ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಪ‍್ರವಾಸ: ಮಹದಾಯಿ ವಿಷಯ ‍‍ಪ್ರಸ್ತಾಪ ಸಾಧ್ಯತೆ

ನಾಳೆಯಿಂದ 26ರವರೆಗೆ ಜನಾಶೀರ್ವಾದ ಯಾತ್ರೆ: ಡಾ. ಜಿ. ಪರಮೇಶ್ವರ
Last Updated 22 ಫೆಬ್ರುವರಿ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇದೇ 24ರಿಂದ 26ರವರೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಎರಡನೇ ಹಂತದ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಿರುವ ಸಂದರ್ಭದಲ್ಲಿ, ಮಹದಾಯಿ ವಿವಾದ ಸೇರಿದಂತೆ ನೀರಾವರಿಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಸ್ತಾಪಿಸುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ತಿಳಿಸಿದರು.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಹಿಳಾ ಸಮಾವೇಶ, ರೋಡ್ ಶೋ, ಪಕ್ಷದ ಸ್ಥಳೀಯ ನಾಯಕರ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್‌ ಭಾಗವಹಿಸಲಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಅವರು ತಿಳಿಸಿದರು.

ಎರಡನೇ ಹಂತದ ಪ್ರವಾಸ ಸಂದರ್ಭದಲ್ಲಿ ದೇವಸ್ಥಾನ, ದರ್ಗಾಗಳಿಗೆ ರಾಹುಲ್‌ ಭೇಟಿ ನೀಡುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ‘ಪ್ರವಾಸ ಪಟ್ಟಿಯಲ್ಲಿ ಇಲ್ಲದೇ ಇದ್ದರೂ ದಾರಿ ಮಧ್ಯೆ ಪುರಾತನ ದೇವಾಲಯಗಳಿದ್ದರೆ ಭೇಟಿ ನೀಡುತ್ತಾರೆ. ದೇವಾಲಯಕ್ಕೆ ಭೇಟಿ ನೀಡುವುದರಲ್ಲಿ ತಪ್ಪೇನಿದೆ?’ ಎಂದರು.

‘ರಾಹುಲ್ ಗಾಂಧಿ ಬಚ್ಚಾ’ ಎಂದು ಬಿ.ಎಸ್. ಯಡಿಯೂರಪ್ಪ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಾಹುಲ್ ಗಾಂಧಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷ. ಬಚ್ಚಾ ಎಂದು ಹೇಳುವುದು ಎಷ್ಟು ಸರಿ? ರಾಜ್ಯದ ಜನ ಇದನ್ನೆಲ್ಲ ಗಮನಿಸುತ್ತಾರೆ’ ಎಂದರು.

‘ಚುನಾವಣೆ ಕಾರಣಕ್ಕೆ ಕಾಂಗ್ರೆಸ್ ಮೃದು ಹಿಂದುತ್ವ ನೀತಿ ಅನುಸರಿಸುತ್ತಿದೆಯೇ’ ಎಂಬ ಪ್ರಶ್ನೆಗೆ, ‘ಮೃದು ಮತ್ತು ಪ್ರಖರ ಹಿಂದುತ್ವ ಎನ್ನುವುದು ಇದೆಯೇ’ ಎಂದು ಪ್ರಶ್ನಿಸಿದರು. ‘ಬಿಜೆಪಿಯ ಪ್ರಖರ ಹಿಂದುತ್ವ ಎಂದರೆ ಜಾತಿಗಳ ವಿಭಜನೆ, ಕಿತ್ತಾಟ, ಏಕತೆಗೆ ಧಕ್ಕೆ ತರುವ ಪ್ರಯತ್ನ’ ಎಂದು ಟೀಕಿಸಿದರು.

‘ಶಾಸಕ ಹ್ಯಾರಿಸ್‌ ಪುತ್ರ ಮತ್ತು ಕೆ.ಆರ್‌. ಪುರ ಕಾಂಗ್ರೆಸ್‌ ಮುಖಂಡ ನಾರಾಯಣ ಸ್ವಾಮಿ ಪ್ರಕರಣ ಗೊತ್ತಾದ ತಕ್ಷಣ ಅವರಿಬ್ಬರ ವಿರುದ್ಧ ಪಕ್ಷ ಕ್ರಮ ತೆಗೆದುಕೊಂಡಿದೆ. ಪಕ್ಷಕ್ಕೆ ಮುಜುಗರ ಉಂಟು ಮಾಡುವಂಥ ಘಟನೆಗಳನ್ನು ಸಹಿಸುವುದಿಲ್ಲ’ ಎಂದ ಅವರು, ಇಂಥ ವಿಷಯಗಳಲ್ಲಿ ಪಕ್ಷವನ್ನು ಹೊಣೆ ಮಾಡುವುದು ಸರಿಯಲ್ಲ ಎಂದೂ ಅಭಿಪ್ರಾಯಪಟ್ಟರು.

‘ಪಕ್ಷದ ವೀಕ್ಷಕರು ಕ್ಷೇತ್ರದ ಕುರಿತು ವರದಿ ನೀಡಿದ ಬಳಿಕ ಶಾಸಕ ಹ್ಯಾರಿಸ್‌ಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್‌ ತೀರ್ಮಾನಿಸಲಿದೆ. ಅದಕ್ಕೂ ಅವರ ಪುತ್ರ ನಲಪಾಡ್ ಪ್ರಕರಣಕ್ಕೂ ಥಳಕು ಹಾಕುವುದು ಸರಿಯಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT