‘ಸೆಪ್ಟೆಂಬರ್ ವೇಳೆಗೆ ರಸ್ತೆ ಕಾಮಗಾರಿ ಪೂರ್ಣ’

ಚಾಮರಾಜನಗರ: ಪಟ್ಟಣದಲ್ಲಿ ಕೈಗೆತ್ತಿಕೊಂಡಿರುವ ಎಲ್ಲ ರಸ್ತೆ ಕಾಮಗಾರಿಗಳು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಸೋಮವಾರ ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ಈ ಬಾರಿಯೂ ದಸರಾ ಆಚರಣೆಯನ್ನು ಮಾಡಲಾಗುತ್ತದೆ. ಆ ವೇಳೆಗೆ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮುಗಿದಿರುತ್ತವೆ ಎಂದು ಅವರು ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ರಸ್ತೆ, ಚರಂಡಿ, ಕಟ್ಟಡ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ಅವರು ತಿಳಿಸಿದರು.
ಮನವಿ: ಕುಟುಂತ್ತಾ ಸಾಗಿರುವ ದೊಡ್ಡ ಅಂಗಡಿ ಬೀದಿಯ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಂಗಡಿಗಳ ಮಾಲೀಕರು ಸಚಿವರಿಗೆ ಮನವಿ ಮಾಡಿದರು. ವಿಳಂಬದಿಂದಾಗಿ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.
ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ ಮತ್ತು ರಥದ ಬೀದಿಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಲು ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂಗಡಿಗಳ ಮಾಲೀಕರು ಈ ಮನವಿ ಮಾಡಿದರು.
ಕೆಲವು ಕಡೆಗಳಲ್ಲಿ ಸರಿಯಾಗಿ ಕೆಲಸ ಆಗದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಪುಟ್ಟರಂಗಶೆಟ್ಟಿ, ಅದನ್ನು ಸರಿಪಡಿಸಿ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಥದ ಬೀದಿಯಲ್ಲಿ ನಗರೋತ್ಥಾನದಡಿಯಲ್ಲಿ ₹2.90 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆ ಸಂಕೀರ್ಣ ಕಾಮಗಾರಿ ಸ್ಥಳವನ್ನೂ ಅವರು ಪರಿಶೀಲಿಸಿದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ವ್ಯಾಪಾರ ಮಾಡುವವರಿಗೆ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ಸಚಿವರು, ‘ತಾತ್ಕಾಲಿಕವಾಗಿ ಮಾರಿಗುಡಿ ಬಳಿ ವ್ಯಾಪಾರ ಸ್ಥಳವನ್ನು ಸ್ಥಳಾಂತರ ಮಾಡಿ. ನಿಮಗೆ ಇದೇ ಜಾಗದಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡಿಕೊಡಲಿದ್ದೇವೆ’ ಎಂದು ಅಲ್ಲಿನ ವ್ಯಾಪಾರಿಗಳಿಗೆ ತಿಳಿಸಿದರು.
ತಾತ್ಕಾಲಿಕವಾಗಿ ವ್ಯಾಪಾರ ಮಾಡಲು ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದು ತರಕಾರಿ ವ್ಯಾಪಾರಿಗಳು ಕೋರಿದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನಗರಸಭೆ ಆಯುಕ್ತ ಎಂ.ರಾಜಣ್ಣ ಅವರಿಗೆ ಪುಟ್ಟರಂಗಶೆಟ್ಟಿ ಸೂಚಿಸಿದರು.
ಬಳಿಕ ನಗರದ ಬಿ. ರಾಚಯ್ಯ ಜೋಡಿರಸ್ತೆ ಕಾಮಗಾರಿ ಪರಿಶೀಲಿಸಿದರು. ರಾಮಸಮುದ್ರದಲ್ಲಿಯೂ ರಸ್ತೆ ಹಾಗೂ ಇತರೆ ಕಾಮಗಾರಿಗಳನ್ನು ಅವರು ವೀಕ್ಷಿಸಿದರು. ಇದೇ ವೇಳೆ ಹೊಸ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರು ಘಟಕಕ್ಕೆ ಸಚಿವರು ಭೂಮಿಪೂಜೆ ನೆರವೇರಿಸಿದರು.
ನಗರಸಭೆ ಅಧ್ಯಕ್ಷರಾದ ಶೋಭಾ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಸದಸ್ಯರಾದ ಚೆಂಗುಮಣಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತ್ಯಮೂರ್ತಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಡಿ.ಟಿ. ವಾಸುದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸ್ಗರ್ ಮುನ್ನಾ ಇದ್ದರು.
ತುರ್ತು ಕ್ರಮಕ್ಕೆ ಸೂಚನೆ
ಜಿಲ್ಲಾ ತರಬೇತಿ ಸಂಸ್ಥೆಯ ಮುಂಭಾಗದಲ್ಲಿರುವ ಶಿಥಿಲಗೊಂಡ ಒವರ್ ಹೆಡ್ಟ್ಯಾಂಕ್ ಬಗ್ಗೆ ತುರ್ತಾಗಿ ನಿರ್ಧಾರ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಪರ್ಯಾಯವಾಗಿ ಹೊಸ ಟ್ಯಾಂಕ್ ನಿರ್ಮಾಣ ಅಥವಾ ದುರಸ್ತಿ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು, ತುರ್ತಾಗಿ ನಿರ್ಧಾರ ಕೈಗೊಂಡು ಕಾಮಗಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಕರಿವರದರಾಜನ ಬೆಟ್ಟದ ಬಳಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ಕೊಟ್ಟರು. ಘಟಕದ ಬಳಿ ಇರುವ ಮಣ್ಣುಗುಡ್ಡೆಯನ್ನು ಸಮತಟ್ಟುಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.