ತರಕಾರಿ, ಹಣ್ಣು, ಹೂಗಳ ಬೆಲೆ ಏರಿಳಿತ; ಹಬ್ಬ, ಶುಭ ಸಮಾರಂಭಗಳ ನಿರೀಕ್ಷೆಯಲ್ಲ್ಲಿ...

7

ತರಕಾರಿ, ಹಣ್ಣು, ಹೂಗಳ ಬೆಲೆ ಏರಿಳಿತ; ಹಬ್ಬ, ಶುಭ ಸಮಾರಂಭಗಳ ನಿರೀಕ್ಷೆಯಲ್ಲ್ಲಿ...

Published:
Updated:
Deccan Herald

ಚಾಮರಾಜನಗರ: ತರಕಾರಿ, ಹಣ್ಣು ಹಾಗೂ ಹೂವುಗಳ ಮಾರುಕಟ್ಟೆಯಲ್ಲಿ ಧಾರಣೆ ಏರಿಳಿತ ಮುಂದುವರಿದಿದೆ. 

ಶ್ರಾವಣ ಮಾಸದ ಅಂತಿಮ ದಿನಗಳಲ್ಲಿ ಶುಭ ಸಮಾರಂಭಗಳು, ಹಬ್ಬಗಳ ಸಾಲು ಬರುವುದರಿಂದ ತರಕಾರಿ, ಹಣ್ಣು, ಹೂವು ಮಾರಾಟಗಾರರು ಧಾರಣೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.

ಕಳೆದ ವಾರವೂ ಮಾರುಕಟ್ಟೆಯಲ್ಲಿ ಇಂತಹದೇ ಚಿತ್ರಣವಿತ್ತು. ಈ ವಾರವೂ ಬಹುತೇಕ ಮಾರುಕಟ್ಟೆ ವಸ್ತುಗಳ ಧಾರಣೆಯಲ್ಲಿ ಏರಿಳಿತ ಕಂಡು ಬಂದಿದೆ. ಹೂವು ಕೊಂಚ ಚೇತರಿಕೆ ಕಂಡಿದೆ.

ಕಳೆದ ವಾರ ಒಂದು ಕೆಜಿ ಕಾಕಡಕ್ಕೆ ₹100ರಿಂದ ₹120 ಧಾರಣೆ ಇತ್ತು. ಈ ವಾರ ಅದು ₹ 160ರಿಂದ ₹200ಕ್ಕೆ ಏರಿಕೆಯಾಗಿದೆ. ಮೊಳ್ಳೆ ಹೂವು ₹200ಕ್ಕೆ ಸಿಗುತ್ತಿದೆ. ಮದುವೆ ಸಮಾರಂಭಗಳು, ಗೌರಿ ಗಣೇಶ ಹಬ್ಬ ಸೇರಿದಂತೆ ಸಾಲು ಹಬ್ಬಗಳು ಮುಂದಿವೆ. ಹಾಗಾಗಿ, ಈ ವಾರದಿಂದಲೇ ಹೂವಿನ ದರ ಏರಿಕೆಯಾಗುವ ಲಕ್ಷಣವಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ಮೊಟ್ಟೆ ಮತ್ತೂ ಕುಸಿತ: ಕಳೆದ ವಾರ ಫಾರಂ ಕೋಳಿ ಮೊಟ್ಟೆ 100ಕ್ಕೆ ₹350 ಇತ್ತು. ಈ ವಾರ 100 ಮೊಟ್ಟೆಗೆ ₹320 ಧಾರಣೆ ಇದೆ. ಎರಡು ವಾರಗಳಿಂದ ಮೊಟ್ಟೆ ಧಾರಣೆಯಲ್ಲಿ ಇಳಿಕೆ ಕಂಡುಬರುತ್ತಿದೆ.

‘ಶುಭ ಸಮಾರಂಭ, ಹಬ್ಬಗಳಲ್ಲಿ ಮೊಟ್ಟೆ ಬಳಕೆ ಕಡಿಮೆ. ಹೀಗಾಗಿ, ದರದಲ್ಲಿ ಇಳಿಕೆಯಾಗುತ್ತಿದೆ’ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿ ನವೀನ್‌.

ತರಕಾರಿ, ಹಣ್ಣು: ಕ್ಯಾರೆಟ್‌ ₹10, ಆಲೂಗಡ್ಡೆ ₹ 5 ಹೆಚ್ಚಳವಾಗಿದೆ. ಕಳೆದ ವಾರ ಕ್ಯಾರೆಟ್‌ ₹30 ಇತ್ತು ಈ ವಾರ ₹ 40 ಆಗಿದೆ. ₹25 ಇದ್ದಂತಹ ಆಲೂಗಡ್ಡೆ ಈ ವಾರ ₹30 ದರ ಇದೆ. 

ದ್ರಾಕ್ಷಿ, ಸೇಬು, ಕಿವಿಫ್ರೂಟ್‌, ಕಿತ್ತಳೆ, ಪಚ್ಚೆ ಬಾಳೆ, ಏಲಕ್ಕಿ ಬಾಳೆ ದರದಲ್ಲಿ ಹೆಚ್ಚಳವಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಒಂದು ಕೆಜಿ ಸೇಬು, ದ್ರಾಕ್ಷಿ ಬೆಲೆ ₹120, ಕಳೆದ ವಾರ ದ್ರಾಕ್ಷಿ ₹60ರಿಂದ ₹80ಕ್ಕೆ ಮಾರಾಟವಾಗುತ್ತಿತ್ತು.

‘ಮುಂದೆ ಸಾಲು ಹಬ್ಬಗಳಿವೆ. ಈ ಸಂದರ್ಭದಲ್ಲಿ ಹಣ್ಣುಗಳು ಹೆಚ್ಚು ಮಾರಾಟವಾಗುವುದರಿಂದ ಬೆಲೆ ಏರಿಕೆಯ ನಿರೀಕ್ಷೆ ಇದೆ’ ಎನ್ನುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿ ಟಿ.ಮಹೇಶ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !