ಬುಧವಾರ, ಏಪ್ರಿಲ್ 8, 2020
19 °C
4 ತಿಂಗಳಿಂದ ನಿರ್ವಹಣೆಗೆ ನಿರ್ಲಕ್ಷ್ಯ: ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್‌ ಬೋರ್ಡ್‌

ಚಾಮರಾಜನಗರ: ಪುಟ್ಟಮ್ಮಣ್ಣಿ ಉದ್ಯಾನಕ್ಕೆ ಬೇಕಿದೆ ಕಾಯಕಲ್ಪ

ರವಿ ಎನ್‌. Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಉದ್ಯಾನ ಎಂದರೆ, ಅದು ನೋಡುಗರ ಮನ ತಣಿಸಬೇಕು. ಜೊತೆಗೆ ಆಹ್ಲಾದಕರ ವಾತಾವರಣ ಹೊಂದಿರಬೇಕು. ಆದರೆ, ಪಟ್ಟಣದ ಸಂತೇಮರಹಳ್ಳಿ ವೃತ್ತದ ಬಳಿ ಇರುವ ಪುಟ್ಟಮ್ಮಣ್ಣಿ ಉದ್ಯಾನದ ಸ್ಥಿತಿ ನೋಡುಗರಲ್ಲಿ ಮರುಕ ಹುಟ್ಟಿಸುತ್ತದೆ.

ನಿರ್ವಹಣೆಯ ಕೊರತೆಯಿಂದ ಬಳಲುತ್ತಿರುವ ಉದ್ಯಾನ, ವಾಯುವಿಹಾರಿಗಳ ಪಾಲಿಗೆ ಇದ್ದರೂ ಇಲ್ಲದಂತೆ ಆಗಿದೆ. 

ನಗರಸಭೆಯ 17ನೇ ವಾರ್ಡ್‌ ವ್ಯಾಪ್ತಿಗೆ ಬರುವ ಈ ಉದ್ಯಾನ, ಹೊರಗಿನಿಂದ ಹಸಿರಿನಿಂದ ಕಂಗೊಳಿಸುತ್ತದೆ. ಒಳ ಹೊಕ್ಕರೆ ಸಮರ್ಪಕವಾಗಿ ನಿರ್ವಹಣೆ ಮಾಡದೆ ಹುಲ್ಲು ಕಾಲಿಗೆ ಸಿಕ್ಕಿಹಾಕಿಕೊಳ್ಳುತ್ತವೆ. ಕಲ್ಲು– ಮುಳ್ಳುಗಳಿವೆಯೋ ಎಂಬ ಭಯದಲ್ಲೇ ಹೆಜ್ಜೆ ಹಾಕುವ ಪರಿಸ್ಥಿತಿ ಇದೆ. 

ಉದ್ಯಾನದ ಕಾಂಪೌಂಡ್‌ ಸುತ್ತ ಅಂಬಿನ ಗಿಡಗಳು ಬೆಳೆದುಕೊಂಡಿದೆ. ಎರಡೂವರೆ ಎಕರೆ ಪ್ರದೇಶದಲ್ಲಿ ಹರಡಿರುವ ಉದ್ಯಾನದ ಒಳಗೆ ಒಂದು ಪುರಾತನ ಗುಡಿ ಇದೆ. ಆ ಗುಡಿಯಲ್ಲಿದ್ದ ದೇವತೆ ಹೆಸರನ್ನೇ ಉದ್ಯಾನಕ್ಕೆ ಇಡಲಾಗಿದೆ. ಆದರೆ, ಅಲ್ಲಿ ಈಗ ದೇವರ ಮೂರ್ತಿ ಇಲ್ಲ. ಮಂಟಪ ಮಾತ್ರ ಇದೆ.

‘ವಾಯು ವಿಹಾರಕ್ಕೆಂದು ನಾವು ಬಂದರೆ ಈ ಮಂಟಪದಲ್ಲಿ ಕುಳಿತು ವಿಶ್ರಮಿಸುತ್ತಿದ್ದೆವು. ಈಗ ಒಳಗಡೆ ಪ್ರವೇಶಿಸಲು ಭಯವಾಗುತ್ತದೆ. ಉದ್ಯಾನವು ಈಗ ಹಾವು ಹಾಗೂ ಇನ್ನಿತರ ವಿಷ ಜಂತುಗಳ ಆವಾಸ ಸ್ಥಾನವಾಗಿ ಬದಲಾಗಿದೆ’ ಎಂದು ಹೇಳುತ್ತಾರೆ ವಾಯುವಿಹಾರಿಗಳು.

ಉದ್ಯಾನದಲ್ಲಿನ ಅಲಂಕಾರಿಕ ಗಿಡಗಳು, ಒಳಗಿರುವ ನೀರಿನ ಕೊಳ, ಹುಲ್ಲಿನ ನೆಲಹಾಸುಗಳು ನಿರ್ವಹಣೆ ಇಲ್ಲದೆ ಸೊರಗಿದೆ. ಪಕ್ಕದಲ್ಲೇ ಇರುವ ಚರಂಡಿಯಲ್ಲಿ ಹುಲ್ಲುಗಳು, ಕಳೆ ಬೆಳೆದು ಕಸ, ಪ್ಲಾಸ್ಟಿಕ್‌ ವಸ್ತುಗಳು ಸಂಗ್ರಹಗೊಂಡಿದೆ.

ಚರಂಡಿಗೆ ಹೊಂದಿಕೊಂಡಂತೆ ಇರುವ ವಿದ್ಯುತ್‌ ಕಂಬದ ಕೆಳಗೆ ವಿದ್ಯುತ್‌ ಬೋರ್ಡ್‌ ಇದೆ. ಉದ್ಯಾನದಲ್ಲಿ ಅಳವಡಿಸಿರುವ ವಿದ್ಯುತ್‌ ದೀಪಗಳನ್ನು ಉರಿಸಲು ಭಯಪಡಬೇಕಾದ ಸ್ಥಿತಿ ಇದೆ. 

ಉದ್ಯಾನದಲ್ಲಿ ಎಂಟು ಫೋಕಸ್‌ ಲೈಟ್‌ಗಳಿವೆ. ಆದರೆ, ಕೆಲವು ಸಮರ್ಪಕವಾಗಿ ಉರಿಯುವುದಿಲ್ಲ ಎಂದು ದೂರುತ್ತಾರೆ ಸ್ಥಳೀಯ ನಿವಾಸಿಗಳು.

ನಿರ್ವಹಣೆ ಇಲ್ಲ: ಸದ್ಯ, ಉದ್ಯಾನಕ್ಕೆ ಒಬ್ಬ ಕಾವಲುಗಾರ ಮಾತ್ರ ಇದ್ದಾರೆ. 

‘ನಾಲ್ಕು ತಿಂಗಳುಗಳಿಂದ ಉದ್ಯಾನದ ನಿರ್ವಹಣೆ ಸ್ಥಗಿತಗೊಂಡಿದೆ. ನಗರಸಭೆ ತಕ್ಷಣವೇ ಈ ಉದ್ಯಾನವನ್ನು ಜನರ ಬಳಕೆಗೆ ಯೋಗ್ಯವಾಗುವಂತೆ ಮಾಡಬೇಕು’ ಎಂದು ಹಿರಿಯರೊಬ್ಬರು ತಿಳಿಸಿದರು.

‘ಗಿಡ ಮರಗಳ ನಿರ್ವಹಣೆಗೆ ಮಾತ್ರವೇ ಟೆಂಡರ್‌ ಕಾರ್ಯ ಪೂರ್ಣಗೊಂಡಿದೆ. ಸಿವಿಲ್ ಎಂಜಿನಿಯರಿಂಗ್‌ ಕೆಲಸಗಳು ಇನ್ನೂ ಬಾಕಿ ಇವೆ. ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸಬೇಕು’ ಎಂಬುದು ಜನರ ಆಗ್ರಹ.

ಇನ್ನೂ ಅನುಮತಿ ಸಿಕ್ಕಿಲ್ಲ: ‘ನೀರು, ಗಿಡಮರಗಳ ನಿರ್ವಹಣೆಗೆ ಐವರು ಬೇಕು. ಈಗ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದವರನ್ನು ನೇಮಕ ಮಾಡಿಕೊಳ್ಳಲು ಇನ್ನಷ್ಟೇ ಅನುಮತಿ ಸಿಗಬೇಕಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಉದ್ಯಾನ ನಿರ್ವಹಣೆಯ ಟೆಂಡರ್‌ ಪಡೆದಿರುವ ಗುತ್ತಿಗೆದಾರ ಹೇಳಿದರು. 

ಹೊರಗಡೆಯೂ ಅನೈರ್ಮಲ್ಯ

ಉದ್ಯಾನದ ಹೊರಗಡೆಯೂ ಅನೈರ್ಮಲ್ಯ ತಾಂಡವಾಡುತ್ತಿವೆ. ಉದ್ಯಾನದ ಬೇಲಿಯ ಮೇಲೆ ಕಳೆ ಬಳ್ಳಿಗಳು ಹಬ್ಬಿವೆ. ಚರಂಡಿಯೂ ಕಳೆಯಿಂದ ತುಂಬಿದೆ. ಚರಂಡಿ ಬಳಿಯಲ್ಲಿನ ಕಸದ ರಾಶಿಯೂ ಪರಿಸರದ ಅನೈರ್ಮಲ್ಯಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದೆ. ಚರಂಡಿಗೆ ಹಾಸಲಾದ ಕಾಂಕ್ರೀಟ್‌ ಸ್ಲ್ಯಾಬ್‌ಗಳಲ್ಲಿ ಮಲ ವಿಸರ್ಜನೆ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು