಸ್ತರಿಸಲು ಬಿಎಸ್‌ಪಿಗೆ ಈ ಚುನಾವಣೆ ಭಾರಿ ಅನುಕೂಲ ಮಾಡಿಕೊಟ್ಟಿದೆ. ಅದರಲ್ಲಿ ಎನ್‌.ಮಹೇಶ್‌ ಅವರ ಪ್ರಭಾವ ಎದ್ದು ಕಾಣುತ್ತಿದೆ. ಕಾಂಗ್ರೆಸ್‌ ಮುಖಂಡರು ಕೂಡ ಇದನ್ನೇ ಹೇಳುತ್ತಿದ್ದಾರೆ.

ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಮಹೇಶ್‌ ಅವರ ಸಚಿವ ಸ್ಥಾನ ಮುಂದುವರಿದಿದ್ದೇ ಆದರೆ, ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಬಿಎಸ್‌ಪಿ ಇನ್ನಷ್ಟು ಬಲಗೊಳ್ಳುವುದರಲ್ಲಿ  ಅನುಮಾನವಿಲ್ಲ.

ಬಿಜೆಪಿ ಯಥಾಸ್ಥಿತಿ: ಕಳೆದ ಬಾರಿ ವಿಭಜನೆಯ ಗೊಂದಲದಲ್ಲಿದ್ದ ಬಿಜೆಪಿ 3 ಸ್ಥಾನ ಹಾಗೂ ಅದರಿಂದ ಹೋಳಾಗಿದ್ದ ಕೆಜೆಪಿ ಮೂರು ಸ್ಥಾನ ಗಳಿಸಿದ್ದವು. ಈ ಬಾರಿ ಇವೆರಡೂ ಸೇರಿ ಕಮಲ ಪಾಳಯಕ್ಕೆ ಆರು ಸ್ಥಾನಗಳು ಸಿಕ್ಕಿವೆ.

ಜೆಡಿಎಸ್‌ ಕೇವಲ ಒಂದು ವಾರ್ಡ್‌ನಲ್ಲಿ (12ನೇ ವಾರ್ಡ್‌) ಸ್ಪರ್ಧಿಸಿತ್ತು. ಆದರೆ, ಗೆಲುವಿಗೆ ಕೊರಳೊಡ್ಡಲು ಅದಕ್ಕೆ ಸಾಧ್ಯವಾಗಿಲ್ಲ.

7 ಹಾಲಿ ಸದಸ್ಯರಿಗೆ ಜಯ: ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ 13 ಹಾಲಿ ಸದಸ್ಯರ ಪೈಕಿ ಏಳು ಮಂದಿ ಗೆಲುವಿನ ದಡ ಸೇರಿದ್ದಾರೆ. ಹಾಲಿ ಉಪಾಧ್ಯಕ್ಷ ಎ.ಪಿ. ಶಂಕರ್ (14ನೇ ವಾರ್ಡ್‌) ಪಕ್ಷೇತರ ಅಭ್ಯರ್ಥಿಯಾಗಿ, 15ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ,  17ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಶಾಂತರಾಜು, 22ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಪ್ರಶಾಂತ್‌, 23ನೇ ವಾರ್ಡ್‌ನ ಬಿಎಸ್‌ಪಿ ಅಭ್ಯರ್ಥಿ  ನಾಗಸುಂದ್ರಮ್ಮ, 28ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಚಿಕ್ಕತಾಯಮ್ಮ ಮತ್ತು 30ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಸುರೇಶ್ ಅವರು ಗೆಲುವಿನ ನಗೆ ಬೀರಿದ್ದಾರೆ.

ಇಬ್ಬರು ಬಂಡಾಯಗಾರಿಗೆ ಗೆಲುವು: ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದು 11ನೇ ವಾರ್ಡ್‌ನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮನೋಹರ್‌ ಮತ್ತು 14ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಎ.ಪಿ. ಶಂಕರ್‌ ಅವರಿಗೆ ಜಯ ಸಿಕ್ಕಿದೆ.  

ಲೋಕೇಶ್‌ಗೆ ಸೋಲು

ಬಿಜೆಪಿಯ ಮುಖಂಡ ಹಾಗೂ ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಜಿ.ಎನ್. ನಂಜುಂಡಸ್ವಾಮಿ ಪುತ್ರ ಜಿ.ಎನ್‌. ಲೋಕೇಶ್‌ ಅವರು ಕೇವಲ 18 ಮತಗಳಿಂದ ಸೋತಿದ್ದಾರೆ.

ಲೋಕೇಶ್ ಅವರು ಮೊದಲನೆ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದರು. 25 ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು ಬಿಎಸ್‌ಪಿ ಅಭ್ಯರ್ಥಿ ರಾಮಕೃಷ್ಣ ಅವರ ವಿರುದ್ಧ ಸೋಲು ಕಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !