233 ಹುರಿಯಾಳುಗಳ ಭವಿಷ್ಯ ನಾಳೆ ಒರೆಗೆ

7
ಚಾಮರಾಜನಗರ, ಕೊಳ್ಳೇಗಾಲ ನಗರಸಭೆಗಳಿಗೆ ಚುನಾವಣೆ: ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ

233 ಹುರಿಯಾಳುಗಳ ಭವಿಷ್ಯ ನಾಳೆ ಒರೆಗೆ

Published:
Updated:
Deccan Herald

ಚಾಮರಾಜನಗರ/ ಕೊಳ್ಳೇಗಾಲ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಿಗೆ ನೂತನ ಸದಸ್ಯರ ಆಯ್ಕೆಗಾಗಿ ಶುಕ್ರವಾರ ಮತದಾನ ನಡೆಯಲಿದೆ. ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಎರಡೂ ನಗರಸಭೆಗಳ 233 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. 

ಚಾಮರಾಜನಗರದ 31 ವಾರ್ಡ್‌ಗಳ 61 ಮತ್ತು ಕೊಳ್ಳೇಗಾಲದ 29 ವಾರ್ಡ್‌ಗ‌ಳ 43 ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. 31 ವಾರ್ಡ್‌ಗಳನ್ನು ಹೊಂದಿರುವ ಕೊಳ್ಳೇಗಾಲ ನಗರಸಭೆಯಲ್ಲಿ 45 ಮತಗಟ್ಟೆಗಳನ್ನು ಗುರುತಿಸಲಾಗಿದೆಯಾದರೂ 6 ಮತ್ತು 9ನೇ ವಾರ್ಡ್‌ಗಳಲ್ಲಿ (ಎರಡು ಮತಗಟ್ಟೆ) ಮತದಾನ ನಡೆಯುವುದಿಲ್ಲ.  

ಮಸ್ಟರಿಂಗ್‌ ಕಾರ್ಯ: ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಕೊಳ್ಳೇಗಾಲದ ಸರ್ಕಾರಿ ಎಂ.ಜಿ.ಎಸ್‌.ವಿ. ಜ್ಯೂನಿಯರ್‌ ಕಾಲೇಜಿನಲ್ಲಿ ಗುರುವಾರ ಮಸ್ಟರಿಂಗ್‌ ಕಾರ್ಯ ನಡೆಯಿತು. ಮತಗಟ್ಟೆ ಅಧಿಕಾರಿಗಳು, ಮತ ಯಂತ್ರಗಳು ಹಾಗೂ ಇತರ ಅಗತ್ಯ ಪರಿಕರಗಳೊಂದಿಗೆ ಮತಗಟ್ಟೆಗೆ ತೆರಳಿದರು.

ಮತದಾನಕ್ಕಾಗಿ ಎಲ್ಲ ಸಿದ್ಧತೆಗಳು ಆಗಿವೆ. ಸಿಬ್ಬಂದಿ ಈಗಾಗಲೇ ಮತಗಟ್ಟೆಗಳಿಗೆ ತಲುಪಿದ್ದಾರೆ. ಎಲ್ಲ ಮತಗಟ್ಟೆಗಳಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಅಣಕು ಮತದಾನ ನಡೆಯಲಿದೆ. 7 ಗಂಟೆಗೆ ಸರಿಯಾಗಿ ಮತದಾನ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ‘ಪ್ರಜಾವಾಣಿ’ಗೆ ತಿಳಿಸಿದರು.    

ಕೊನೇ ಕ್ಷಣದ ಕಸರತ್ತು: ಈ ಮಧ್ಯೆ, ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ನಡೆಸಿದ್ದಾರೆ.

ಅಭ್ಯರ್ಥಿಗಳು ಮಾತ್ರವಲ್ಲದೇ ಅವರ ಸಂಬಂಧಿಕರು, ಸ್ನೇಹಿತರು ಮತ್ತು ಬೆಂಬಲಿಗರು ಮನೆ ಮನೆಗೆ ತೆರಳಿ, ಅಭ್ಯರ್ಥಿಯ ವಿವರಗಳನ್ನೊಳಗೊಂಡ ಚೀಟಿಯನ್ನು ನೀಡಿ ಅವರಿಗೆ ಮತ ಹಾಕುವಂತೆ ಕೇಳುತ್ತಿದ್ದ ದೃಶ್ಯ ಗುರುವಾರ ಎಲ್ಲ ವಾರ್ಡ್‌ಗಳಲ್ಲಿ ಕಂಡು ಬಂತು. 

ಮತದಾರರಿಗೆ ಹಣ ನೀಡುವುದು ಸೇರಿದಂತೆ ಬೇರೆ ಬೇರೆ ಆಮಿಷಗಳನ್ನು ಒಡ್ಡುವುದರಲ್ಲೂ ಕೆಲವು ಅಭ್ಯರ್ಥಿಗಳು ಹಿಂದೆ ಬಿದ್ದಿಲ್ಲ. 

ಕೆಲವರು, ರಾಜಕೀಯ ಮುಖಂಡರ ಮೂಲಕ, ಇಲ್ಲವೇ ಪರಿಚಯಸ್ಥರ ಮೂಲಕ ಮತದಾರರಿಗೆ ಕರೆ ಮಾಡಿಸಿ ಮತ ಹಾಕುವಂತೆ ಒತ್ತಡವನ್ನೂ ಹಾಕಿದ್ದಾರೆ. ನಗರಸಭೆ ವ್ಯಾಪ್ತಿಯ ಮತದಾರರಾಗಿದ್ದುಕೊಂಡು ಮೈಸೂರು, ಬೆಂಗಳೂರು ಸೇರಿದಂತೆ ಬೇರೆ ಕಡೆಗಳಲ್ಲಿ ನೆಲೆಸಿರುವವರಿಗೆ, ತವರಿಗೆ ಬಂದು ಮತ ಚಲಾಯಿಸುವಂತೆ ದುಂಬಾಲು ಬಿದ್ದಿದ್ದಾರೆ. 

ಚಾಮರಾಜನಗರ ನಗರಸಭೆಯ ಚುನಾವಣಾ ಅಖಾಡದಲ್ಲಿ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಆರ್‌.ಎಂ.ರಾಜಪ್ಪ ಸೇರಿದಂತೆ 11 ಹಾಲಿ ಸದಸ್ಯರು ಹಾಗೂ ಇತರೆ 121 ಮಂದಿ ಇದ್ದಾರೆ. ಈ ಪೈಕಿ, 34 ಮಂದಿ ಪಕ್ಷೇತರರು ವಿವಿಧ ವಾರ್ಡ್‌ಗಳಲ್ಲಿ ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ, ಜೆಡಿಎಸ್‌ ಮತ್ತು ಎಸ್‌ಡಿಪಿಐ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದಾರೆ. 

ಕೊಳ್ಳೇಗಾಲದಲ್ಲಿ ‌ಹಾಲಿ ಉಪಾಧ್ಯಕ್ಷ ಎ.ಪಿ.ಶಂಕರ್‌ ಸೇರಿದಂತೆ 13 ಹಾಲಿ ಸದಸ್ಯರು ಮತ್ತೊಮ್ಮೆ ಸ್ಥಳೀಯ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಲ್ಲಿ 25 ಪಕ್ಷೇತರರು ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ತೊಡೆ ತಟ್ಟಿದ್ದಾರೆ.

ಮತದಾನದ ಸಂದರ್ಭದಲ್ಲಿ ಗಲಾಟೆ, ಅಕ್ರಮ ಮತದಾನದಲ್ಲಿ ತೊಡಗುವುದು ಮತ್ತು ಶಾಂತಿಯುತ ಮತದಾನಕ್ಕೆ ಅಡ್ಡಿಪಡಿಸುವ ಕೃತ್ಯಗಳು ಕಂಡು ಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಚುನಾವಣಾ ಆಯೋಗದ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ‍ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಫೌಜಿಯಾ ತರನ್ನುಮ್ ಹೇಳಿದರು.

2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಸ್ಥಳೀಯ ಸಂಸ್ಥೆಗಳಿಗೆ ಹೊಸ ಸದಸ್ಯರ ಆಯ್ಕೆ ನಡೆಯುತ್ತಿರುವುದರಿಂದ ಈ ಚುನಾವಣೆ ರಾಜಕೀಯವಾಗಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಪೊಲೀಸ್‌ ಬಿಗಿ ಬಂದೋಬಸ್ತ್‌

ಮತದಾನದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. 

ಚಾಮರಾಜನಗರದಲ್ಲಿ ಒಬ್ಬ ಡಿಎಸ್‌ಪಿ, ಮೂವರು ಸಿಪಿಐ, 6 ಪಿಎಸ್‌ಐ/ಎಎಸ್‌ಐ, 11 ಎಎಸ್‌ಐ, 25 ಹೆಡ್‌ ಕಾನ್‌ಸ್ಟೆಬಲ್‌,  61 ಪೊಲೀಸ್‌ ಕಾನ್‌ಸ್ಟೆಬಲ್‌ ಹಾಗೂ 61 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಕೊಳ್ಳೇಗಾಲದಲ್ಲಿ ಒಬ್ಬ ಡಿಎಸ್‌ಪಿ, ಇಬ್ಬರು ಸಿಪಿಐ, ಆರು ಪಿಎಸ್‌ಐ/ಎಎಸ್‌ಐ, 10 ಎಎಸ್‌ಐ, 29 ಹೆಡ್‌ ಕಾನ್‌ಸ್ಟೆಬಲ್‌, 45 ಕಾನ್‌ಸ್ಟೆಬಲ್‌ಗಳು, 45 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

472 ಅಧಿಕಾರಿಗಳ‌ ನೇಮಕ

ಎರಡೂ ನಗರಸಭೆಗಳ ಚುನಾವಣಾ ಪ್ರಕ್ರಿಯೆ ನಿರ್ವಹಿಸಲು ಒಟ್ಟು 472 ಅಧಿಕಾರಿಗಳನ್ನು ನೇಮಿಸಲಾಗಿದೆ.

ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ 272 ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಪೈಕಿ ತಲಾ 68 ಮಂದಿ ಪ್ರಿಸೈಡಿಂಗ್‌ ಅಧಿಕಾರಿಗಳು ಹಾಗೂ ಮೊದಲನೇ ಮತಗಟ್ಟೆ ಅಧಿಕಾರಿಗಳು. ಉಳಿದಂತೆ 136 ಮಂದಿ ಮತಗಟ್ಟೆ ಅಧಿಕಾರಿಗಳಿದ್ದಾರೆ.

ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ 200 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವರಲ್ಲಿ ತಲಾ 50 ಮಂದಿ ಪ್ರಿಸೈಡಿಂಗ್‌ ಹಾಗೂ ಮೊದಲನೇ ಮತಗಟ್ಟೆ ಅಧಿಕಾರಿಗಳು. ಉಳಿದ 100 ಮಂದಿ ಮತಗಟ್ಟೆ ಅಧಿಕಾರಿಗಳು.

ಮಹಿಳಾ ಮತದಾರರೇ ಹೆಚ್ಚು

ಎರಡೂ ನಗರಸಭೆಯ ವ್ಯಾಪ್ತಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 53,767 ಮತದಾರರು ಇದ್ದು, ಈ ಪೈಕಿ 27,650 ಮಂದಿ ಮಹಿಳಾ ಮತದಾರರು. ಪುರುಷ ಮತದಾರರಿಗೆ (26,106) ಹೋಲಿಸಿದರೆ ಮಹಿಳಾ ಮತದಾರರು 1,544 ಮಂದಿ ಹೆಚ್ಚಿದ್ದಾರೆ.

ಕೊಳ್ಳೇಗಾಲದಲ್ಲಿ  44,455 ಮಂದಿ ಮತ ಚಲಾವಣೆಯ ಹಕ್ಕು ಪಡೆದಿದ್ದು, ಈ ಪೈಕಿ 22,488 ಮಹಿಳೆಯರು. ಇಲ್ಲಿ ಪುರುಷರಿಗಿಂತ (21,963) 525 ಹೆಚ್ಚು ಮಹಿಳಾ ಮತದಾರರಿದ್ದಾರೆ.

**

ಅಂಕಿ–ಅಂಶ

132 – ಚಾಮರಾಜನಗರದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು

101 – ಕೊಳ್ಳೇಗಾಲದಲ್ಲಿ ಅದೃಷ್ಟ ಪ‍ರೀಕ್ಷೆಗೆ ಇಳಿದಿರುವ ಹುರಿಯಾಳುಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !