ನೆರೆ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಒದಗಿಸಿ

7
ದಾಸನಪುರ ಗ್ರಾಮಸ್ಥರನ್ನು ಭೇಟಿ ಮಾಡಿದ ಸಚಿವರು, ಸಂಸದ

ನೆರೆ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಒದಗಿಸಿ

Published:
Updated:
Deccan Herald

ಕೊಳ್ಳೇಗಾಲ: ಇಲ್ಲಿನ ಬಿಸಿಎಂ ಹಾಸ್ಟೆಲ್‌ನಲ್ಲಿ ತೆರೆದಿರುವ ಗಂಜಿಕೇಂದ್ರದಲ್ಲಿ ಆಶ್ರಯ ಪಡೆದಿರುವ ದಾಸನಪುರ ಗ್ರಾಮಸ್ಥರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಿಕ್ಷಣ ಸಚಿವ ಎನ್‌. ಮಹೇಶ್‌ ಮತ್ತು ಸಂಸದ ಆರ್‌. ಧ್ರುವನಾರಾಯಣ ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರು.

ಸಂತ್ರಸ್ತರಿಗೆ ಗಂಜಿಕೇಂದ್ರದಲ್ಲಿ ಒದಗಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಸಂತ್ರಸ್ತರಿಗೆ ಧೈರ್ಯ ತುಂಬಿದರು.

‌ಉತ್ತಮ ವ್ಯವಸ್ಥೆಗೆ ಸೂಚನೆ: ಪುನರ್‌ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಉತ್ತಮ ಆಹಾರ ನೀಡಬೇಕು. ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಪುಟ್ಟರಂಗ ಶೆಟ್ಟಿ ಅವರು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ಸೂಚಿಸಿದರು.

ಬಟ್ಟೆ, ಹೊದಿಕೆ ಬೇಕು: ಬಟ್ಟೆ, ಹೊದಿಕೆ ಸೇರಿದಂತೆ ಕೆಲವು ವಸ್ತುಗಳನ್ನು ಒದಗಿಸುವಂತೆ ಸಂತ್ರಸ್ತರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. 

‘ನಾವು ಸ್ತ್ರೀಶಕ್ತಿ ಸಂಘದ ಮೂಲಕ ಸಾಲ ಪಡೆದಿದ್ದೇವೆ. ಅದನ್ನು ವಾರ ವಾರಕ್ಕೆ ಸಂದಾಯ ಮಾಡಬೇಕಿದೆ. ಅದನ್ನು ಬ್ಯಾಂಕುಗಳಿಗೆ ಪಾವತಿಸಬೇಕಾಗಿದೆ’ ಎಂದು ಹಲವು ಮಹಿಳೆಯರು ಹೇಳಿದರು.

‘ಪ್ರತಿ ಬಾರಿಯೂ ನದಿಯಲ್ಲಿ ನೀರು ಹೆಚ್ಚಾದಾಗ ನೆರೆ ಹಾವಳಿಗೆ ತುತ್ತಾಗುತ್ತಿದ್ದೇವೆ. ನಮಗೆ ಗ್ರಾಮದ ಹೊರಭಾಗದಲ್ಲಿ ನಿವೇಶನ ನೀಡಿ, ಶಾಶ್ವತ ಪರಿಹಾರ ಕಲ್ಪಿಸಬೇಕು. ಆಗ ಮಾತ್ರ ನಮ್ಮ ಕಷ್ಟ ಪರಿಹಾರವಾಗುತ್ತದೆ’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

‘ನಿಮ್ಮ ಜೊತೆಯಲ್ಲಿ ನಾವು ಸದಾ ಇದ್ದೇವೆ. ಯಾವುದಕ್ಕೂ ಭಯಪಡಬೇಡಿ. ನೀವು ಆರೋಗ್ಯದ ಕಡೆ ಗಮನ ಹರಿಸಿ. ಯಾರೂ ಕೂಡ ನಿಮ್ಮ ಗ್ರಾಮಗಳ ಬಗ್ಗೆ ಚಿಂತಿಸಬೇಡಿ. ನಿಮಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತೇವೆ. ಮನೆ ಕಳೆದುಕೊಂಡವರಿಗೆ ಸರ್ಕಾರ ವತಿಯಿಂದ ಮನೆ ಒದಗಿಸಿಕೊಡುತ್ತೇವೆ’ ಎಂದು ಪುಟ್ಟರಂಗಶೆಟ್ಟಿ ಭರವಸೆ ನೀಡಿದರು.

ಸಚಿವ ಎನ್.ಮಹೇಶ್ ಮಾತನಾಡಿ, ‘ಪ್ರವಾಹದಿಂದ ಆಗಿರುವ ಬೆಳೆ ಮತ್ತು ಮನೆ ಹಾನಿಗೆ ಪರಿಹಾರ ನೀಡಲಾಗುತ್ತದೆ. ಮನೆ ಹೊಸ ಮನೆಗಳನ್ನು ನಿರ್ಮಿಸಲಾಗುತ್ತದೆ. ನಿವೇಶನರಹಿತರಿಗೆ ನಿವೇಶನ ನೀಡಲೂ ಕ್ರಮ ಕೈಗೊಳ್ಳುತ್ತೇವೆ. ಯಾವುದಕ್ಕೂ ಆತಂಕ ಪಡಬಾರದು’ ಎಂದು ಸಾಂತ್ವನ ಹೇಳಿದರು.

ಶಾಸಕ ಆರ್‌.ನರೇಂದ್ರ, ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಮ್‌, ಪ್ರಭಾರ ತಹಶೀಲ್ದಾರ್ ಚಂದ್ರಮೌಳಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಡಿವೈಎಸ್‌ಪಿ ಪುಟ್ಟಮಾದಯ್ಯ, ಪಿಎಸ್‌ಐ ವೀಣಾನಾಯಕ್, ಆರೋಗ್ಯಾಧಿಕಾರಿ ಡಾ.ಗೋಪಾಲ್, ನಗರಸಭೆ ಪೌರಾಯುಕ್ತ ಸುರೇಶ್ ಇದ್ದರು.

ಜಲಾವೃತ ಗ್ರಾಮಗಳಿಗೆ ಭೇಟಿ

ಪ್ರವಾಹ ಭೀತಿ ಎದುರಿಸುತ್ತಿರುವ ಹರಳೆ, ಎಡಕುರಿಯ ಗ್ರಾಮಗಳಿಗೆ ಸಿ.ಪುಟ್ಟರಂಗಶೆಟ್ಟಿ, ಎನ್‌.ಮಹೇಶ್‌, ಆರ್‌.ಧ್ರುವನಾರಾಯಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಭರಚುಕ್ಕಿ ರಸ್ತೆಯಲ್ಲಿ ನಿರ್ಮಿಸಿರುವ ಸೇತುವೆ, ವೆಸ್ಲಿ ಸೇತುವೆ, ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಂಗಶೆಟ್ಟಿ, ‘ಜಲಾವೃತವಾಗಿರುವ ದಾಸನಪುರ ಗ್ರಾಮದ ಜನರನ್ನು ಕೊಳ್ಳೇಗಾಲದ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಬೇರೆ ಗ್ರಾಮಗಳು ನೆರೆಗೆ ತುತ್ತಾದರೆ, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದರು.

‘ನೀರಿನ ಪ್ರಮಾಣ ತಗ್ಗಿಸಲಾಗಿದೆ’

ಜಲಾಶಯಗಳಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವನ್ನು ಸ್ವಲ್ಪ ತಗ್ಗಿಸಲಾಗಿದೆ. ಇನ್ನೂ 2–3 ದಿನಗಳವರೆಗೆ ಮಾತ್ರ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಜನರು ಯಾವುದೇ ಭಯ ಪಡಬೇಕಿಲ್ಲ. ಸದ್ಯದಲ್ಲೇ ಪರಿಸ್ಥಿತಿ ತಿಳಿಯಾಗಲಿದೆ. ಬಳಿಕ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಲಾಗುತ್ತದೆ ಎಂದು ಆರ್.ಧ್ರುವನಾರಾಯಣ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !