‘ಉಚಿತ ಕಾನೂನು ಸೇವೆ ಬಳಸಿಕೊಳ್ಳಿ’

7
ಕಾನೂನು ಜಾಗೃತಿ: ಸಾಕ್ಷರತಾ ರಥಕ್ಕೆ ಚಾಲನೆ

‘ಉಚಿತ ಕಾನೂನು ಸೇವೆ ಬಳಸಿಕೊಳ್ಳಿ’

Published:
Updated:
Deccan Herald

ಚಾಮರಾಜನಗರ: ಕಾನೂನಿನ ಬಗ್ಗೆ ಅನೇಕರಿಗೆ ತಿಳಿವಳಿಕೆ ಇಲ್ಲ. ಹೀಗಾಗಿ, ಅವರು ತಮ್ಮ ಹಕ್ಕುಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಬಸವರಾಜ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ ಮತ್ತು ಸಾಧನ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಬೇಕು ಎಂದು ಸಂವಿಧಾನದ ವಿಧಿ 39 (ಎ) ಹೇಳುತ್ತದೆ. ಕಾನೂನು ಸಾಕ್ಷರತಾ ರಥವು ತಾಲ್ಲೂಕು ಮತ್ತು ಹೋಬಳಿಗಳಲ್ಲಿ ಸಂಚರಿಸಿ, ಜನರಿಗೆ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಲಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಸಮುದಾಯದವರು, ಅಂಗವಿಕಲರು, ದೌರ್ಜನ್ಯಕ್ಕೆ ಒಳಗಾದವರು ಹಾಗೂ ಪ್ರವಾಹಪೀಡಿತರಿಗೆ ಉಚಿತವಾಗಿ ಕಾನೂನು ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಇದೆ. ₹1 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗೆ ಮತ್ತು ಎಲ್ಲ ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತದೆ. ಇವುಗಳ ಬಗ್ಗೆ ಎಲ್ಲರೂ ತಿಳಿದಿರಬೇಕು ಎಂದರು.

ಕಾನೂನು ಸೇವಾ ಪ್ರಾಧಿಕಾರಗಳು ನೀಡುವ ಸೇವೆಯನ್ನು ಜನರಿಗೆ ತಲುಪಿಸಲು ಅರೆಕಾಲಿಕ ಕಾನೂನು ಸ್ವಯಂ ಸೇವಕರು ಮತ್ತು ಇದಕ್ಕೆ ಸಂಬಂಧಿಸಿದ ವಕೀಲರು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಮುಖ್ಯನ್ಯಾಯಿಕ ದಂಡಾಧಿಕಾರಿ ಎಂ.ರಮೇಶ್‌ ಮಾತನಾಡಿ, ‘ದೇಶದಲ್ಲಿ ಶೇ 30ರಷ್ಟು ಜನರು ಅನಕ್ಷರಸ್ಥರು ಇದ್ದಾರೆ. ಅವರಿಗೆ ಕಾನೂನಿನ ಬಗ್ಗೆ ಅರಿವಿಲ್ಲ’ ಎಂದರು.

‘ಕಾಯ್ದೆ, ನಿಯಮಗಳ ಬಗ್ಗೆ ಗೊತ್ತಿಲ್ಲದೇ ಯಾರೂ ಅಪರಾಧ ಮಾಡುವಂತಾಗಬಾರದು, ಹಕ್ಕುಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನ್ಯಾಯಾಧೀಶರು, ಕಾನೂನು ತಜ್ಞರು, ವಕೀಲರು ಜನರ ಮನೆ ಬಾಗಿಲಿಗೇ ಹೋಗಿ ಕಾನೂನು ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಮಾತನಾಡಿ, ‘ಕಾನೂನುಗಳು ಬಲಿಷ್ಠವಾದರೂ ಅಪರಾಧ ಪ್ರಕರಣಗಳು, ವ್ಯಾಜ್ಯಗಳು ಹೆಚ್ಚುತ್ತಿವೆ. ಬಹುತೇಕರಿಗೆ ಕಾನೂನಿನ ಬಗ್ಗೆ ಅರಿವಿಲ್ಲ. ಕನಿಷ್ಠ ಮಟ್ಟದ ಅರಿವು ಇದ್ದರೂ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದು ಹೇಳಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶೆ ವಿ.ದೀಪಾ, ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌.ರಮೇಶ್‌ ಮಾತನಾಡಿದರು.

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲೋಲಾಕ್ಷಿ, ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಯೋಗೇಶ್‌, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಬಾಲ ನ್ಯಾಯ ಮಂಡಳಿಯ ಸದಸ್ಯ ಟಿ.ಜೆ. ಸುರೇಶ್‌ ಇದ್ದರು.

ವಕೀಲರ ಗೈರು: ಅಸ‌ಮಾಧಾನ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಕ್ಕೆ ಜಿ. ಬಸವರಾಜ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಭಿಕರನ್ನು ಗಮನಿಸಿದ ಅವರು ಸ್ವಯಂ ಸೇವಕರು ಮತ್ತು ವಕೀಲರು ಬಂದಿಲ್ಲವೇ ಎಂದು ಕೇಳಿದರು. ಬಂದಿದ್ದ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಎದ್ದು ನಿಂತರು. ಆದರೆ, ವಕೀಲರು ಇರಲಿಲ್ಲ. 

‘ಪ್ರತಿ ಕಾರ್ಯಕ್ರಮಕ್ಕೂ ವಕೀಲರು ಇರುವುದಿಲ್ಲ. ಹೀಗಾದರೆ ಹೇಗೆ? ಅವರು ಕಡ್ಡಾಯವಾಗಿ ಹಾಜರಿರಬೇಕು’ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಅವರಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !