ಆಡಿನ ಕಣಿವೆ ಬುಡಕಟ್ಟು ಕಾಲೋನಿ: ಸಮಸ್ಯೆಗಳ ನಡುವೆ ಬಡವಾದ ಬದುಕು

7
ಇಲ್ಲದ ಮೂಲಸೌಕರ್ಯ

ಆಡಿನ ಕಣಿವೆ ಬುಡಕಟ್ಟು ಕಾಲೋನಿ: ಸಮಸ್ಯೆಗಳ ನಡುವೆ ಬಡವಾದ ಬದುಕು

Published:
Updated:
Deccan Herald

ಗುಂಡ್ಲುಪೇಟೆ: ಬುಡಕಟ್ಟು ಜನರ ಉದ್ಧಾರಕ್ಕಾಗಿ ಸರ್ಕಾರ ಹಲವು ಯೋಜನೆಗಳು, ಸವಲತ್ತುಗಳನ್ನು ಕಲ್ಪಿಸಿದರೂ ತಾಲ್ಲೂಕಿನ ಆಡಿನ ಕಣಿವೆ ಗ್ರಾಮದ ಬುಡಕಟ್ಟು ಜನರ ಬವಣೆ ನೀಗಿಲ್ಲ. ಸಮಸ್ಯೆಗಳ ಸರಮಾಲೆಯ ನಡುವೆ ಇಲ್ಲಿನ ಜನರ ಬದುಕೇ ಬಡವಾಗಿದೆ. 

ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ಅಂಚಿನಲ್ಲಿರುವ ಆಡಿನ ಕಣಿವೆ ಗ್ರಾಮವು ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿರುವ ಬುಡಕಟ್ಟು ಜನರ ಕಾಲೋನಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಇವೆ. ಮೂಲ ಸೌಕರ್ಯಗಳ ಕೊರತೆ ಇಲ್ಲಿನ ಜನರ ಬದುಕನ್ನು ದುಸ್ತರಗೊಳಿಸಿದೆ.

ಇಲ್ಲಿ ಶಾಲೆಯ ಕಟ್ಟಡವಿದ್ದರೂ ಶಾಲೆ ನಡೆಯುತ್ತಿಲ್ಲ. ಇಲ್ಲಿನ ಮಕ್ಕಳು ಅಂಗನವಾಡಿ, ಶಾಲೆಗೆ, ಜನರು ಕಿರಾಣಿ ಅಂಗಡಿಗೆ, ಆಸ್ಪತ್ರೆಗೆ... ಹೀಗೆ ಎಲ್ಲದಕ್ಕೂ 3 ಕಿ.ಮೀ ದೂರದಲ್ಲಿರುವ ಮಂಗಲ ಗ್ರಾಮವನ್ನು ಆಶ್ರಯಿಸಬೇಕಿದೆ. ಸಾರಿಗೆ ಸೌಲಭ್ಯವೂ ಇಲ್ಲ. ತುರ್ತು ಸಂದರ್ಭದಲ್ಲೂ ಕಾಲ್ನಡಿಗೆಯನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ದಶಕಗಳು ಕಳೆದರೂ ಈ ಗ್ರಾಮಕ್ಕೆ ರಸ್ತೆ ಭಾಗ್ಯ ಸಿಕ್ಕಿಲ್ಲ. 

ಕಳಪೆ ಮನೆ: ಇಲ್ಲಿನ ಜನರು ಸೊಪ್ಪಿನ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಸರ್ಕಾರದ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು.

ಆದರೆ, ಗುತ್ತಿಗೆದಾರ ಹಣದ ಆಸೆಗೆ ‌ಕಳಪೆ ಗುಣಮಟ್ಟದ ಮನೆಗಳನ್ನು ಕಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. 

‘ಮನೆಗಳನ್ನು ನಿರ್ಮಿಸಿ ಇನ್ನೂ ವರ್ಷ ಆಗಿಲ್ಲ. ಆಗಲೇ ಕಿಟಕಿ ಬಾಗಿಲುಗಳ ಬಳಿ ಗಾರೆ ಕಿತ್ತು ಬರುತ್ತಿದೆ. ಮನೆಯ ಮಧ್ಯೆ ಗೋಡೆಯನ್ನು ನಿರ್ಮಿಸಿ ಕೊಟ್ಟಿಲ್ಲ. ಈ ಮನೆಯಲ್ಲಿ ಹೇಗೆ ಮಕ್ಕಳು –ಮರಿಯೊಂದಿಗೆ ವಾಸ ಮಾಡುವುದು? ಕಾಡಿನಲ್ಲಿ ನಾವು ನಿರ್ಮಿಸಿಕೊಳ್ಳುತ್ತಿದ್ದ ಸೊಪ್ಪಿನ ಗುಡಿಸಲೇ ಉತ್ತಮವಾಗಿತ್ತು. ಈ ಅನ್ಯಾಯವನ್ನು ಯಾರು ಕೇಳುವುದಿಲ್ಲ. ನಮ್ಮ ನೋವು ಯಾರಿಗೂ ಅರ್ಥವಾಗುವುದಿಲ್ಲ’ ಎಂದು ಬುಡಕಟ್ಟು ಮಹಿಳೆ ಮಾರಮ್ಮ ದುಃಖ ತೋಡಿಕೊಂಡರು.

ಪೂರ್ಣಗೊಳ್ಳದ ಶೌಚಾಲಯ: ಮನೆಗಳನ್ನು ನಿರ್ಮಿಸಿಕೊಡುವಾಗ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಕೆಲ ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ. ಕೆಲವುಗಳಿಗೆ ಟಬ್ ಅಳವಡಿಸಿಲ್ಲ, ಇನ್ನೂ ಕೆಲವು ಶೌಚಾಲಯಗಳ ಗುಂಡಿ ಮುಚ್ಚಿಲ್ಲ. ಆದ್ದರಿಂದ ಇಲ್ಲಿ ಯಾರು ಶೌಚಾಲಯವನ್ನು ಬಳಕೆ ಮಾಡುತ್ತಿಲ್ಲ. ಬದಲಾಗಿ ಕಾಡನ್ನೇ ಅವಲಂಬಿಸಿದ್ದಾರೆ.

‘ಈ ಕಾಲೋನಿ ಹಾಗೂ ಕಾಡಿನ ನಡುವಿನ ಅಂತರ ಕೇವಲ 100 ಮೀಟರ್. ಹಾಗಾಗಿ, ಕಾಡು ಪ್ರಾಣಿಗಳ ಹಾವಳಿ ಹೆಚ್ಚು. ಶೀಘ್ರವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಡುವಂತೆ ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೂ (ಪಿಡಿಒ) ಮನವಿ ಮಾಡಿದ್ದೆವು. ಆದರೆ ಯಾವುದೇ ಉಪಯೋಗವಾಗಲಿಲ್ಲ. ಸಮಸ್ಯೆಗಳನ್ನು ತೆಗೆದುಕೊಂಡು ಹೋದರೆ ಪಿಡಿಒ ಸರಿಯಾಗಿ ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಬರುವುದಾಗಿ ಹೇಳುತ್ತಾರೆ. ವರ್ಷ ಕಳೆದರೂ ಅವರು ಇನ್ನೂ ಗ್ರಾಮದ ಮುಖ ನೋಡಿಲ್ಲ’ ಎಂದು ಮುಖಂಡ ಬೊಮ್ಮ ದೂರಿದರು.

‘ಹಿಂದಿನ ಸಚಿವರು ಈ ಗ್ರಾಮಕ್ಕೆ ರಸ್ತೆ ಮಂಜೂರು ಮಾಡಿದ್ದರು. ಅದರಲ್ಲಿ ಉಳಿದ ಹಣವನ್ನು ಸಮುದಾಯ ಭವನಕ್ಕೆ ಉಪಯೋಗಿಸಿಕೊಳ್ಳುವಂತೆ ತಿಳಿಸಿದ್ದರು. ಯಾವ ಕೆಲಸಗಳೂ ಆಗಿಲ್ಲ. ರಸ್ತೆ ಮಾಡುತ್ತೇವೆ ಎಂದು ಹೇಳಿ ಅಗೆದರು. ಆದರೆ ಗುಂಡಿಗಳನ್ನು ಮುಚ್ಚಲಿಲ್ಲ. ಇದರಿಂದ ಗುಂಡಿಗಳಿಗೆ ಹಸುಗಳು ಬಿದ್ದು ಗಾಯವಾಗಿ ಅವುಗಳ ಆರೈಕೆ ಮಾಡುವುದೇ ಆಗಿದೆ. ರಸ್ತೆಯಿಂದ ಎರಡು ಮೂರು ಅಡಿ ಮೇಲೆ ಮನೆಯನ್ನು ಕಟ್ಟಿದ್ದಾರೆ. ಮನೆಗಳಿಗೆ ಹೋಗಲು ಮೆಟ್ಟಿಲುಗಳಿಲ್ಲ. ಮಣ್ಣು ಜಾರುತ್ತದೆ. ಮಳೆಯಾದರೆ ನಡೆದಾಡುವುದೇ ಅಸಾಧ್ಯ. ಹೇಗೆ ಬದುಕುವುದು ಎಂದೇ ಗೊತ್ತಾಗುತ್ತಿಲ್ಲ. ಮೇಲಾಧಿಕಾರಿಗಳೇ ಬಂದು ನಮ್ಮ ಕಷ್ಟ ನೋಡಲಿ. ಆವಾಗಲಾದರೂ ಸಮಸ್ಯೆ ಬಗೆಹರಿಯುತ್ತದೆಯೇ ಎಂಬುದನ್ನು ನೋಡಬೇಕು’ ಎಂದು ಕ್ಯಾತಮ್ಮ ಅವರು ತಿಳಿಸಿದರು.

ಭೇಟಿ ನೀಡುತ್ತಿಲ್ಲ: ‘ಅನೇಕ ಸಮಸ್ಯೆಗಳ ನಡುವೆ ಇಲ್ಲಿನ ಜನ ವಾಸ ಮಾಡುತ್ತಿದ್ದರೂ ಜಿಲ್ಲಾ ಪಂಚಾಯಿತಿ ಸದಸ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ, ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡುತ್ತಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ಎಲ್ಲರೂ ಬರುತ್ತಾರೆ’ ಎಂದು ಗ್ರಾಮದ ಮುಖಂಡರೊಬ್ಬರೊಬ್ಬರು ಆರೋಪಿಸಿದರು. 

‘ಎಲ್ಲ ಹಾಡಿಗಳಲ್ಲೂ ಇದೇ ಸಮಸ್ಯೆ’
ತಾಲ್ಲೂಕಿನಲ್ಲಿರುವ ಎಲ್ಲ ಹಾಡಿಗಳಲ್ಲೂ ಇದೇ ರೀತಿಯ ಸಮಸ್ಯೆಗಳಿವೆ. ಹಿರಿಯ ಅಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಹಿಂದೆ ಆಡಿನ ಕಣಿವೆ ಕಾಲೋನಿಯಲ್ಲಿ ಶಾಲೆ ನಡೆಯುತ್ತಿತ್ತು. ವಿವಿಧ ಕಾರಣಗಳನ್ನು ಹೇಳಿ ಶಾಲೆಯನ್ನು ಬಂದ್ ಮಾಡಿಸಲಾಯಿತು. ಶಾಲೆ ಮತ್ತೆ ತೆರೆಯಬೇಕು ಹಾಗೂ ಈ ಕಾಲೋನಿಗೆ ದಿನಕ್ಕೆ ಎರಡು ಬಾರಿಯಾದರೂ ಬಸ್ ಬರುವ ವ್ಯವಸ್ಥೆ ಮಾಡಬೇಕು ಎಂದು ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಪುಟ್ಟಮ್ಮ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !