ಹಿಂಗಾರು ಮಳೆಯ ನಿರೀಕ್ಷೆಯಲ್ಲಿ ರೈತರು

7
ಜಿಲ್ಲೆಯ ಕೊಳ್ಳೇಗಾಲ, ಯಳಂದೂರಿನಲ್ಲಿ ಮಳೆಯ ಕೊರತೆ, ಬರಪೀಡಿತ ತಾಲ್ಲೂಕು ಘೋಷಣೆ

ಹಿಂಗಾರು ಮಳೆಯ ನಿರೀಕ್ಷೆಯಲ್ಲಿ ರೈತರು

Published:
Updated:
Deccan Herald

ಚಾಮರಾಜನಗರ: ಮುಂಗಾರಿನ ಅವಧಿಯಲ್ಲಿ ಮಳೆಯ ಕೊರತೆ ಎದುರಿಸುತ್ತಿರುವ ಜಿಲ್ಲೆಯ ಕೊಳ್ಳೇಗಾಲ (ಹನೂರು ಸೇರಿ) ಹಾಗೂ ಯಳಂದೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ.

ಇದರ ನಡುವೆಯೇ, ಮುಂಗಾರು ಅವಧಿಯಲ್ಲಿ ಸಾಕಷ್ಟು ಮಳೆ ಬರದೇ ಇರುವುದರಿಂದ ತೊಂದರೆಗೆ ಸಿಲುಕಿರುವ ರೈತರು ಈಗ ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಈ ವರ್ಷ, ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದರೂ, ಜೂನ್‌ 1ರ ಬಳಿಕ, ಅಂದರೆ ನೈರುತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿಲ್ಲ. ಜನವರಿ 1ರಿಂದ ಸೆಪ್ಟೆಂಬರ್‌ 12ರವರೆಗೆ ಲೆಕ್ಕ ಹಾಕಿದರೆ, ಜಿಲ್ಲೆಯಲ್ಲಿ ಬಿದ್ದ ಒಟ್ಟಾರೆ ಮಳೆಯ ಪ್ರಮಾಣ ವಾಡಿಕೆಗಿಂತ ಶೇ 18ರಷ್ಟು ಹೆಚ್ಚು ಇದೆ. ಜೂನ್‌ 1ರಿಂದ ಲೆಕ್ಕ ಹಾಕಿದರೆ, ವಾಡಿಕೆಗಿಂತ ಶೇ 1ರಷ್ಟು ಕಡಿಮೆ ಮಳೆಯಾಗಿದೆ.

ಗುಂಡ್ಲುಪೇಟೆಯಲ್ಲಿ ಮಾತ್ರ ಹೆಚ್ಚು: ಗುಂಡ್ಲುಪೇಟೆ ತಾಲ್ಲೂಕನ್ನು ಬಿಟ್ಟು ಉಳಿದ ಮೂರೂ ತಾಲ್ಲೂಕುಗಳಲ್ಲಿ (ಚಾಮರಾಜನಗರ, ಕೊಳ್ಳೇಗಾಲ ಮತ್ತು ಯಳಂದೂರು) ಕಡಿಮೆ ಮಳೆಯಾಗಿದೆ. 

ಜೂನ್‌1ರಿಂದ ಸೆಪ್ಟೆಂಬರ್ 12ರ ಅವಧಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ 181 ಮಿ.ಮೀ ಮಳೆಯಾಗುತ್ತದೆ. ಈ ಬಾರಿ 352 ಮಿ.ಮೀ ಮಳೆ ಸುರಿದಿದೆ. ಅಂದರೆ ಶೇ 94ರಷ್ಟು ಹೆಚ್ಚು ಮಳೆಯಾಗಿದೆ. ಹಾಗಾಗಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಚೆನ್ನಾಗಿ ಆಗಿದೆ. ಕೃಷಿ ಇಲಾಖೆಯ ಅಂಕಿ– ಅಂಶಗಳ ಪ್ರಕಾರ, ತಾಲ್ಲೂಕಿನಲ್ಲಿ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈ ವರ್ಷ ತಾಲ್ಲೂಕಿನಲ್ಲಿ 42,465 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಾದರೆ 94.2ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಶೇ 21ರಷ್ಟು ಕಡಿಮೆ ಮಳೆಯಾಗಿದ್ದರೂ, ಕೊಳ್ಳೇಗಾಲ (ಹನೂರು ಸೇರಿ) (ಶೇ 29ರಷ್ಟು ಕಡಿಮೆ) ಮತ್ತು ಯಳಂದೂರು (ಶೇ 34ರಷ್ಟು ಕಡಿಮೆ ) ತಾಲ್ಲೂಕುಗಳಲ್ಲಿ ಮಳೆಯ ಕೊರತೆ ತೀವ್ರವಾಗಿದೆ.

ಕೈಕೊಟ್ಟ ಮಳೆ: ಜುಲೈ ಮತ್ತು ಆಗಸ್ಟ್‌ನಲ್ಲಿ ಈ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾಗದೇ ಇದ್ದುದು ರೈತರಿಗೆ ದೊಡ್ಡ ಹೊಡೆತ ನೀಡಿದೆ. ಈ ಅವಧಿಯಲ್ಲಿ ರೈತರು ಸಾಮಾನ್ಯವಾಗಿ ರಾಗಿ, ಜೋಳ, ಭತ್ತ, ಹುರುಳಿ, ಅಲಸಂದೆ, ಎಳ್ಳು, ಸಜ್ಜೆಯಂತಹ ಬೆಳೆಗಳನ್ನು ಬಿತ್ತನೆ ಮಾಡುತ್ತಾರೆ. ಆದರೆ, ಮಳೆ ಬಾರದೇ ಇದ್ದುದರಿಂದ ಮೂರೂ ತಾಲ್ಲೂಕುಗಳ ಮಳೆಯಾಶ್ರಿತ ರೈತರು ದೊಡ್ಡ ಪ್ರಮಾಣದಲ್ಲಿ ಬಿತ್ತನೆ ಮಾಡಿಲ್ಲ. ಅದರಲ್ಲೂ ಹನೂರು, ರಾಮಾಪುರ ಹೋಬಳಿಗಳ ರೈತರು ತೀವ್ರ ಮಳೆ ಕೊರತೆ ಎದುರಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಹನೂರು ತಾಲ್ಲೂಕಿನಲ್ಲಿ ಸ್ವಲ್ಪ ಮಳೆಯಾಗಿದ್ದು, ರೈತರು ಈಗ ಉಳುಮೆ ಮಾಡಲು ಆರಂಭಿಸಿದ್ದಾರೆ.

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗೌರಿ–ಗಣೇಶ ಹಬ್ಬದ ವೇಳೆ ಬಿತ್ತನೆ ಮಾಡಿದ ಬೆಳೆಗಳ ಪೈರು ಬಂದು ಆರಂಭದ ಕಳೆ ತೆಗೆಯುವ ಕಾರ್ಯ ಮುಗಿರುತ್ತದೆ. ಆದರೆ, ಈ ಬಾರಿ ಅಲ್ಲಿ ಇನ್ನೂ ಬಿತ್ತನೆ ಆರಂಭವಾಗಿಲ್ಲ.

ಕೊಳ್ಳೇಗಾಲ, ಯಳಂದೂರು ಭಾಗದಲ್ಲಿರುವ, ನಾಲೆ ನೀರನ್ನು ಅವಲಂಬಿಸಿದ ರೈತರು ಬಿತ್ತನೆ ಮಾಡಿದ್ದಾರೆ. ಆದರೆ, ಮಳೆಯನ್ನೇ ಆಶ್ರಯಿಸಿದ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿತ್ತನೆ ನಡೆದಿಲ್ಲ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹನೂರು, ಮಲೆಮಹದೇಶ್ವರ ಬೆಟ್ಟದ ಭಾಗದಲ್ಲಿ ಎರಡು ದಿನಗಳ ಹಿಂದೆ ಮಳೆಯಾಗಿದೆ. ಕೌದಳ್ಳಿ, ರಾಮಾಪುರ ಹೋಬಳಿಯಲ್ಲಿ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಮುಂಗಾರು ಅವಧಿಯ ಜುಲೈ, ಆಗಸ್ಟ್‌ನಲ್ಲಿ ಮಳೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಈ ಬಾರಿ ಹೆಚ್ಚು ಮಳೆಯಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.

‘ಇನ್ನೀಗ ಹಿಂಗಾರು ಮಳೆ ಬರಬೇಕು. ಜಿಲ್ಲೆಯಲ್ಲಿ ನವೆಂಬರ್‌ವರೆಗೂ ಚೆನ್ನಾಗಿ ಮಳೆ ಬರುತ್ತದೆ. ಮಳೆ ಬಂದರೆ ರೈತರಿಗೆ ತೊಂದರೆ ಇಲ್ಲ. ಕೊತ್ತಂಬರಿ, ಕಡಲೆಯಂತಹ ಬೆಳೆಗಳ ಬಿತ್ತನೆ ಮಾಡಬಹುದು. ಈ ವರ್ಷ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆ ನಮ್ಮದು’ ಎಂದು ಪ್ರಕಾಶ್‌ ಹೇಳಿದರು.

ಕೊಳ್ಳೇಗಾಲ, ಯಳಂದೂರಿನಲ್ಲಿ ಭತ್ತ ಬಿತ್ತನೆ ಹೆಚ್ಚು

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 13,750 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, ಈ ಪೈಕಿ 6,150 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 1,750 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. 200 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆ ಮಾಡಲಾಗಿದೆ.

ಕೊಳ್ಳೇಗಾಲ (7,500 ಹೆಕ್ಟೇರ್‌ ಗುರಿ) ಮತ್ತು ಯಳಂದೂರಿನಲ್ಲಿ (4,500 ಹೆಕ್ಟೇರ್‌) ಕ್ರಮವಾಗಿ 3,800 ಮತ್ತು 2,150 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಪ್ರಮಾಣ ಹೆಚ್ಚಾಗಿದೆ.

ಜೂನ್‌ 1ರಿಂದ ಸೆಪ್ಟೆಂಬರ್‌ 12ರವರೆಗೆ ಬಿದ್ದ ಮಳೆಯ ಪ್ರಮಾಣ (ಮಿ.ಮೀಗಳಲ್ಲಿ)

ಚಾಮರಾಜನಗರ ಜಿಲ್ಲೆ
ವಾಡಿಕೆ: 205
ವಾಸ್ತವ: 202
ವ್ಯತ್ಯಾಸ: –1%

ತಾಲ್ಲೂಕುವಾರು ಮಳೆ ಪ್ರಮಾಣ

ಚಾಮರಾಜನಗರ
ವಾಡಿಕೆ: 201
ವಾಸ್ತವ: 160
ವ್ಯತ್ಯಾಸ: –21%

ಗುಂಡ್ಲುಪೇಟೆ
ವಾಡಿಕೆ: 181
ವಾಸ್ತವ: 352
ವ್ಯತ್ಯಾಸ: 94%

ಕೊಳ್ಳೇಗಾಲ
ವಾಡಿಕೆ: 214
ವಾಸ್ತವ: 151
ವ್ಯತ್ಯಾಸ: –29%

ಯಳಂದೂರು
ವಾಡಿಕೆ: 251
ವಾಸ್ತವ: 167
ವ್ಯತ್ಯಾಸ: –34%

ಆಧಾರ: ಆಧಾರ: ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !