ಚೆಂಡು ಹೂವು ಬೆಳೆಗಾರರಿಗೆ ಹೊಡೆತ

7
ಕೇರಳದಲ್ಲಿ ಮಹಾಮಳೆ: ಇಲ್ಲವಾದ ಓಣಂ ಸಂಭ್ರಮ

ಚೆಂಡು ಹೂವು ಬೆಳೆಗಾರರಿಗೆ ಹೊಡೆತ

Published:
Updated:
Deccan Herald

ಗುಂಡ್ಲುಪೇಟೆ: ನೆರೆಯ ರಾಜ್ಯ ಕೇರಳದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮ, ತಾಲ್ಲೂಕಿನ ಚೆಂಡು ಹೂವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.

ಕೇರಳದ ಸಾಂಪ್ರದಾಯಿಕ ಹಬ್ಬವಾದ ಓಣಂಗೆ ತಾಲ್ಲೂಕಿನಿಂದ ಟನ್‌ಗಟ್ಟಲೆ ಚೆಂಡು ಹೂವು ಪ್ರತಿ ವರ್ಷ ಸರಬರಾಜು ಆಗುತ್ತದೆ. ಇದರಿಂದ ಇಲ್ಲಿನ ಬೆಳೆಗಾರರು ಲಾಭವನ್ನು ಕಾಣುತ್ತಿದ್ದರು. ಆದರೆ, ಈಗ ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಇದರಿಂದ ಅಲ್ಲಿ ಈ ಬಾರಿ ಓಣಂ ಸಂಭ್ರಮ ಮಸುಕಾಗಿದೆ. ಹೀಗಾಗಿ ತಾಲ್ಲೂಕಿನಲ್ಲಿ ಚೆಂಡು ಹೂವು ಬೆಳೆಗಾರರ ಲಾಭಕ್ಕೆ ಹೊಡೆತ ಬಿದ್ದಿದೆ.

ಸಾಮಾನ್ಯವಾಗಿ ಆಗಸ್ಟ್‌ ಕೊನೆಯ ವಾರ ಹಾಗೂ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೇರಳದಲ್ಲಿ ಓಣಂ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್‌ 25ರಂದು ಓಣಂ ಹಬ್ಬವಿದೆ. ಪ್ರತಿ ವರ್ಷ ‌ಕೇರಳದ ವ್ಯಾಪಾರಿಗಳು ತಾಲ್ಲೂಕಿಗೆ ಬಂದು ಭಾರಿ ಪ್ರಮಾಣದಲ್ಲಿ ಹೂವುಗಳನ್ನು ಖರೀದಿಸುತ್ತಿದ್ದರು. ಇದರಿಂದ ಚೆನ್ನಮಲ್ಲಿಪುರ, ಕಣ್ಣೇಗಾಲ, ಭೀಮನಬೀಡು, ಕಗ್ಗಳದಹುಂಡಿ, ಹೊಂಗಹಳ್ಳಿ, ಬೇರಾಂಬಾಡಿ, ಮದ್ದೂರು, ಬರಗಿ ಮದ್ದಯ್ಯನಹುಂಡಿ ಭಾಗಗಳಲ್ಲಿ ಚೆಂಡು ಹೂವು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು. ಬೆಳೆಗಾರರು ಲಾಭ ಪಡೆಯುತ್ತಿದ್ದರು.

ಈ ಬಾರಿ ತಾಲ್ಲೂಕಿನಾದ್ಯಂತ 700ರಿಂದ 750 ಹೇಕ್ಟರ್ ಪ್ರದೇಶದಲ್ಲಿ ಚೆಂಡು ಹೂವು ಬೆಳೆಯಲಾಗಿದೆ. ಅನೇಕ ರೈತರು ಓಣಂ ಹಬ್ಬದ ಸಮಯದಲ್ಲಿ ಕಟಾವಿಗೆ ಬರುವಂತೆ ಬೆಳೆದಿದ್ದರು. ಹಾಗಾಗಿ, ಈಗ ಹೂ ಕಟಾವಿಗೆ ಬಂದಿದೆ. ಆದರೆ, ಈವರೆಗೆ ಕೇರಳದ ಯಾವ ವ್ಯಾಪಾರಿಗಳೂ ಹೂವು ಖರೀದಿಸಲು ಬಾರದೇ ಇರುವುದರಿಂದ ಅನೇಕರು ಕಟಾವು ಮಾಡುತ್ತಿಲ್ಲ. ಈಗಾಗಲೇ ಕಟಾವು ಮಾಡಿರುವ ಹೂವುಗಳು ಕೊಳೆತು ನಾಶವಾಗುತ್ತಿವೆ. ಹೀಗಾಗಿ, ರೈತರು ಹೂವುಗಳನ್ನು ರಸ್ತೆಯ ಬದಿ ಹಾಗೂ ಗುಂಡಿಗಳಿಗೆ ಎಸೆಯುತ್ತಿದ್ದಾರೆ.

‘ಈ ಸಲ ಒಳ್ಳೆಯ ಲಾಭ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಮಳೆ ನಮ್ಮ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ಕೇರಳದಿಂದ ಯಾವೊಬ್ಬ ವ್ಯಾಪಾರಿಯೂ ಬಂದಿಲ್ಲ. ಇಲ್ಲಿಯೂ ಹೂವುಗಳನ್ನು ಕೇಳುವವರಿಲ್ಲ. ಬೆಳೆದ ಹೂವನ್ನು ಏನು ಮಾಡುವುದು ಎನ್ನುವುದೇ ಚಿಂತೆಯಾಗಿದೆ’ ಎಂದು ರೈತ ರಾಮಣ್ಣ ಅಳಲು ತೋಡಿಕೊಂಡರು.

‘ಓಣಂ ಸಂದರ್ಭದಲ್ಲಿ ಕೇರಳದಲ್ಲಿರುವ ಅನೇಕ ಸಂಬಂಧಿಕರು ಇಲ್ಲಿಗೆ ಬಂದು ಹೂವನ್ನು ಎಷ್ಟೇ ಬೆಲೆ ಇದ್ದರೂ ಕೊಂಡು ಹೋಗುತ್ತಿದ್ದರು. ಆದರೆ, ಈ ಬಾರಿ ಅಲ್ಲಿನ ಜನರು ಕಷ್ಟದಲ್ಲಿದ್ದು, ಪ್ರಾಣವನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ’ ಎಂದು ಪಟ್ಟಣದಲ್ಲಿ ವಾಸವಾಗಿರುವ ಕೇರಳದ ವಿನೀಶ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !