ಜನರ ಕೆಲಸ ಮೊದಲು ಮಾಡಿ

7
ಅಧಿಕಾರಿಗಳಿಗೆ ಶಾಸಕ ಸಿ.ಎಸ್.ನಿರಂಜನಕುಮಾರ್‌ ಸೂಚನೆ

ಜನರ ಕೆಲಸ ಮೊದಲು ಮಾಡಿ

Published:
Updated:
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಶಾಸಕ ಸಿ.ಎಸ್.ನಿರಂಜನಕುಮಾರ್‌ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗದ ಅಧಿಕಾರಿ ಮರಿಸ್ವಾಮಿ ಮಾತನಾಡಿ, ‘ಕೆರೆಗಳ ಕಾಮಗಾರಿಯನ್ನು ಮುಗಿಸಲಾಗಿದೆ. ಕೆರೆಗಳ ಗಡಿಯನ್ನು ಗುರ್ತಿಸಿ ಹೂಳು ತೆಗೆಯಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆ ಆಗಿದೆ. ಇದರಿಂದ ಕೆರೆಗಳಿಗೆ ನೀರು ತುಂಬಿಸುಸಬೇಕು. ಇದಕ್ಕೆ ಅಡ್ಡಿ ಮಾಡಬಾರದು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖಯ್ಯ ಮಾತನಾಡಿ, ‘ತಾಲ್ಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಈ ಬಾರಿ ಫಲಿತಾಂಶ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಈ ಬಾರಿಯ ಫಲಿತಾಂಶ ಕಡಿಮೆಯಾಗದಂತೆ ಆರಂಭದಿಂದಲೇ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷ ತರಗತಿ, ಗುಂಪು ಅಧ್ಯಯನ ಕಾರ್ಯಕ್ರಮ ನಡೆಸಬೇಕು’ ಎಂದು ಶಾಸಕರು ಸೂಚಿಸಿದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸತೀಶ್ ವರದಿ ಮಂಡಿಸುವಾಗ ಮಧ್ಯಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್,  ‘ಶಾಲೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ಆಹಾರ ಪದಾರ್ಥ ಮತ್ತು ಸಿಲಿಂಡರ್‍ಗಳನ್ನು ನೀಡುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಸತೀಶ್‌, ‘ಯಾವುದೇ ಶಾಲೆಯಿಂದ ಈ ಬಗ್ಗೆ ದೂರು ಬಂದಿಲ್ಲ’ ಎಂದು ತಿಳಿಸಿದರು.

ಸರಿಯಾದ ಸಮಯಕ್ಕೆ ವೈದ್ಯರು ಆಸ್ಪತ್ರೆಗೆ ಬರಬೇಕು. ರೋಗಿಗಳನ್ನು ಕಾಯಿಸದೇ ಬೇಗ ಚಿಕಿತ್ಸೆ ನೀಡಬೇಕು. ಜೆನರಿಕ್ ಔಷಧ ಕೇಂದ್ರದಲ್ಲಿ ಔಷಧಗಳನ್ನು ದಾಸ್ತಾನು ಇಟ್ಟಿರಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಅವರಿಗೆ ಶಾಸಕರು ಸೂಚಿಸಿದರು.

‘ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಜನರ ಕೆಲಸಗಳನ್ನು ಮೊದಲು ಮಾಡಬೇಕು’ ಎಂದು ತಾಕೀತು ಮಾಡಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ಅವರಿಗೆ ಶಾಸಕರು ಸೂಚಿಸಿದರು.

ಲೋಕೋಪಯೋಗಿ, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಸಹಕಾರ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವರದಿ ಮಂಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಸ್.ಮಹೇಶ್, ಬಿ.ಕೆ.ಬೊಮ್ಮಾಯಿ, ಅಶ್ವಿನಿ ವಿಶ್ವನಾಥ್, ಚೆನ್ನಪ್ಪ, ತಹಸೀಲ್ದಾರ್ ಚಂದ್ರಕುಮಾರ್ ಇದ್ದರು.

ಜನರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು, ಅಧಿಕಾರಿಗಳ ಮೇಲೆ ನಿಗಾವಹಿಸಲು ತಾಲ್ಲೂಕಿನ ಎಲ್ಲ ಅಧಿಕಾರಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಲು ನಿರ್ಧರಿಸಲಾಗಿದೆ.
ಸಿ.ಎಸ್.ನಿರಂಜನಕುಮಾರ್‌, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !