ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಮತದಾರರ ಒಲವು ಯಾರ ಕಡೆಗೆ?

7

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಮತದಾರರ ಒಲವು ಯಾರ ಕಡೆಗೆ?

Published:
Updated:
Deccan Herald

ಚಾಮರಾಜನಗರ/ ಕೊಳ್ಳೇಗಾಲ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾನಕ್ಕೆ (ಆಗಸ್ಟ್‌ 31) ಕ್ಷಣಗಣನೆ ಆರಂಭವಾಗಿರುವಂತೆಯೇ, ಪಕ್ಷಗಳು ಹಾಗೂ ಅಭ್ಯರ್ಥಿಗಳಲ್ಲಿ ಮತದಾರ ಕೈಹಿಡಿಯುತ್ತಾನೋ, ಕೈಬಿಡುತ್ತಾನೋ ಎಂಬ ತಳಮಳ ಆರಂಭವಾಗಿದೆ.

ಗೆಲುವಿಗಾಗಿ ಹಲವಾರು ರಣತಂತ್ರಗಳನ್ನು ಹೆಣೆದಿದ್ದರೂ, ಸಾಕಷ್ಟು ಪ್ರಚಾರ ಮಾಡಿದ್ದರೂ, ಮತದಾರರ ಮನಸ್ಸನ್ನು ಅರ್ಥಮಾಡುವುದು ಯಾವ ಅಭ್ಯರ್ಥಿಗೂ ಸಾಧ್ಯವಾಗಿಲ್ಲ. ಹಾಗಾಗಿ, ಏನಾಗುವುದೋ ಎಂಬ ಅಳುಕು ಎಲ್ಲರಲ್ಲೂ ಇದ್ದೇ ಇದೆ.

ಚಾಮರಾಜನಗರದ 31 ವಾರ್ಡ್‌ಗಳ ಪೈಕಿ 3ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಅಂದರೆ, 9 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಹಾಗೂ ಎಸ್‌ಡಿಪಿಐ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ನಾಲ್ವರು ಪಕ್ಷೇತರರೂ ಇಲ್ಲಿ ಕಣಕ್ಕಿಳಿದಿದ್ದಾರೆ. 15ನೇ ವಾರ್ಡ್‌ನಲ್ಲಿ 8 ಅಭ್ಯರ್ಥಿಗಳಿದ್ದಾರೆ. ಇಲ್ಲಿ, ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳಿಗೆ ನಾಲ್ವರು ಸ್ವತಂತ್ರ ಅಭ್ಯರ್ಥಿಗಳು ಸವಾಲೊಡ್ಡಿದ್ದಾರೆ.

ಉಳಿದಂತೆ, 12 ಮತ್ತು 17ನೇ ವಾರ್ಡ್‌ಗಳಲ್ಲಿ ತಲಾ 7 ಮಂದಿ, 4, 13, 26 ವಾರ್ಡ್‌ಗಳಲ್ಲಿ ತಲಾ 6 ಅಭ್ಯರ್ಥಿಗಳು 9, 23, 30 ಮತ್ತು 31ನೇ ವಾರ್ಡ್‌ಗಳಲ್ಲಿ ತಲಾ ಐವರು, 6, 8, 14, 19, 24 ಮತ್ತು 29ನೇ ವಾರ್ಡ್‌ಗಳಲ್ಲಿ ತಲಾ ನಾಲ್ವರು ಹುರಿಯಾಳುಗಳಿದ್ದಾರೆ.

11 ವಾರ್ಡ್‌ಗಳಲ್ಲಿ ತಲಾ ಮೂವರು: 31 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ತಲಾ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಪೈಕಿ 1, 2, 10, 11, 25, 27 ಮತ್ತು 28ನೇ ವಾರ್ಡ್‌ಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಬಿಎಸ್‌ಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 16 ಮತ್ತು 20ನೇ ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಪಕ್ಷೇತರ ಅಭ್ಯರ್ಥಿಗಳು ಸವಾಲು ಒಡ್ಡಿದ್ದಾರೆ.

5ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಎಸ್‌ಡಿಪಿಐ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. 18ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಸ್ಪರ್ಧೆ ಇದೆ.

3 ವಾರ್ಡ್‌ಗಳಲ್ಲಿ ‘ಕೈ’, ‘ಕಮಲ’ ಪೈಪೋಟಿ: 7, 21 ಮತ್ತು 22ನೇ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಕೊಳ್ಳೇಗಾಲದ 31 ವಾರ್ಡ್‌ಗಳ ಪೈಕಿ 29 ವಾರ್ಡ್‌ಗಳಿಗೆ ಮಾತ್ರ ಶುಕ್ರವಾರ ಮತದಾನ ನಡೆಯಲಿದೆ. 6ನೇ ವಾರ್ಡ್‌ನಲ್ಲಿ ಬಿಎಸ್‌ಪಿ ಅಭ್ಯರ್ಥಿ ಒಬ್ಬರೇ ಕಣದಲ್ಲಿ ಇರುವುದರಿಂದ ಅಲ್ಲಿ ಮತದಾನದ ಅಗತ್ಯವಿಲ್ಲ. 9ನೇ ವಾರ್ಡ್‌ನ ಬಿಎಸ್‌ಪಿ ಅಭ್ಯರ್ಥಿ ಮೃತಪಟ್ಟಿರುವುದರಿಂದ ಚುನಾವಣೆ ಮುಂದೂಡಲಾಗಿದೆ (ಇಲ್ಲಿ ನಾಲ್ವರು ಅಭ್ಯರ್ಥಿಗಳು ಇದ್ದರು).

18ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಇಲ್ಲಿ ಆರು ಮಂದಿ ಕಣಕ್ಕಿಳಿದಿದ್ದು, ಮೂವರು ಪಕ್ಷೇತರರು. ಉಳಿದ ಮೂವರು ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಬಿಜೆಪಿ ಅಭ್ಯರ್ಥಿಗಳು. 

7, 11, 13, 18, 26 ಮತ್ತು 27ನೇ ವಾರ್ಡ್‌ಗಳಲ್ಲಿ ತಲಾ ಐವರು ಹುರಿಯಾಳುಗಳಿದ್ದಾರೆ. ಇಲ್ಲಿ ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ ಅಭ್ಯರ್ಥಿಗಳಿಗೆ ಪಕ್ಷೇತರರು ಸವಾಲೊಡ್ಡಿದ್ದಾರೆ. 8 ವಾರ್ಡ್‌ಗಳಲ್ಲಿ ತಲಾ ನಾಲ್ವರು ಕಣದಲ್ಲಿದ್ದಾರೆ.

9 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ: 8, 10, 24, 25, 28, 29 ಮತ್ತು 31ನೇ ವಾರ್ಡ್‌ಗಳಲ್ಲಿ ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 12ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನಡುವೆ, 23ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ಪೈಪೋಟಿ ನಡೆಯಲಿದೆ.

7 ವಾರ್ಡ್‌ಗಳಲ್ಲಿ ನೇರ ಸ್ಪರ್ಧೆ: 3, 4, 15, 22 ಮತ್ತು 30ನೇ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 1ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಕವಿತಾ ಅವರು ಬಿಎಸ್‌ಪಿಯ ಸುರಿಯಭಾನು ಅವರ ವಿರುದ್ಧ ಸೆ‌ಣಸಲಿದ್ದಾರೆ. ಇಲ್ಲಿ, ಕವಿತಾ ಅವರಿಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿದೆ. 16ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ.

ಪಕ್ಷಗಳಿಗೆ ಅಗ್ನಿಪರೀಕ್ಷೆ, ಸಚಿವರಿಗೆ ಪ್ರತಿಷ್ಠೆ

ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಬಂದಿರುವ ಈ ಚುನಾವಣೆಯು ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಚುನಾವಣೆಯು ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ ಹಾಗೂ ಜೆಡಿಎಸ್‌ ಪಕ್ಷಗಳನ್ನು ಅಗ್ನಿಪರೀಕ್ಷೆಗೆ ಒಡ್ಡಲಿದೆ.

ಜಿಲ್ಲೆಯ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆ ಆಗಲಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !